ಪುಸ್ತಕ: ಪೆರುವಿನ ಪವಿತ್ರ ಕಣಿವೆಯಲ್ಲಿ'
ಲೇಖಕಿ: ನೇಮಿಚಂದ್ರ
ಪ್ರಕಾಶನ: ನವಕರ್ನಾಟಕ ಪ್ರಕಾಶನ
ಬೆಲೆ: ೧೫೦
ಪುಸ್ತಕ ವಿಮರ್ಶೆ: 'ಪೆರುವಿನ ಪವಿತ್ರ ಕಣಿವೆಯಲ್ಲಿ'
ದಕ್ಷಿಣ ಅಮೇರಿಕ ಖಂಡದ ಪೆರು ದೇಶಕ್ಕೆ ಹೋದ ಪ್ರವಾಸದ ಬಗ್ಗೆ ಬರೆದಿರುವ ಈ ಪುಸ್ತಕದಲ್ಲಿ, ಕೇವಲ ಪ್ರವಾಸದ ಅನುಭವಗಳಷ್ಟೇ ಅಲ್ಲದೆ, ಅಲ್ಲಿಯ ಜನಜೀವನ, ಪೆರುವಿನ ಇತಿಹಾಸ, ಚರಿತ್ರೆ, ಸಂಸ್ಕೃತಿ, ಭೌಗೋಳಿಕ ವಿವರಣೆ, ಆಹಾರ ಪದ್ಧತಿ, ಕೃಷಿ, ಭಾಷೆ, ಪ್ರಸ್ತುತ ರಾಜಕೀಯ ವ್ಯವಸ್ಥೆ, ಹಣಕಾಸು ವ್ಯವಸ್ಥೆ ಎಲ್ಲವೂ ಉಲ್ಲೇಖಿತವಾಗಿದೆ. ಇದು ಲೇಖಕಿಯ ಹಲವು ವರ್ಷಗಳ ಪೂರ್ವತಯಾರಿಯ ಪರಿಣಾಮ. ವೀಸಾ ಪಡೆಯುವಾಗಿನ ಪರಿಸ್ಥಿತಿಯಿಂದ, ಒಂದು ಪ್ರದೇಶವನ್ನು ಭೇಟಿ ಕೊಡುವಾಗ ಏನೆಲ್ಲಾ ಅಭ್ಯಸಿಸಬೇಕು ಎಂದೂ ಪುಸ್ತಕದಲ್ಲಿ ಉಲ್ಲೇಖಿತವಾಗಿದೆ. ಈ ವಿವರಣೆ ತೀರ ಗಂಭೀರತೆಯಿಂದವೂ ಅಲ್ಲದೆ ಹಾಸ್ಯಮಿಶ್ರಿತವಾಗಿ ಅದಕ್ಕೆ ಸಂಭಂದಪಟ್ಟ ಘಟನೆಗಳನ್ನು ವಿವರಿಸುವುದರ ಮೂಲಕ ಓದುಗರನ್ನು ಕೂತಲ್ಲಿಂದಲೇ ಪೆರುವಿನ ದರ್ಶನವನ್ನು ಮಾಡಿಸುತ್ತದೆ. ಮೊಬೈಲು, ಜಿಪಿಎಸ್ ಇಲ್ಲವಾದಾಗಲೂ, ಒಂದು ಭಾಷೆ ಬಾರದ ದೇಶವನ್ನು ಯಾವೆಲ್ಲ ದೃಷ್ಟಿಕೋನಗಳಿಂದ ಅಭ್ಯಾಸ ಮಾಡಬಹುದು ಎಂಬುದಕ್ಕೆ ಪುಸ್ತಕ ಪ್ರೇರಣೆಯಾಗುತ್ತದೆ.
ಇಬ್ಬರು ವೈಮಾನಿಕ ವಿಜ್ಞಾನಿಗಳ(ಲೇಖಕಿ ಹಾಗು ಅವರ ಸಹೋದ್ಯೋಗಿ ) ಪ್ರವಾಸವು ವಿಮಾನ ನಿಲ್ದಾಣದಿಂದ ಶುರುವಾಗಿ, ಅಮೇರಿಕಾದಲ್ಲಿ ಕೆಲದಿನಗಳ ಅಲೆದಾಟವಾಗಿ ಅಲ್ಲಿನ ಮಿಯಾಮಿ ಪಟ್ಟಣದಿಂದ ಪೆರುವಿನ ರಾಜಧಾನಿಯಾದ ಲೀಮಾ ನಗರಕ್ಕೆ ಬರುತ್ತದೆ. ಈ ಪ್ರವಾಸಕಥನದ ವಿಶೇಷತೆಯೆಂದರೆ, ಹಲವು ವರ್ಷಗಳು ಪೆರು ದೇಶದ ಬಗ್ಗೆ ಅಧ್ಯಯನ ಮಾಡಿದರೂ ಈ ದೇಶಕ್ಕೆ ಬಂದಿಳಿಯುವ ತನಕವೂ ಯಾವುದೇ ಹೋಟೆಲ್ ಬುಕಿಂಗ್ ನಂತಹ ಪೂರ್ವಯೋಜನೆಯನ್ನು ಮಾಡದೇ ಇರುವುದು! ಲೀಮಾದಿಂದ ಅರಿಕೀಪಕ್ಕೆ ಬಸ್ ನಲ್ಲಿ ಆಂಡಿಸ್ ಪರ್ವತಗಳ ಮೂಲಕ ಪಯಣಿಸಿ ನಾಸ್ಕಾ ಲೈನ್ಸ್ ಗೆ ಭೇಟಿ ಕೊಟ್ಟು ಇದರ ಹಿಂದಿರುವ ಹಲವು ವಾದಗಳನ್ನು ಅಷ್ಟೇ ಸೊಗಸಾಗಿ ಮಂಡಿಸುತ್ತಾ ಜೊತೆಗೆ ಅನುಭವಗಳ ಪಾಕವನ್ನೂ ಉಣಬಡಿಸುತ್ತದೆ. ವಿಜ್ಞಾನಿ ಮರಿಯಾ ರೇಕಿಯ ಬಗ್ಗೆಯೂ ಮಾಹಿತಿ ಇದೆ. ಇಲ್ಲಿಂದ ಮುಂದೆ ಪುಸ್ತಕ, ಕುಸ್ಕೊ ಎಂಬ ಪುರಾತನ ನಗರಿಯತ್ತ ಹೊರಳುತ್ತದೆ. ಇದಕ್ಕೂ ಮೊದಲು ಪೆರುವಿನ ಇತಿಹಾಸ, ಸ್ಪ್ಯಾನಿಷರ ಆಕ್ರಮಣ, ಪೆರುವಿನ ಸಂಪತ್ತು ಲೂಟಿಯಾದ ಬಗೆ, ಅದಕ್ಕೂ ಮೀರಿ ಪೆರು ಬೆಳೆದು ಬಂದ ರೀತಿ, ಭಾರತ ಹಾಗು ಪೆರುವಿನಲ್ಲಿರುವ ಸಾಮ್ಯತೆ ಎಲ್ಲದರ ವಿವರಣೆ ದಕ್ಕುತ್ತದೆ. ಮುಂದೆ, ಪೆರುವಿನ ಪವಿತ್ರ ಕಣಿವೆ, ನೈಸರ್ಗಿಕ ಅದ್ಭುತವಾದ ಮ್ಯಾಚೂಪಿಚುವಿನ ವರ್ಣನೆ, ಜೊತೆಜೊತೆಗೆ ಪ್ರವಾಸಾನುಭವಗಳ ರಸದೌತಣ. ಪುಸ್ತಕದ ಕೊನೆಯ ಭಾಗವಾದ ಅಮೆಜಾನ್ ಕಾಡುಗಳ ಅನುಭವಕ್ಕಾಗಿ ಇಕಿಟಸ್ ಗೆ ಪಯಣ. ಅಮೆಜಾನ್ ನದಿಯ ಮೇಲೆ ತೆರೆದ ಬೋಟಿನಲ್ಲಿ ನೂರಾರು ಕಿಲೋಮೀಟರ್ಗಳ ಪಯಣವನ್ನು ಓದಿಯೇ ಸವಿಯಬೇಕು. ಅಲ್ಲಿನ ವಿಶಿಷ್ಟ ಪಿರಾನಾ ಮೀನು, ಅನಕೊಂಡ, ಸ್ಲೋತ್, ಗಿಡಮೂಲಿಕೆಗಳು, ಬುಡಕಟ್ಟು ಜನರ ಭೇಟಿಯನ್ನು ಓದಿಯೇ ಅನುಭವಿಸಬೇಕು.
ಆಯಾ ಪ್ರದೇಶದ ಕಿರುಪರಿಚಯ, ಜನರ ರೀತಿ ನೀತಿ, ಅವರ ಜೊತೆ ನಡೆಸುವ ಆಂಗಿಕ ಭಾಷೆ ಎಲ್ಲವೂ ಓದುಗರನ್ನು ಹಿಡಿದಿಡುತ್ತದೆ. ಪುಸ್ತಕವು ಬರಿ ಪ್ರವಾಸಕಥನವಾಗಿರದೆ ಪೆರು ದೇಶದ ಪರಿಚಯ ಪುಸ್ತಕವೂ ಎಂದೆನಿಸುತ್ತದೆ. ಓದಿದ ಬಳಿಕ ಅಲ್ಲಿಗೇ ಹೋಗಿ ಬಂದಷ್ಟು ತೃಪ್ತಿ ಅಥವಾ ಆ ದೇಶವನ್ನೊಮ್ಮೆ ನೋಡಬೇಕೆಂದೆನಿಸಿದರೆ ಅದು ಪುಸ್ತಕದ ಶಕ್ತಿ ಎಂದೇ ಹೇಳಬೇಕು!
ಅನುಪಮಾ ಕೆ ಬೆಣಚಿನಮರ್ಡಿ
೨೩-೪-೨೦೨೦

No comments:
Post a Comment