Friday, June 4, 2021

ಪುಸ್ತಕ: ಶಾಲಭಂಜಿಕೆ

 


ಪುಸ್ತಕ: ಶಾಲಭಂಜಿಕೆ

ಲೇಖಕ: ಡಾ|| ಕೆ ಎನ್ ಗಣೇಶಯ್ಯ 
ಬೆಲೆ: ೧೩೦
ಪ್ರಕಾಶನ: ಛಂದ ಪ್ರಕಾಶನ
ಮುದ್ರಣ: ೬

ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ ಕತೆಗಳೆನಿಸಿದರೂ, ಪುಸ್ತಕ ಓದಿದ ಮೇಲೆ ಸಾರ್ಥಕ ಎನಿಸುತ್ತದೆ. ಎಲ್ಲ ಕತೆಗಳೂ ಒಂದಕ್ಕಿಂತ ಒಂದು ವಿಭಿನ್ನ. ಗತಕಾಲದ ಶಿಲ್ಪ ಕಲೆ, ಜೇನುಹುಳುಗಳು, ಶಿಲಾಯುಗ, ಬೆಂಗಳೂರಿನ ವಿಭಿನ್ನ ತರ್ಕದ ಇತಿಹಾಸ, ಮೂತಿಹುಳುಗಳ ಪರಾಗತ್ಯಾಗ , ಕಾಫಿ ಬೀಜ!! ವಿಶೇಷವೆಂದರೆ ಲೇಖಕರೇ ಹೇಳುವಂತೆ, ಈ ಎಲ್ಲ ಕತೆಗಳೂ ಕಾಲ್ಪನಿಕವಲ್ಲ! ಕೆಲವು ಸತ್ಯದ ಎಳೆಯ ಮೇಲೆ ಕತೆ ಹೆಣೆದಿದ್ದಾರೆ. ಅದಕ್ಕೆ ಆಧಾರಗಳನ್ನೂ ಕತೆಯ ಕೊನೆಯಲ್ಲಿ ಉಲ್ಲೇಖಿಸಿದ್ದಾರೆ. ತುಂಬಾ ರೋಚಕವಾಗಿ ಓದಿಸಿಕೊಂಡು ಹೋಗುತ್ತದೆ. ಕೆಲ ಕತೆಗಳ ಕೊನೆ ಒಂದೇ ರೀತಿ ಎನಿಸಿದರೂ, ಕಥಾವಸ್ತುಗಳು ವಿಶಿಷ್ಟವಾಗಿದ್ದು ಬೇರೆ ಬೇರೆ ಇರುವುದರಿಂದ ಅದು ಗೌಣವಾಗುತ್ತದೆ! 

Monday, May 17, 2021

ಪುಸ್ತಕ: ಕೆಂಪು ಜುಟ್ಟಿನ ಹುಂಜ

 



ಪುಸ್ತಕ: ಕೆಂಪು ಜುಟ್ಟಿನ ಹುಂಜ

ಲೇಖಕ: ವಿಕ್ತರ್ ವಾಷ್ದಯೆವ್
ಚಿತ್ರಗಳು: ಕೆ. ಅವ್ಚಿನ್ನಿಕೊವ್
ಕನ್ನಡ ಅನುವಾದ: ಕೆ ಎಲ್ ಗೋಪಾಲಕೃಷ್ಣ ರಾವ್
ಪ್ರಕಾಶನ: ರಾದುಗ ಪ್ರಕಾಶನ, ಮಾಸ್ಕೋ

ಬಹುಶಃ ಇದು, ನಾನು ಓದಿದ ಮೊಟ್ಟ ಮೊದಲ ಮಕ್ಕಳ ಸಚಿತ್ರ ಪುಸ್ತಕ! ನಾನು ಹುಟ್ಟುವುದಕ್ಕೂ ಮೊದಲು ತಂದಿದ್ದು, ಅಣ್ಣ, ಅಕ್ಕ ಓದಿದ ನಂತರ ನನ್ನ ಬಾರಿ. ಇದರಲ್ಲಿರುವ ಚಿತ್ರಗಳು ಎಷ್ಟು ಆಕರ್ಷಕವಾಗಿವೆ ಎಂದರೆ, ನಾನು ಪ್ರತಿ ಬೇಸಿಗೆ ರಜೆಯಲ್ಲಿ ತಪ್ಪದೆ ಓದುತ್ತಿದ್ದೆ. ಈಗಲೂ ಈ ಪುಸ್ತಕ ಕಂಡಿತೆಂದರೆ ಚಿತ್ರಗಳನ್ನು ನೋಡುತ್ತ ಕುಳಿತು ಬಿಡುತ್ತೇನೆ. ಕಥೆಯಲ್ಲಿರುವ ಮಾಂತ್ರಿಕ ಅಜ್ಜಿ ತರಹ ನನ್ನ ಹತ್ತಿರವೂ ಸಿಹಿಗಡಬು ಕೊಡುವ ಬೀಸುವ ಕಲ್ಲು ಇತ್ತೆಂದರೆ ಎಂದು ಊಹಿಸಿಕೊಳ್ಳುತ್ತೇನೆ😃 
ಕತೆಯಲ್ಲಿ ಇಬ್ಬರು ಅನಾಥ ಮಕ್ಕಳು ಸಾಕಿದ ಕೆಂಪು ಜುಟ್ಟಿನ ಹುಂಜದ ಸಾಹಸಗಾಥೆ ಇದೆ. ಒಟ್ಟು ೨೦ ಪುಟಗಳು ಹಾಗೂ ೧೦ ವರ್ಣರಂಜಿತ ಚಿತ್ರಗಳಿವೆ.
ಈ ಪುಸ್ತಕದ ಬೆಲೆಯನ್ನು ನಮೂದಿಸಿಲ್ಲ. ಪುಸ್ತಕವನ್ನು ಯಾವುದೋ ಪುಸ್ತಕ ಮೇಳದಲ್ಲಿ ಕೊಂಡು ತಂದಿದ್ದಾರೆ ಅಂತ ತಂದೆಯವರು ಹೇಳಿದರು. 




Thursday, May 6, 2021

ಪುಸ್ತಕ:ರಂಗ ಕೈರಳಿ



 ಪುಸ್ತಕ:ರಂಗ ಕೈರಳಿ

ಲೇಖಕ: ಕಿರಣ್ ಭಟ್
ಬೆಲೆ: ೧೫೦
ಪ್ರಕಾಶನ: ಬಹುರೂಪಿ

ಪುಸ್ತಕವು ಕೇರಳದ ಪ್ರವಾಸ ಕಥನವಾಗಿದ್ದು, ತುಂಬಾ ಕುತೂಹಲಕಾರಿಯಾಗಿ ಓದಿಸಿಕೊಂಡು ಹೋಗುತ್ತದೆ. ಏಕೆಂದರೆ ಇದು ಎಲ್ಲ ಪ್ರವಾಸ ಕಥನಗಳಂತಿರದೆ ಸ್ವಲ್ಪ ವಿಶಿಷ್ಟವಾಗಿದ್ದು, ಲೇಖಕರ ನಾಟಕ ಪ್ರೀತಿಯಿಂದ ನಾಟಕಗಳನ್ನು ನೋಡುವ ಸಲುವಾಗಿ ಇಡೀ ಕೇರಳವನ್ನು ಪರಿಚಯಿಸುವ ಪರಿ ಸೊಗಸಾಗಿದೆ. ಅದಕ್ಕೇ ಪುಸ್ತಕದ ಹೆಸರು 'ರಂಗ ' ಕೈರಳಿ. ಕೇರಳವೆಂದರೆ ಓಣಂ ಅಥವಾ ಹಿನ್ನೀರಿನ ಹಡಗು ಮನೆ ಎಂದುಕೊಳ್ಳುವವರಿಗೆ ಈ ಪುಸ್ತಕ ಕೇರಳದ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ. ಇದು ಅವಧಿ ಡಿಜಿಟಲ್ ಮ್ಯಾಗಝಿನ್ ಗೆ ಬರೆದ ಅಂಕಣಗಳ ಸಂಕಲನವೂ ಹೌದು. 
ಪುಸ್ತಕದಲ್ಲಿ ಕೇರಳದ ಪರಿಚಯದ ಜೊತೆ ಜೊತೆಗೆ ವಿವಿಧ ಪ್ರಕಾರದ ನಾಟಕಗಳ ಸಂಕ್ಷಿಪ್ತ ಪರಿಚಯವೂ ಇದೆ. ಚವಿಟ್ಟು ನಾಡಕಮ್ ಎನ್ನುವ ವಿಶಿಷ್ಟ ಬಗೆಯ ಹೆಜ್ಜೆ ಹಾಕುತ್ತ ಮಾಡುವ ನಾಟಕ, ಮೋಹಿನಿಯಾಟ್ಟಂ, ಕೇರಳ ಕಲಾಮಂಡಲಂ ಬಗ್ಗೆ ಬರೆದಿದ್ದು, ITFOK , ಓಟ್ಟಂತುಳ್ಳಲ್, ಕಥಕ್ಕಳಿ, ಅಟ್ಟಕಥಾ, ತೆಯ್ಯಮ್ ಹಾಗು ಹತ್ತು ಹಲವಾರು ನಾಟಕಗಳ ಕಥೆಯ ಚಿಕ್ಕ ವಿವರ. ನಾಟಕಪ್ರಿಯರಿಗಂತೂ ಇದು ಅಮೂಲ್ಯ ದಾಖಲೆಯ ಪುಸ್ತಕ. ಇಷ್ಟೆಲ್ಲಾ ಸಂಗತಿಗಳು ಇದ್ದರೂ ಲೇಖಕರು ಇನ್ನೂ ಭಾವನಾತ್ಮಕವಾಗಿ, ವಿವರವಾಗಿ ಬರೆದಿದ್ದರೆ ಅತ್ಯಾಕರ್ಷಕವಾಗಿರುತ್ತಿತ್ತು  ಎಂದೆನಿಸಿದ್ದು ಸುಳ್ಳಲ್ಲ. 
ಪುಸ್ತಕದ ಮುಖಪುಟ ತುಂಬಾ ಆಕರ್ಷಕವಾಗಿದ್ದು , ಅನ್ಯ ಪುಸ್ತಕಗಳಿಗೆ ಹೋಲಿಸಿದರೆ ಪುಸ್ತಕವು ಸ್ವಲ್ಪ ದೊಡ್ಡದೇ ಇದೆ. ಇಡೀ ಪುಸ್ತಕದಲ್ಲಿ ಸಾಕಷ್ಟು ಚಿತ್ರಗಳಿದ್ದು, ಪ್ರತಿ ಪುಟದ ಫೂಟರ್ ನಲ್ಲಿ ಒಂದು ಚಿತ್ರವಿದೆ! ಪರಿವಿಡಿಯನ್ನು ಸ್ಪಾಟ್ ಲೈಟ್ ಅಂತ ಉಲ್ಲೇಖಿಸಿದ್ದಾರೆ!
ಒಟ್ಟಾರೆ ಕೇರಳಕ್ಕೆ ಭೇಟಿ ನೀಡುವ ಮುನ್ನ ಈ ಪುಸ್ತಕ ಓದಿದ್ದರೆ ಖಂಡಿತವಾಗಿ ಒಂದೆರಡು ನಾಟಕ ನೋಡಿ ಬರುವ ಹಾಗೆ ಮನಸ್ಸು ಪರಿವರ್ತನೆಯಾಗುತ್ತದೆ

Saturday, May 1, 2021

ಮೋಹನಸ್ವಾಮಿ e-book

 



ಪುಸ್ತಕ:  ಮೋಹನಸ್ವಾಮಿ  e-book, MyLang app

ಲೇಖಕ: ವಸುಧೇಂದ್ರ 
ಬೆಲೆ: 119
ಪ್ರಕಾಶನ: ಛಂದ ಪ್ರಕಾಶನ
ಮುದ್ರಣ: 5, 2017

ಪುಸ್ತಕವು 12 ಕಥೆಗಳನ್ನು ಒಳಗೊಂಡಿದ್ದು ಎಲ್ಲವೂ ಮನಮುಟ್ಟುವಂತಿವೆ.  ವಿಭಿನ್ನ ಕಥಾವಸ್ತುಗಳನ್ನು ಹೊಂದಿದ್ದರೂ ಪುಸ್ತಕ ಜನಪ್ರಿಯಗೊಂಡಿದ್ದು  ಗೇ ಬಗ್ಗೆ ಬರೆದಿದ್ದರಿಂದ! ಹಾಗು ಈ ಕಥಾವಸ್ತುಗಳಿರುವ ಕಥೆಗಳು ತುಂಬಾ ಹೃದಾಯಾತ್ಮಕವಾಗಿ ಚಿತ್ರಿಸಲ್ಪಟ್ಟಿವೆ. ಉಳಿದ ಕಥೆಗಳಲ್ಲಿ ಕೆಲವು ಸಾಮಾಜಿಕ ಜಾಲತಾಣ ಬಗ್ಗೆ ಇದ್ದರೆ, ಇನ್ನುಳಿದವು ಸಹಜ ಉದ್ಯೋಗಸ್ಥ ಮಹಿಳೆಯ ಬಗ್ಗೆ. ಪುಸ್ತಕದಲ್ಲಿ ಒಂದು ಪೌರಾಣಿಕ ಕಥೆಯು ಇದ್ದು ದ್ರೌಪದಿಯ ಸ್ವಗತವನ್ನು ಚೆನ್ನಾಗಿ ಬಿಂಬಿಸಿದೆ. ತಗಣಿ ಕಥೆ ಕೂಡ ತುಂಬಾ ಮನಸ್ಸಿಗೆ ತಟ್ಟುವಂತದ್ದು. 
ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ಜಗತ್ತು ಬರೆಯಲು ಹಿಂಜರಿಯುವ ಕಥೆಗಳನ್ನು ಲೇಖಕರು ಅದ್ಭುತವಾಗಿ ಬರೆದಿದ್ದಾರೆ. ಒಮ್ಮೆ ಓದಬೇಕಾದ ಪುಸ್ತಕ. 

Sunday, April 11, 2021

ಬಣ್ಣ!!

 


ಕಣ್ಣಿಗೆ ಕಾಣುವ ಬಣ್ಣ ಚಂದವೂ ಇರಬಹುದು, ರೌದ್ರವೂ ಇರಬಹುದು! 
ಮನಸಿನ ಬಣ್ಣ ನೀರಿನ ಬಣ್ಣದಂತೆಯೂ ಇರಬಹುದು, ಗಾಳಿಯ ಬಣ್ಣದಂತೆಯೂ ಇರಬಹುದು!
ಒಬ್ಬರಿಗೆ ಕಾಣಿಸಿದ ಬಣ್ಣ ಇನ್ನೊಬ್ಬರಿಗೆ ಬೇರೆಯಾಗಿಯೂ ಕಾಣಿಸಬಹುದು!
ತನ್ನ ಬಣ್ಣ ಇತರರಿಗೆ ತೋರಿಸದೆಯೂ ಇರಬಹುದು!
ತಾನು ಕಾಣಬಯಸಿದ ಬಣ್ಣ, ಬಣ್ಣ ತಿರುಗಿಸಲೂಬಹುದು!
ತನ್ನಲ್ಲಿ ಹುದುಗಿರುವ ಬಣ್ಣ ತನಗೇ ಕಾಣಿಸದೆ ಇರಬಹುದು!!

Wednesday, April 7, 2021

ಪುಸ್ತಕ: ಕೆನ್ನಾಯಿಯ ಜಾಡಿನಲ್ಲಿ


 ಪುಸ್ತಕ: ಕೆನ್ನಾಯಿಯ  ಜಾಡಿನಲ್ಲಿ 

ಲೇಖಕರು: ಕೃಪಾಕರ್ ಮತ್ತು ಸೇನಾನಿ 
ಬೆಲೆ:೧೬೨
ಪ್ರಕಾಶನ: ಪುಸ್ತಕ ಪ್ರಕಾಶನ 



'ಕೆನ್ನಾಯಿ.. ' ಪುಸ್ತಕವು ಅದ್ಭುತವಾಗಿ ಬರೆಯಲ್ಪಟ್ಟಿದೆ. ಇದು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಅಂಕಣಗಳ ಸಂಗ್ರಹ.  ಮುಖ್ಯವಾಗಿ ಇದರಲ್ಲಿ ಕಾಡು ನಾಯಿಗಳ ಬಗ್ಗೆ ಬರೆದಿದ್ದರೂ,  ಕಾಡಿನಲ್ಲಿ ಅನುಭವಿಸಿದ ಇತರ ರೋಚಕ ಕಥೆಗಳೂ ಇವೆ.  ಹಿಂದೆಯೂ ಕೂಡ ಕೆನೆತ್ ಆಂಡರ್ಸನ್ ಅವರ  ಹೊಳಲ್ಕೆರೆಯ ನರಭಕ್ಷಕದಲ್ಲಿ ಕಾಡಿನ ಅನುಭವಗಳನ್ನು ಓದಿದ್ದರೂ ಅದು ಒಬ್ಬ ಬೇಟೆಗಾರನ ದೃಷ್ಟಿಕೋನದಲ್ಲಿತ್ತು. ಆದರೆ ಈ ಪುಸ್ತಕದಲ್ಲಿ ಇಬ್ಬರು ಸಂಶೋಧಕರ  ಅನುಭವ ಓದಿದ ಮೇಲೆ, ಮುನ್ನುಡಿಯಲ್ಲಿ ತೇಜಸ್ವಿ ಹೇಳಿದ್ದಂತೆ ಕಾಲ್ಪನಿಕದಂತೆಯೂ ಅನಿಸಿದೆ ಏಕೆಂದರೆ ಸಾಮಾನ್ಯ ಮನುಷ್ಯರಿಗೆ ಕಾಡು ಎನ್ನುವುದು ಕಾಲ್ಪನಿಕವೇ ಸರಿ! ಇದರಲ್ಲಿ ಆನೆ ಅಟ್ಟಿಸಿಕೊಂಡು ಬಂದ ಪ್ರಸಂಗ ಓದಿದಾಗ ನಗು ಉಕ್ಕಿದರೂ ಅದೆಷ್ಟು ಗಂಭೀರವಿತ್ತೆಂದೂ ಅನಿಸಿದ್ದಿದೆ. ಓದಿದಷ್ಟು ಮತ್ತೆ ಮತ್ತೆ ಕಾಡಿನಲ್ಲಿ ಕಳೆದು ಹೋಗುವ ಇನ್ನಷ್ಟು ಬರೆಯಬಾರದಿತ್ತೇ ಎಂದೆನಿಸಿತು. ಇದರಲ್ಲಿ ಉಲ್ಲೇಖಿಸಿರುವ ಪಕ್ಷಿಗಳು, ಕಾಡು ಕುರುಬರು , ಕಾಡು ನಾಯಿಗಳ ಹೊರತು ಇತರ  ವನ್ಯ ಜೀವಿಗಳ ನಡವಳಿಕೆಗಳು ಎಲ್ಲವೂ ಅತ್ಯಮೂಲ್ಯ ದಾಖಲೆಗಳಾಗಿವೆ. 
ಪುಸ್ತಕ ಓದಿದ ನಂತರ, ಲೇಖಕರ ಗ್ರೀನ್ ಆಸ್ಕರ್ ಪ್ರಶಸ್ತಿ ಪಡೆದಿರುವ  'wild dog diaries' documentary ಅನ್ನು ಯು ಟ್ಯೂಬ್ ಅಲ್ಲಿ ಸಾಧ್ಯವಾದರೆ  ನೋಡಿ.  ಹುಲಿ, ಸಿಂಹಗಳ ಅಧ್ಯಯನಕ್ಕಿಂತಲೂ ಕೆನ್ನಾಯಿಗಳ ಅಧ್ಯಯನ ಎಷ್ಟು ಕ್ಲಿಷ್ಟ ಎಂದು ಮನದಟ್ಟಾಗುತ್ತದೆ. ಇದನ್ನು ಓದುವ ವರೆಗೆ ನನಗೆ ಕೆನ್ನಾಯಿಗಳ ಬಗ್ಗೆ ಹೆಚ್ಚು ಆಸಕ್ತಿಯಿರಲೇ ಇಲ್ಲ. ಪುಸ್ತಕ ಕೆನ್ನಾಯಿಗಳ ಬಗ್ಗೆ ಪ್ರೀತಿ ಹುಟ್ಟಿಸಿತು!

Friday, April 2, 2021

ತಿಂಡಿ : ಬ್ರೆಡ್ ಮಿಸ್ಸಳ್

 





ತಿಂಡಿ : ಬ್ರೆಡ್ ಮಿಸ್ಸಳ್ 

ಊರು : ಗಡಿಂಗ್ಲಜ್ , ಮಹಾರಾಷ್ಟ್ರ   
ಸ್ಥಳ : ಸಮೃದ್ಧಿ ಮಿಸ್ಸಳ್ ಹೋಟೆಲ್ 
ವಿಳಾಸ: ಚರ್ಚ್ ರಸ್ತೆ, ಸೆಂಟ್ ಅಂಥೋನಿ ಚರ್ಚ್ ಎದುರಿಗೆ 
ಬೆಲೆ : ೪೫ 

ಅದೊಂದು ಸುಂದರ ಸಂಜೆ! ಆಗ ತಾನೇ ಕೊಕ್ಕರೆಗಳ ಹಿಂಡು ತಮ್ಮ ತಮ್ಮ ಗೂಡುಗಳಿಗೆ ಹಿಂದಿರುಗುತ್ತಿವೆ. ಬೀದಿ ಬದಿಯ ವ್ಯಾಪಾರಿಗಳು ತಮ್ಮ ಅಳಿದುಳಿದ ಅವತ್ತಿನ ಸರಕನ್ನು ಖಾಲಿ ಮಾಡಲು ಹವಣಿಸುತ್ತಿದ್ದಾರೆ. . ಅಲ್ಲೊಬ್ಬ ಅಜ್ಜಿ ಆಗ ತಾನೇ ಬಜ್ಜಿ ತಯಾರಿಸಲು ಹಿಟ್ಟು ಕಲಿಸಿಟ್ಟು ಎಣ್ಣೆ ಕಾಯುವುದನ್ನೇ ನೋಡುತ್ತಾ ನಿಂತಿದ್ದರೂ ಗ್ರಾಹಕರ ಆಗಮನವನ್ನೂ ನಿರೀಕ್ಷಿಸುತ್ತಿದ್ದಾಳೆ. ಕಿರಾಣಿ ಅಂಗಡಿಯವನಿಗೆ ಸಂಜೆ ಆಗಿದ್ದರ ಅರಿವೇ ಇಲ್ಲ. ಇತ್ತ ಟೈರ್ ಪಂಚರ್ ತೆಗೆಯುವ ಅಜ್ಜನಿಗೆ ಯಾವ ಧಾವಂತವೂ ಇಲ್ಲದೆ ಬೀಡಿ ಸೇದುತ್ತಾ, ನೀರಿನಲ್ಲಿ ಮುಳುಗಿಸಿದ ಟಯೆರ್ ನಿಂದ ಏಳುವ ಗುಳ್ಳೆಗಳನ್ನೇ ದಿಟ್ಟಿಸುತ್ತಿದ್ದಾನೆ. ಅಲ್ಲೊಂದು ಹದಿಹರೆಯದ ಹುಡುಗರ ಗುಂಪು ಚಹಾ ಕುಡಿಯುವ ನೆಪದಲ್ಲಿ ಬಳೆ ಅಂಗಡಿಗೆ ಬರುವ ಹುಡುಗಿಯರನ್ನು ಕದ್ದು ನೋಡುತ್ತಿದ್ದಾರೆ. ಇವೆಲ್ಲದಕ್ಕೆ ಸಾಕ್ಷಿಯಾಗುತ್ತ ನಮ್ಮ ಅವೆಂಜರ್ ಗಾಡಿಯು ಒಂದು ಮಿಸ್ಸಳ್ ಹೋಟೆಲಿನ ಮುಂದೆ ಬಂದು ನಿಂತಿತು. ಕೂಡಲೇ ಮೂಗಿಗೆ ಮಾಸ್ಕ ಧರಿಸಿ ಪೂರ್ತಿ ಖಾಲಿಯಿದ್ದ ಹೋಟೆಲಿಗೆ ನುಗ್ಗಿದೆ. ಈ ಊರಿನ ವಿಶೇಷ ತಿಂಡಿ ತಿನ್ನಲು ನನ್ನ ನಾಲಿಗೆ ಕಾಯುತ್ತಿತ್ತು. ಚೀಸ್ ಮಿಸ್ಸಳ್, ಬೆಣ್ಣೆ ಮಿಸ್ಸಳ್, ಪನೀರ್ ಮಿಸ್ಸಳ್, ತರಕಾರಿ ಮಿಸ್ಸಳ್ ಇತ್ಯಾದಿ ಇದ್ದರೂ ನಾನು ಸಾಮಾನ್ಯ ಮಿಸ್ಸಳ್ ತಿನ್ನಲು ಇಷ್ಟಪಟ್ಟೆ. ಕ್ಷಣಮಾತ್ರದಲ್ಲಿ ಒಂದು ದೊಡ್ಡ ತಟ್ಟೆಯಲ್ಲಿ ಮಿಸ್ಸಳ್ ಇರುವ ತುಸು ದೊಡ್ಡದೇ ಬಟ್ಟಲು, ಒಂದು ಚಿಕ್ಕ ಬಟ್ಟಲಿನಲ್ಲಿ ಮೊಸರು, ಬೀಟ್ ರೂಟ್ ತುಂಡುಗಳು, ಹೆಚ್ಚಿದ ಈರುಳ್ಳಿ, ನಿಂಬೆಹಣ್ಣಿನ ಹೋಳು, ಒಂದು ಚಿಕ್ಕ ಗಾಜಿನ ಗ್ಲಾಸಿನಲ್ಲಿ ಕೊಂಕಣಿ ರೀತಿಯ ಸೋಲ್ ಖಡಿ (ಮಜ್ಜಿಗೆ ಸೋಲ್ ಖಡಿ ) ಬಂತು. ಬಹುಷಃ ಇಲ್ಲಿಯ ಆಹಾರ  ಹೆಚ್ಚು ಖಾರ ಮತ್ತು ಮಸಾಲೆ ಇರುವುದರಿಂದ ಸೋಲ್ ಖಡಿ ಅವಶ್ಯಕ ಅನಿಸುತ್ತೆ. ಎರಡೆರಡು ಬ್ರೆಡ್ಡು ಮಿಸ್ಸಳ್ ನಲ್ಲಿ ಅದ್ದಿ ತಿಂದು ಹತ್ತು ನಿಮಿಷವಾಗಿರಲಿಲ್ಲ, ಒಂದು ಚಿಕ್ಕ ತಾಮ್ರದ ಬಕೇಟಿನಲ್ಲಿ ಮಿಸ್ಸಳ್ ತಂದಿಟ್ಟರು! ಮತ್ತೆ ಬ್ರೆಡ್ಡು ಬೇಕೇನು ಎಂದು ಕೇಳಿದ್ದಕ್ಕೆ, ನಾಲಿಗೆ ಮೆದುಳು ಆಗಲೇ ಒಂದು ಹಂತದಲ್ಲಿ ಏನೋ ತೀರ್ಮಾನಕ್ಕೆ ಬಂದಿದ್ದು, ನನ್ನ ಅನುಮತಿಯನ್ನು ಕಾಯದೆ ಕತ್ತು ತನ್ನಷ್ಟಕ್ಕೆ ತಾನೇ ಅಲ್ಲಾಡಿ ಬ್ರೆಡ್ಡು ಬೇಕು ಎಂದಿತ್ತು! ಆ ಖಾರಕ್ಕೆ ಕಣ್ಣಲ್ಲಿ ನೀರು ತುಂಬಿ ಬಂದರೂ ತಣ್ಣನೆಯ  ಸೋಲ್ ಖಡಿ ಆಗಾಗ  ಸ್ವಲ್ಪ ಸಮಾಧಾನಗೈಯುತ್ತಿತ್ತು! ಮಿಸ್ಸಳ್ ಪೂರ್ತಿ ಖಾಲಿಯಾದಾಗ ಮನಸ್ಸು, ಹೊಟ್ಟೆ ತುಂಬಿತ್ತು. 

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...