Tuesday, July 21, 2020

ಕಪಿಲಿಪಿಸಾರ




ಪುಸ್ತಕ: ಕಪಿಲಿಪಿಸಾರ 
ಲೇಖಕ: ಡಾ|| ಕೆ ಎನ್ ಗಣೇಶಯ್ಯ 
ಬೆಲೆ: ೧೩೦
ಪ್ರಕಾಶನ: ಅಂಕಿತ ಪ್ರಕಾಶನ
ಮುದ್ರಣ: ಐದನೆಯ ಮುದ್ರಣ ೨೦೧೮

ಎಂದಿನಂತೆ ಗಣೇಶಯ್ಯನವರ ಈ ಕಾದಂಬರಿಯು ಪುರಾತನ ನಾಗರಿಕತೆಯ ಲಿಪಿಯಿಂದ ಶುರುವಾಗಿ, ರೋಚಕತೆಯಿಂದ ಮುಂದೆ ಏನು ಎಂದು ಓದಿಸಿಕೊಂಡು ಒಬ್ಬ ವಿಜ್ಞಾನಿಯ ಅನ್ವೇಷಣೆಯಲ್ಲಿ ಕೊನೆಗೊಳ್ಳುತ್ತದೆ. ಹಾಗೆಯೆ ಇದನ್ನು ಓದಬೇಕಾದರೆ ಎಷ್ಟೋ ಅನೇಕ ಹೊಸ ವಿಚಾರಗಳು ತಿಳಿಯುವುದಂತೂ ನಿಸ್ಸಂದೇಹ. ಅದು ಸಸ್ಯಶಾಸ್ತ್ರ, ಪುರಾತನ ಲಿಪಿ ಓದುವ ಬಗೆ, ಐತಿಹಾಸಿಕ ಶಾಸನಗಳು, ಚರಿತ್ರೆ, ಅಶ್ವಿನಿಗಳ ಮಾಹಿತಿ, ಪುರಾಣಗಳ ಉಲ್ಲೇಖ ಹೀಗೆ ಕಾದಂಬರಿ ಒಂದಕ್ಕೊಂದು ಬೆಸೆದುಕೊಂಡು ಪುಸ್ತಕವನ್ನು ಒಮ್ಮೆ ಓದಲು ಶುರು ಮಾಡಿದರೆ ಅಂತ್ಯದ ವರೆಗೆ ಒಂದೇ ಓಘದಲ್ಲಿ ಓದಿಸಿಕೊಂಡು ಹೋಗುತ್ತದೆ.

Rider Haggard's King Solomon's mines






ಪುಸ್ತಕ: ಕಿಂಗ್ ಸೊಲೊಮೋನ್ಸ್ ಮೈನ್ಸ್
ಲೇಖಕ: ರೈಡರ್ ಹಗ್ಗರ್ಡ್ 

ಹೆಸರೇ ಹೇಳುವಂತೆ ಇದೊಂದು ನಿಧಿ ಅರಸುವ ಸಾಹಸಮಯ  ಕಾದಂಬರಿಯಾಗಿದೆ. .  ಕಾದಂಬರಿಯು ಅಲ್ಲನ್ ಕ್ವಾರ್ಟರ್ಮ್ಯಾನ್ ಎಂಬ ಬೇಟೆಗಾರನ ದೃಷ್ಟಿಯಿಂದ ಉಲ್ಲೇಖಿತವಾಗಿದೆ.  ಕಾದಂಬರಿಯು ಅತಿ ರೋಚಕವಾಗಿದ್ದು, ಎಲ್ಲ ಸಾಹಸದಲ್ಲಿ ಓದುಗರು ಭಾಗಿಯಾಗಿದ್ದಾರೆ ಎಂಬಂತೆ ಭಾಸವಾಗುತ್ತದೆ. ಇದು ಚಲನಚಿತ್ರವಾಗಿಯೂ ತೆರೆ ಕಂಡಿದ್ದು ಬೇರೆ ಬೇರೆ ರೀತಿಗಳಲ್ಲಿ ಹಲವಾರು ಚಲನಚಿತ್ರಗಳು ಹೊರಬಂದಿದ್ದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.  

ಅದರಲ್ಲಿನ ಕೆಲ ಸಾಲುಗಳು ಹೀಗಿವೆ:

'ಒಂದು ಸಂಜೆ, ತುಂಬಾ ಬಳಲಿಕೆಯ ನಂತರ ಒಂದು ಗುಡ್ಡದ ಹತ್ತಿರ ಬಂದು ತಲುಪಿದೆವು. ಗುಡ್ಡದ ಬುಡದಲ್ಲಿ ನದಿಯ ಒಣಗಿದ ಪ್ರದೇಶದಲ್ಲಿ ಅಲ್ಲಲ್ಲಿ ಚಿಕ್ಕ ಪುಟ್ಟ ಶುದ್ಧ ನೀರಿನ ಹೊಂಡಗಳಿದ್ದವು. ಅದರ ಇನ್ನೊಂದು ಬದಿಗೆ ಹೋದ ನಂತರ ನಮಗೆ ಒಂದು ಜಿರಾಫೆಯ ಹಿಂಡು ಕಾಣಿಸಿತು. ಆ ಹಿಂಡು ನಮ್ಮನ್ನು ನೋಡಿದೊಡನೆ ಚದುರಿ ಹೋಯಿತು. ಅದು ಗುಂಡಿನ ಪರಿಮಿತಿಯನ್ನು ದಾಟಿದ್ದರೂ ಕೂಡ, ಕ್ಯಾಪ್ಟನ್ ಗುಡ್, ಕೊನೆಯ ಜಿರಾಫೆಗೆ ಗುಂಡು ಹಾರಿಸಿದ್ದನು. ಅದೃಷ್ಟವಶಾತ್ ಅದು ಜಿರಾಫೆಯ ಕತ್ತನ್ನು ಸೀಳಿದ್ದಲ್ಲದೆ, ಜಿರಾಫೆ ಆ ಸ್ಥಳದಲ್ಲಿಯೇ ಮೃತಪಟ್ಟಿತು '

ಮೌನ ಸಂಧಾನ




ಪುಸ್ತಕ: ಮೌನ ಸಂಧಾನ
ಲೇಖಕಿ: ಗೀತಾ ಕುಲಕರ್ಣಿ
ಪ್ರಕಾಶನ: ರಾಜಹಂಸ ಪ್ರಕಾಶನ ಧಾರವಾಡ
ಬೆಲೆ: ೪ ರೂ 
ಮುದ್ರಣ: ದ್ವಿತೀಯ ಮುದ್ರಣ, ೧೯೭೫

ಇದು ಹದಿಮೂರು ಚಿಕ್ಕ ಕಥೆಗಳುಳ್ಳ ಕಥಾ ಸಂಗ್ರಹ. ಎಲ್ಲಾ ಕಥೆಗಳೂ ನವಿರಾಗಿ ಹಾಗು ಸೊಗಸಾಗಿ ಮೂಡಿ ಬಂದಿದ್ದು ತುಂಬಾ ಅಪ್ಯಾಯಮಾನವಾದ ಅನುಭೂತಿ ನೀಡಬಲ್ಲವುಗಳಾಗಿವೆ. ಹೆಚ್ಚಿನ  ಕಥೆಗಳಲ್ಲಿ ಹೆಣ್ಣು ಕಥೆಯ ನಾಯಕಿಯಾಗಿದ್ದು , ಕಥೆಗಳು ಅಂತಃಕರಣದಿಂದ ಕೂಡಿವೆ. 'ಶಿವಣ್ಣ ಮಾಸ್ಟ್ರು ' ಕಥೆಯಲ್ಲಿ ಬರುವ ಪುಟ್ಟ ಹುಡುಗಿ ಮೃದುಲಾಳ ತೊದಲು ನುಡಿ, ' ಮೌನ ಸಂಧಾನ ' ದಲ್ಲಿ ಬರುವ ಲಲಿತ ಪಾತ್ರವೇ ಆಗಿರಲಿ, ಎಲ್ಲ ಕಥೆಗಳು ಹೆಣ್ಣಿನ ವಿವಿಧ ಪಾತ್ರಗಳ ಒಳಮನಸ್ಸನ್ನು ತೋರಿಸುವುದಲ್ಲದೆ ಕಥೆಗಳು ವಿಶಿಷ್ಟ ಚಿತ್ರಕ ಶಕ್ತಿಯಿಂದ ನಿರೂಪಿಸಿದ್ದರಿಂದ ಕಥೆಗಳು ಬಹುಕಾಲ ಮನಸ್ಸಿನಲ್ಲಿ ಉಳಿಯುವಂತಹವಾಗಿವೆ. 

Sunday, July 19, 2020

ನೆನಪು- ಸಿಹಿ ಕಹಿ




ಪುಸ್ತಕ: ನೆನಪು- ಸಿಹಿ ಕಹಿ
ಲೇಖಕಿ: ಡಾ: ಅನುಪಮಾ ನಿರಂಜನ 
ಪ್ರಕಾಶನ: ಡಿ ವಿ ಕೆ ಮೂರ್ತಿ , ಮೈಸೂರು 
ಬೆಲೆ: ೧೫೦
ಮುದ್ರಣ: ನಾಲ್ಕನೆಯ ಮುದ್ರಣ, ೨೦೧೯

ಇದು ಲೇಖಕಿಯ ಆತ್ಮಕಥೆ.  ತಮ್ಮ ಬಾಲ್ಯದ ದಿನಗಳು, ಕೌಟುಂಬಿಕ ಪರಿಸರ, ಬರವಣಿಗೆ ಶುರುವಾದ ದಿನಗಳು, ವೃತ್ತಿ ಜೀವನ, ಪ್ರೇಮ ವಿವಾಹ, ವೃತ್ತಿಯ ಜೊತೆಗೇ ಬರವಣಿಗೆಗೆ ನೀಡಿದ ಪ್ರಾಮುಖ್ಯತೆ, ಕೊನೆಗೆ ಕ್ಯಾನ್ಸರ್ ನಿಂದ ಬಳಲಿದ್ದು  ಹಾಗು ಈ ಎಲ್ಲ ಅಂಶಗಳಲ್ಲಿಯೂ ನುಸುಳುವ ಮತ್ತು ಪ್ರಭಾವ ಬೀರಿದ ಎಲ್ಲ ಮಹನೀಯರನ್ನೂ ಉಲ್ಲೀಖಿಸಿ ಕೃತಜ್ಞತೆ ಸಲ್ಲಿಸಿದ, ಸರಾಗವಾಗಿ ಓದಿಸಿಕೊಂಡು ಹೋಗುವ ಬರವಣಿಗೆ. 
ಆತ್ಮಕಥೆಯ ಬರವಣಿಗೆ ಬಗ್ಗೆ ಹೇಳಬೇಕಾದರೆ, ಲೇಖಕಿ ತುಂಬಾ ಪ್ರಾಮಾಣಿಕವಾಗಿ ತಮ್ಮ ಎಲ್ಲ ತಪ್ಪು ಒಪ್ಪಗಳನ್ನು ಚೊಕ್ಕಟವಾಗಿ ನಮೂದಿಸಿದ್ದಾರೆ. ಹಾಗೆಯೆ ಇದರಲ್ಲಿ, ಲೇಖಕಿ ಕಂಡಂತೆ  ಅನೇಕ ಗಣ್ಯಾತಿಗಣ್ಯ ಹಾಗು ಮೇರು ವ್ಯಕ್ತಿತ್ವಗಳಾದಂತಹ ಕೊಂಗಾಡಿಯಪ್ಪ, ಕುವೆಂಪು, ನಿರಂಜನ, ವಾಣಿ, ತ್ರಿವೇಣಿ, ಡಾಕ್ಟರ್ ಶಿವರಾಂ, ವೈದೇಹಿ, ಮಿನುಗು ತಾರೆ ಕಲ್ಪನಾ ಅವರಂತಹ ಒಡನಾಟದ ಕಿರುಪರಿಚಯವೂ ಅತಿ ಸ್ಪಷ್ಟವಾಗಿ ಬಿಂಬಿತವಾಗಿದೆ. 

ಚಿತಾದಂತ




ಪುಸ್ತಕ: ಚಿತಾದಂತ 
ಲೇಖಕರು: ಡಾ. ಕೆ ಎನ್ ಗಣೇಶಯ್ಯ 
ಪ್ರಕಾಶನ: ಅಂಕಿತ 
ಬೆಲೆ: ೧೫೦
ಮುದ್ರಣ: ನಾಲ್ಕನೇ ಮುದ್ರಣ, ೨೦೧೭

ಕಾದಂಬರಿ  ಹೆಸರಿಗೆ ತಕ್ಕಷ್ಟೇ ವಿಶಿಷ್ಟ ಹಾಗು ರೋಚಕ! ಕಾದಂಬರಿಯು ಇತಿಹಾಸದ ಎಳೆಯೊಂದರಿಂದ ಪ್ರಾರಂಭವಾಗಿ, ಜಗತ್ತೆಲ್ಲ ಸುತ್ತಿಸುವುದು ಕುತೂಹಲಕರ. ಕ್ರಿಸ್ತ ಪೂರ್ವದಿಂದ ಪ್ರಾರಂಭವಾಗಿ ೨೦೦೮ ಕ್ಕೆ ಬಂದು ನಿಲ್ಲುವುದು ಹಾಗು ಮುಂದೇನು ಎಂಬ ಕಾತರದಿಂದ ಓದಿಸಿಕೊಂಡು ಹೋಗುವುದರಲ್ಲಿ ನಿಸ್ಸಂದೇಹ.  ಇದರಲ್ಲಿ ಬರುವ ಪಾತ್ರ, ಸನ್ನಿವೇಶಗಳಿಗೆ ತಕ್ಕಂತೆ ಪೂರಕ ದಾಖಲೆ, ಚಿತ್ರ, ನಕಾಶೆಗಳನ್ನು ಒದಗಿಸುವುದರಿಂದ ಇದೊಂದು ನೈಜ ಘಟನೆಯೇ ಎಂಬಂತೆ ಭಾಸವಾಗುತ್ತದೆ. 

ಒಂದು ಇತಿಹಾಸದ ತುಣುಕನ್ನು ಈ ರೀತಿಯಾಗಿಯೂ ವಿಜೃಂಭಿಸಬಹುದೆಂದು ಲೇಖಕರು ಬರವಣಿಗೆಯಲ್ಲಿ ಚಿತ್ರಿಸಿದ್ದಾರೆ.  ಅಲ್ಲಲ್ಲಿ ಬರುವ ರೆಫರೆನ್ಸ್ ಗಳು ಇದೊಂದು ಇತಿಹಾಸದ ದಾಖಲೆ ಇರಬಹುದೇನೋ ಎಂದೆನಿಸುತ್ತದೆ. ಮುನ್ನುಡಿಯಲ್ಲೇ ಹೇಳುವಂತೆ ಕಥೆ ಯಾವಾಗಲು ಹೀಗೆಯೇ ಇರಬೇಕೆಂದು ಭಾವಿಸಬಾರದು ಎಂದು ಹೇಳುವುದರಿಂದ ಶುರುವಾಗಿ ಕಥೆ ಪೂರ್ಣವಾಗುವಷ್ಟರಲ್ಲಿ ಅನೇಕ ತಿರುವುಗಳನ್ನು ಪಡೆಯುತ್ತ ಓದುಗರನ್ನು ಪುಸ್ತಕ ಕೆಳಗಿಡದಂತೆ ಹಿಡಿದಿಡುವಲ್ಲಿ ಲೇಖಕರು ಯಶಸ್ವಿಯಾಗಿ ಗೆದ್ದಿದ್ದಾರೆ. 

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...