ಜಿರಳೆ ರಗಳೆ :
"ಅಮ್ಮಾ ,, ಅಮ್ಮಾ ... ಬನ್ನಿ.. ದೊಡ್ಡ ಬವ್ವಾ ..ಬನ್ನಿ .. ಬವ್ವಿ ... " ಎಂದು ನನ್ನ ಮಗ ಪ್ರಣವ್ ಹೊರಗೆ ವರಾಂಡದಿಂದ ಕೂಗಿಕೊಳ್ತಾ ಇದ್ದ. ಇನ್ನೂ ಮೂರು ವರ್ಷ ತುಂಬಿರದ ಅವನ ಭಾಷೆಯಲ್ಲಿ "ಬವ್ವಾ " ಎಂದರೆ ಹುಳ! ಅವನೇನೋ ಜೇಡ ನೋಡಿರಬೇಕು ಎಂದುಕೊಂಡು ನಾನು ಧಾವಿಸಿ ಪ್ರಣವ್ ಇದ್ದಲ್ಲಿಗೆ ಬಂದೆ. ನನ್ನ ಪುಟ್ಟ ಕಂದಮ್ಮ ಕುರ್ಚಿ ಮೇಲೆ ಹತ್ತಿ ಕುಳಿತು ಆ ಬವ್ವಾವನ್ನೇ ನೋಡ್ತಾ ಇದ್ದ. ನಾನು ಬಂದ ರಭಸಕ್ಕೆ ಬವ್ವಾವಿಗೂ ನಾನು ಬಂದಿದ್ದರ ಸುಳಿವು ದೊರೆತು ನನ್ನೆಡೆಗೆ ತಿರುಗಿತ್ತು. ನೋಡ್ತೇನೆ, ಅದು ಜೊಂಡಿಗ್ಯಾ ಅಲಿಯಾಸ್ ಜಿರಳೆ! ನನ್ನ ಹಳೆಯ ಶತ್ರು (ಬಹುಪಾಲು ಜನರಿಗೆ ಅದು ಶತ್ರುವೇ ) ನನ್ನನ್ನೇ ನೋಡುತ್ತಾ ಮೀಸೆಯನ್ನು ಒಂದು ಮೇಲೆ ಒಂದು ಕೆಳಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತ "ನೀನೋ ನಾನೋ ? ನೋಡಿಯೇ ಬಿಡೋಣ " ಎನ್ನುವಂತಿತ್ತು. ನನ್ನ ಮಗ ಸಾಮಾನ್ಯವಾಗಿ ಬವ್ವಾ ಪ್ರೇಮಿಯಾಗಿದ್ದರೂ (ನನ್ನಿಂದ ಬಂದ ಗುಣ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಇಚ್ಛಿಸುತ್ತೇನೆ) ಕೂಡ ಜಿರಲೆಯ ಗಾತ್ರ ಹಾಗು ಅದರ ವೇಗವನ್ನು ನೋಡಿ ಹೆದರಿ ಕುರ್ಚಿಯೇರಿ ಕುಳಿತಿದ್ದ. ಇನ್ನು ಅದನ್ನು ಹಾಗೇ ಬಿಟ್ಟರೆ ಮನೆಯೊಳಗೇ ನುಗ್ಗಿ ವಂಶಾಭಿವೃದ್ಧಿ ಮಾಡುತ್ತೆ, ಹಾಗಂತ ಅದನ್ನು ಕೊಲ್ಲಲು ಹೋದರೆ ನನ್ನ ಮಗ ಅದನ್ನೇ ಕಲಿತು ಬಿಡುತ್ತಾನೆ. ಇನ್ನೇನು ಮಾಡೋದು ಅಂತ ವಿಚಾರ ಮಾಡುತ್ತಿರುವಾಗಲೇ ಅದಕ್ಕೇನ್ ತಿಳಿತೋ ಏನೋ ಸರ್ರನೆ ಯುದ್ಧದಿಂದ ಪಲಾಯನ ಮಾಡುವಂತೆ ಓಡಿ ಹೋಗಿ ಒಂದು ಗೋಡೆಯ ತೂತಿನೊಳಗೆ ನುಸುಳಿಕೊಂಡಿತು. ಅಲ್ಲದೇ ನನ್ನ ಮಗ, ಸುಮಾರು ಗಂಟೆಗಳು ಕಾದರೂ ಹೊರಗೆ ಬರಲೇ ಇಲ್ಲ. ಅಥವಾ ಹೊರಗೆ ಬಂದು ಆಗಲೇ ಎಲ್ಲೋ ಬೇರೆ ಮನೆ ಸೇರಿಕೊಂಡಿತೋ ಏನೋ. ಏಕೆಂದರೆ ಇದರ ವೇಗ ಎಷ್ಟಿರುತ್ತೆಂದರೆ ನಾವು ಆಕಡೆ ಹೋಗಿ ಈಕಡೆ ಬರೋದ್ರೊಳಗೆ ಮಾಯವಾಗಿ ಬಿಟ್ಟಿರುತ್ತೆ. ಇದು ಗಂಟೆಗೆ ಮೂರು ಮೈಲಿ ವೇಗ ಓಡುತ್ತೆ. ಇನ್ನೂ ಸ್ವಲ್ಪ ವರ್ಷ ಕಳೆದು ವಿಕಾಸನವಾದರೆ, ಪ್ರಖ್ಯಾತ ಒಲಿಂಪಿಕ್ ಓಟಗಾರ ಉಸೇನ್ ಬೋಲ್ಟ್ ನ್ನು ಹಿಂದಿಕ್ಕುತ್ತೋ ಏನೋ? ಈ ವೇಗದಿಂದಲೇ ಇದನ್ನು ಕಾಣದಿದ್ದರೂ ಓಡಾಡುವ ಶಬ್ದ ಮಾತ್ರ ಕೇಳುತ್ತಿರುತ್ತೆ, ಇದು ಎಂಥವರನ್ನೂ ನಿದ್ದೆಗೆಡಿಸುವಂತದ್ದು. ಈಗೋ ಆಗೋ ಇನ್ನೇನು ಹೊರಗೆ ಬಂದೇ ಬಿಡುತ್ತೆ ಎಂದು ಉಸಿರು ಬಿಗಿಹಿಡಿದು, ಕಸಬರಿಗೆ ಹಿಡಿದುಕೊಂಡು ನಿಂತಿರುವ ನನಗೆ ನಿರಾಶೆಯೇ. ಒಂದೊಂದು ಸಲ ಕಸಬರಿಗೆಯಲ್ಲೇ ಅವಿತುಕೊಂಡಿದೆ ಏನೋ ಎಂದುಕೊಂಡು, ಒನಕೆ ಓಬವ್ವನ ಭಂಗಿಯಿಂದ ಹಠಾತ್ತನೆ ಭಯಗೊಂಡ ಬೆಕ್ಕಿನ ಮರಿಯಂತೆ, ಕಸಬರಿಗೆಯನ್ನು ಕೆಳಕ್ಕೆ ಒಗೆದು ಸ್ವಲ್ಪ ದೂರ ನಿಂತು ನೋಡಿದ್ದೂ ಇದೆ. ಆದರೆ ಏನು ಮಾಡಿದರೂ ಇದನ್ನು ಸಂಪೂರ್ಣವಾಗಿ ಮನೆಯಿಂದ ಹೊರ ಹಾಕಲು ನಾನು ವಿಫಲವಾಗಿದ್ದೇನೆ ಎಂದು ಒಪ್ಪಿಕೊಳ್ಳಲೇಬೇಕು.
ಇದಕ್ಕೆ ಕಾರಣ ನನ್ನ ದುರ್ಬಲತೆ ಎಂದು ತಿಳಿಯಬೇಡಿ. ಬದಲಾಗಿ ಜಿರಲೆಗಳಿಗಿರುವ ಎಲ್ಲಕ್ಕೂ ಹೊಂದಿಕೊಂಡು ಹೋಗುವ ಗುಣ. ಹೌದು ಇದು ಅತೀ ತಂಪಾದ ವಾತಾವರಣ ಆರ್ಕ್ಟಿಕ್ ನಿಂದ ಅತೀ ಉಷ್ಣಾಂಶದ ವಾತಾವರಣಕ್ಕೂ ಒಗ್ಗಿಕೊಳ್ಳುತ್ತದೆ. ಅದಕ್ಕೇ ಇದು ಭೂಮಿಯ ಅತ್ಯಂತ ಪುರಾತನ ಜೀವಿಗಳಲ್ಲೊಂದಾಗಿದೆ. ಪರಿಣಾಮವೇ, ನೀವು ಜಿರಲೆಗಳನ್ನು ಎಲ್ಲೆಂದರಲ್ಲಿ ನೋಡುತ್ತೀರಿ. ಅಡುಗೆಮನೆ, ಬಾತ್ ರೂಮ್ ನಿಂದ ಶುರುವಾಗಿ ಎಸಿ ಇರುವ ವಿ ಆರ್ ಎಲ್ ಬಸ್ ವರೆಗೂ! ಎಷ್ಟು ಕೊಲ್ಲಲು ಪ್ರಯತ್ನ ಪಟ್ಟರೂ, ಪರಶಿವನಿಂದ ವರ ಪಡೆದು ಜೀವಂತವಾಗಿ ಬರುತ್ತೋ ಏನೋ ಎನ್ನುವಂತೆ ಜಿರಲೆಯ ಸಂಖ್ಯೆ. ಆದರೆ ನಾನು ಅಮೆರಿಕದಲ್ಲಿದ್ದಾಗ ಮಾತ್ರ ಇದನ್ನು ತುಂಬಾ ಮಿಸ್ ಮಾಡ್ಕೊಂಡೆ! (ಮಿಸ್ ಮಾಡ್ಕೊಳ್ಳುವುದಕ್ಕಿಂತಲೂ ಹೆಚ್ಚಾಗಿ, ಜಿರಳೆ ತಾಪತ್ರೆ ತಪ್ಪಿತೆಂದು ಹಾಯಾಗಿದ್ದೇನೋ? ಅಥವಾ ವಯ್ಸ್ ವೆರ್ಸಾ ಏನೋ ಗೊತ್ತಿಲ್ಲ?!) ಅಲ್ಲಿನ ನೆಲದ ಮೇಲೆ ಹೆಚ್ಚಾಗಿ ಕಾರ್ಪೆಟ್ ಗಳೇ ಮಲಗಿಕೊಂಡಿರುತ್ತಿದ್ದರಿಂದ ಜಿರಳೆ ಓಡಾಡಿದರೂ ಕೇಳಿಸುತ್ತಿರಲಿಲ್ಲ. ಅಲ್ಲದೇ ಎಲ್ಲವೂ ಮರದ ಪೀಠೋಪಕರಣಗಳಿಂದ ತುಂಬಿ ಹೋಗುತ್ತಿದ್ದರಿಂದ ತುಂಬಾ ಜಿರಲೆಗಳಿರುತ್ತವೆ ಎಂದುಕೊಂಡಿದ್ದ ನಾನು, ಅಲ್ಲಿ ಯಾವ ಅಮೆರಿಕನ್ ಜಿರಳೆಯನ್ನೂ ಕಾಣದೆ ತಬ್ಬಿಬ್ಬಾಗಿದ್ದೆ! ಎಷ್ಟೋ ಸಲ ರಾತ್ರಿ ಮನೆಗೆ ಫೋನ್ ಮಾಡಲು ಕಾದು ಕುಳಿತಾಗ, ಪಕ್ಕನೆ ಅಡುಗೆಮನೆ ಲೈಟ್ ಹಾಕಿ, ಜಿರಳೆ ನೋಡಲು ಹಾತೊರೆದಿದ್ದೆ. ಯಾವ ಜೀವಜಂತುವಿನ ಸುಳಿವೂ ಸಿಗದೇ ಸುಮ್ಮನಾಗಿದ್ದೆ. ಇದಕ್ಕೆ ಕಾರಣ, ಅಮೆರಿಕನ್ನರು ಬಳಸುವ ಅತೀ ಪರಿಣಾಮಕಾರಿಯಾದ ಪೆಸ್ಟ್ ಕಂಟ್ರೋಲ್. ವರ್ಷಕ್ಕೊಂದೆರಡು ಬಾರಿ ಇಡೀ ಮನೆಯನ್ನು ಪೆಸ್ಟ್ ಕಂಟ್ರೋಲ್ ನವರಿಗೆ ಕಾಂಟ್ರಾಕ್ಟ್ ಕೊಡುತ್ತಾರೆ. ಅವರು ಬಂದು ಇಡೀ ಮನೆಯನ್ನು ಬವ್ವಾ ರಹಿತ ಮನೆಯನ್ನಾಗಿ ಮಾಡಿ ಬಿಡುತ್ತಾರೆ. ಜಿರಳೆ ಹೋಗಲಿ, ಒಂದು ಇರುವೆ ಕೂಡ ಕಾಣಸಿಗೋಲ್ಲಾ. ಇದನ್ನು ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ದೊಡ್ಡ ದೊಡ್ಡ ಕಂಪನಿಗಳೇ ಇವೆ. ವರ್ಷಕ್ಕೆ ಕೋಟ್ಯಂತರ ಬವ್ವಾಗಳನ್ನು ಬಲಿ ಕೊಟ್ಟು ಮಿಲಿಯನ್ ಗಟ್ಟಲೆ ಹಣ ಗಳಿಸುತ್ತವೆ. ಸಧ್ಯಕ್ಕೆ ನಮ್ಮಲ್ಲಿ ಹುಳ ಕೊಲ್ಲಲು ಇಷ್ಟು ದೊಡ್ಡ ಉದ್ಯಮ ಬೆಳೆದಿಲ್ಲ. ಏನಿದ್ದರೂ ಕಸಬರಿಗೆಯಿಂದ ಶುರುವಾಗಿ ಹಿಟ್ ಸ್ಪ್ರೇ ವರೆಗೆ ನಿಂತಿದೆ! ಅದಕ್ಕಾಗಿಯೋ ಏನೋ ಇದರ ಜೀವ ಸಂತತಿಗೆ ಧಕ್ಕೆಯಾಗಿಲ್ಲ. ಅದೂ ಅಲ್ಲದೆ, ನನ್ನ ಅನುಭವದ ಪ್ರಕಾರ ಜಿರಳೆ ಸ್ವಲ್ಪ ಬುದ್ಧಿಶಾಲಿಯೂ ಆಗಿದೆ. ಕಸಬರಿಗೆಯಿಂದ ಹೊಡೆದಾಕ್ಷಣ ಸತ್ತಂತೆ ನಟಿಸುವ ಜಿರಳೆ, ಸ್ವಲ್ಪ ಸಮಯವಾದ ಕೂಡಲೇ ಏನೂ ಆಗೇ ಇಲ್ಲ ಎನ್ನುವಂತೆ ಓಡಿ ಹೋಗಿ ಅವಿತುಕೊಂಡು ಬಿಡುತ್ತದೆ. ಈ ಸಂಚು ಹೆಚ್ಚು ಕಡಿಮೆ ಎಲ್ಲಾ ಜೀವಿಗಳಲ್ಲಿ ಕಂಡು ಬಂದರೂ, ಜಿರಳೆಗೆ ವರದಾನವಾಗಿರುವ ಮತ್ತೊಂದು ಸಂಗತಿ ಏನೆಂದರೆ, ಇದರ ತಲೆಯನ್ನು ಕಡಿದು ಹಾಕಿದರೂ ಇದು ಬದುಕುಳಿಯಬಲ್ಲುದು! ಹೌದು, ಇದರ ದೇಹದಲ್ಲಿರುವ ಚಿಕ್ಕ ಚಿಕ್ಕ ರಂಧ್ರಗಳಿಂದ ಇದು ಉಸಿರಾಡಬಲ್ಲುದರಿಂದ ಇದಕ್ಕೆ ಬಾಯಿಯ ಅವಶ್ಯಕತೆ ಇಲ್ಲ. ಹೀಗಾಗಿ ಇದು ತಲೆ ರಹಿತವಾಗಿ, ಆಹಾರವಿಲ್ಲದೆ ಒಂದು ತಿಂಗಳಿನವರೆಗೂ ಜೀವಿಸಬಹುದಾದರೂ, ನೀರಿಲ್ಲದೆ ಹೆಚ್ಚೆಂದರೆ ಒಂದು ವಾರ ಬದುಕಬಹುದು.
ಇರಲಿ, ಕೊಲ್ಲುವ ವಿಧಾನಗಳ ಬಗ್ಗೆ ಗಮನ ಹರಿಸಿದರೆ ಧನಾತ್ಮಕವಾಗಿ ಚಿಂತಿಸಿದಂತಾಗುತ್ತದೆ. ಆಗಲೇ ಹೇಳಿದಂತೆ ಜಿರಳೆ ಕಂಡೊಡನೆ ಯಾವ ಹಿಟ್ ಸ್ಪ್ರೇ ಆಗಲೀ ಅಥವಾ ಲಕ್ಷ್ಮಣ ರೇಖೆಯಾಗಲೀ ಎಲ್ಲಿ ಇಟ್ಟಿದ್ದೇವೆಂದು ನೆನಪಾಗುವುದಿಲ್ಲ. ಕೈಗೆ ಸಿಕ್ಕ ವಸ್ತುವಿನಿಂದ ಅದನ್ನು ಹೊಡೆದು ಕೊಲ್ಲುವುದೇ ಮೊದಲ ವಿಧಾನ. ಎರಡನೇ ವಿಧಾನದಲ್ಲಿ, ಜಿರಳೆ ವಾಸಿಸುವ ಸ್ಥಳವನ್ನು ವಿಷಕಾರಿಯಾಗಿಸುವುದು. ಈ ವಿಧಾನದಿಂದ ಜಿರಲೆಯು ಒಂದು ಬಾಡಿಗೆ ಮನೆಯಿಂದ ಇನ್ನೊಂದು ಬಾಡಿಗೆ ಮನೆಗೆ ಹೋದ ಹಾಗೆ ಸ್ಥಳ ಬದಲಾಯಿಸಿ ಇನ್ನಷ್ಟು ಹೆಚ್ಚು ತಲೆನೋವಾಗಿ ಪರಿಣಮಿಸುತ್ತವೆ. ಏಕೆಂದರೆ ಮೊದಲಾದರೆ ಜಿರಳೆ ಸ್ಥಳ ಗೊತ್ತಿದ್ದು ಜಿರಳೆ ಅವಾಂತರ ನೋಡಲು ಮನಸ್ಸು ಸಿದ್ಧ ಆಗಿರುತ್ತೆ. ಸ್ಥಳ ಬದಲಾಯಿಸಿದರೆ, ಯಾವಾಗ ಬೇಕಾದ್ರೂ ಜಿರಳೆ ಪಟ್ಟ ಅಂತ ಕೈ ಮೇಲೆ ಬೀಳಬಹುದು. ಇದರ ವೇದನೆ ಅನುಭವಿಸಿದವರಿಗೇ ಗೊತ್ತು. ಆ ಗರಗಸದಂತಿರುವ ಕಾಲುಗಳು ನಿಮ್ಮ ಮೃದು ಕೈಯನ್ನು ಬಿಗಿದಪ್ಪಿ ಓಡಾಡಿದರೆ ಹೇಗಾಗಬೇಡ! ಮೂರನೇ ವಿಧಾನದಲ್ಲಿ; ಮೂರನೇ ವಿಧಾನ ಎನ್ನುವುದಕ್ಕಿಂತಲೂ ಮುಂಜಾಗೃತಾ ಕ್ರಮವೆಂದೇ ಹೇಳಬಹುದು. ಜಿರಳೆ ತನ್ನ ವಂಶಾಭಿವೃದ್ಧಿ ಮಾಡಲು ಮೊಟ್ಟೆಗಳನ್ನು ಒಂದು ಸೂಟ್ ಕೇಸಿನಂತಹ ಪೆಟ್ಟಿಗೆಯೊಳಗೆ ಇಡುತ್ತದೆ. ಇಂತಹ ಒಂದು ಬಾಕ್ಸ್ ನಲ್ಲಿ ಕಡಿಮೆ ಎಂದರೂ ಹದಿನಾರು ಮೊಟ್ಟೆಗಳಿರುತ್ತವೆ. ಒಂದು ಸೂಟ್ ಕೇಸ್ ನಾಶ ಮಾಡಿದರೆ, ಹದಿನಾರು ಭಾವೀ ಜಿರಲೆಗಳನ್ನು ಕೊಂದಂತೆ!! ಹೇಗಿದೆ?! ಇದಕ್ಕೆ ಒನಕೆ ಓಬವ್ವ ಆಗಬೇಕಿಲ್ಲ, ಮನೆ ತುಂಬಾ ಓಡಾಡಬೇಕಿಲ್ಲ, ಹೇಸಿಗೆ ಪಡಬೇಕಿಲ್ಲ, ಮೇಲಾಗಿ ಜಿರಲೆಯನ್ನು ಕೊಲ್ಲಲು ನಾವು ಬೆನ್ನಟ್ಟಿದ್ದೇವೋ ಅಥವಾ ಜಿರಲೆಯೇ ನಮ್ಮ ಬೆನ್ನತ್ತಿದೆಯೋ ಎನ್ನುವ ಗೊಂದಲವಿರುವುದಿಲ್ಲ. ಈ ವಿಧಾನ ನನ್ನ ಅಚ್ಚುಮೆಚ್ಚಿನದು.
ನಾಲ್ಕನೆಯದು ಮತ್ತು ಕೊನೆಯದು; ಜಿರಳೆ ನಿಯಂತ್ರಿಸಲು ಒಂದು ಬೆಕ್ಕನ್ನು ಸಾಕುವುದು. ಇದು ಮಾತ್ರ, ಒಂದು ಕೊಟ್ಟು ಇನ್ನೊಂದನ್ನು ಮೈಮೇಲೆ ಎಳೆದುಕೊಂಡಂತೆ. ನಾನು ಚಿಕ್ಕವಳಿದ್ದಾಗ, ನಮ್ಮಮ್ಮ ಒಂದು ಬೆಕ್ಕನ್ನು ಸಾಕಿದ್ದರು (ನನ್ನ ಹಟದಿಂದಲೇ ಇರಬಹುದು) ಕಾಣಲು ಕಂದು ಬಣ್ಣ ಮತ್ತು ಬಿಳಿ ಬಣ್ಣದ ಪಟ್ಟೆಗಳಿದ್ದರಿಂದ ಇದಕ್ಕೆ ಹುಲಿ ಅಂತಲೇ ಕರೆಯುತ್ತಿದ್ದ ನೆನಪು. ಅದೋ ಬರೀ ಹೆಸರಿಗಷ್ಟೇ ಹುಲಿ ಇದ್ದು, ಯಾವ ಜಿರಳೆ, ಹಲ್ಲಿ , ಇಲಿಯನ್ನೂ ಕೂಡ ಹಿಡಿಯುತ್ತಿರಲಿಲ್ಲ. ಪಟ್ಟಣವಾಸಿಗಳಂತೆ ಬ್ರೆಡ್ಡು, ಬಿಸ್ಕೆಟ್,ಬನ್ನು, ಹಾಲು ಇದರಲ್ಲೇ ಜೀವನ ಸಾಗಿಸುವಂತಿತ್ತು. ವಾರಕ್ಕೊಮ್ಮೆ ರವಿವಾರದಂದು ಶಾಲೆಗೆ ರಜವಿದ್ದಾಗ ನಾನು ಅದನ್ನು ಹಲ್ಲಿ ಬೇಟೆಗೆಂದು "ಅಮ್ಮಾ ನಾನಿದಕ್ಕೆ ಜಿರಳೆ ಹಿಡಿಯುವ ಟ್ರೇನಿಂಗ ಕೊಡುತ್ತೇನೆ "ಎಂದು ಬೆಕ್ಕನ್ನು ಕರೆದುಕೊಂಡು ನಮ್ಮ ತೋಟದಲ್ಲಿ ತಿರುಗಾಡುತ್ತಿದ್ದೆ. ಕಿಟಕಿಯಲ್ಲಿರುವ ಹಲ್ಲಿಯನ್ನು ತೋರಿಸಿ , ಕಟ್ಟಿಗೆಯ ಸಹಾಯದಿಂದ ಹಲ್ಲಿಯನ್ನು ಬೆಕ್ಕು ಕೂತ ದಿಕ್ಕಿಗೆ ಓಡಿಸುತ್ತಿದೆ. ಈ ಬೆಕ್ಕು ಹಲ್ಲಿ ಹಿಡಿಯಲು ತನ್ನ ಮುಂಗಾಲುಗಳನ್ನು ಎತ್ತರಕ್ಕೆ ಚಾಚುತ್ತಿತ್ತು. ಹೀಗೆ ಚಾಚಿದಾಗ, ಕಿಟಕಿಯಲ್ಲಿ ಫಿಕ್ಸ್ ಮಾಡಿದ ತಂತಿಯ ಸೊಳ್ಳೆ ಪರದೆಯಲ್ಲಿ ಬೆಕ್ಕಿನ ಉಗುರು ಸಿಕ್ಕಿ ಹಾಕಿಕೊಳ್ಳುತ್ತಿತ್ತು. ಅದನ್ನು ಬಿಡಿಸಿಕೊಳ್ಳಲು ಪಟ್ಟ ಪಾಡು ಹಲ್ಲಿ ಹಿಡಿಯುವುದಕ್ಕಿಂತ ಜಾಸ್ತಿ ಇತ್ತು. ಮಂತ್ರಕ್ಕಿಂತ ಉಗುಳೇ ಜಾಸ್ತಿ ಎನ್ನುವಂತೆ ಹಲ್ಲಿ ಬೇಟೆ ದೂರ, ಬೆಕ್ಕಿನ ಉಗುರು ಮುರಿಯದಿದ್ದರೆ ಸಾಕು ಎಂದು ಸಹಾಯಕ್ಕೆ ಅಣ್ಣನನ್ನು ಕರೆಯಲು ಓಡಿ ಹೋಗುತ್ತಿದ್ದೆ. ಇಂತಹ ಅನುಭವದಿಂದ ಈಗ ಬೆಕ್ಕಿನ ಉಸಾಬರಿ ಬೇಡ ಅನ್ನಿಸುತ್ತೆ. ಆದರೂ ಬೀದಿ ಬೆಕ್ಕು ಯಾವಾಗಾದರೂ ಗಟಾರ್ ಪಕ್ಕ ಓಡಾಡುವ ಜಿರಳೆ ಹಿಡಿದು ಕುರುಮ್ ಕುರುಮ್ ಎಂದು ಸಂಡಿಗೆ ತಿನ್ನುವಂತೆ ಜಿರಲೆಯನ್ನು ಚಪ್ಪರಿಸುವುದನ್ನು ನೋಡಿದಾಗ, ಇಂತಹದೊಂದು ಬೆಕ್ಕು ಇದ್ದರೆ ಎಷ್ಟು ಚೆನ್ನ ಎಂದೆನಿಸುತ್ತದೆ.
ಇನ್ನೂ ಒಂದು ವಿಶೇಷ ಹಾಗೂ ಪೂರ್ವಯೋಜಿತ ವಿಧಾನವಿದೆ. ಇದು ನಮ್ಮಮ್ಮ ರೂಡಿಸಿಕೊಂಡ ಹಾಗು ಯಾವುದೇ ಕೀಟನಾಶಕ ಬಳಸದೇ, ಒಂದು ಸಾವಯವ ವಿಧಾನವೆಂದೇ ಹೇಳಬಹುದು. ಇದೇನೆಂದರೆ, ಜೊಂಡಿಗನಿಗೆ ಅತೀ ಪ್ರಿಯವಾದ ಖಾಲಿ ರಟ್ಟಿನ ಡಬ್ಬಿಗಳನ್ನು ಅಡುಗೆಮನೆಯಲ್ಲಿ ಅವು ಓಡಾಡುವ ಸ್ಥಳಗಳಲ್ಲಿ ಇಡುವುದು. ಇದೊಂತರಹ ಇಲಿ ಹಿಡಿಯಲು ಬೋನು ಇಟ್ಟ ಹಾಗೆ. ಒಂದು ವಾರದ ನಂತರ ಜಿರಳೆಗಳು ಅದನ್ನು ತಮ್ಮ ಮನೆಯಂತೆ ವಾಸ ಮಾಡುತ್ತಿರುವಾಗ; ಒಂದು ಬುಟ್ಟಿಯಲ್ಲಿ ಕುದಿಯುವ ನೀರು ತೆಗೆದುಕೊಂಡು ಆ ಡಬ್ಬದಲ್ಲಿರುವ ಎಲ್ಲ ಜಿರಲೆಗಳನ್ನೂ ಅದರಲ್ಲಿ ಬೀಳಿಸುವುದು! ಒಂದು ಸಲ ಅಮ್ಮನಿಗೆ "ತಣ್ಣೀರಲ್ಲೇ ಬೀಳಿಸಬಹುದಲ್ಲ " ಅಂತ ಪ್ರಶ್ನಿಸಿದ್ದಕ್ಕೆ ಅವು ಅದರಲ್ಲಿ ಸಾಯುವುದಿಲ್ಲ ಎಂದಷ್ಟೇ ಉತ್ತರಿಸಿದ್ದರು. ಯಾವಾಗ ಪಿ ಯು ಸಿ ನಲ್ಲಿ ಜೀವವಿಜ್ಞಾನ ಪ್ರಯೋಗಶಾಲೆಯಲ್ಲಿ ಜಿರಲೆಯ ಅಂಗ ರಚನೆಯ ಭಾಗ ಬಂತೋ, ಅಂದೇ ಜಿರಲೆಯ ಎಲ್ಲ ಜನ್ಮ ರಹಸ್ಯಗಳೂ ಬಯಲಾಗಿ ಬಿಟ್ಟವು. ಈ ಶೀತರಕ್ತದ ಮಿಶ್ರಾಹಾರಿ ಜಿರಲೆಯು ನೀರಿನಲ್ಲಿ ಮುಳುಗಿಯೂ ನಲವತ್ತು ನಿಮಿಷ ಜೀವಂತವಾಗಿರಬಲ್ಲುದು. ಇನ್ನು ಯಾವಾಗಲಾದರೂ, ಪಾಂಡವರಿಂದ ರಕ್ಷಿಸಿಕೊಳ್ಳಲು ನೀರೊಳಗೆ ಅಡಗಿ ಕುಳಿತ ದುರ್ಯೋಧನನ ನೆನಪಾದರೆ ಅದರ ಜೊತೆ ಈ ಜೊಂಡಿಗ್ಯಾನ ನೆನಪೂ ಆಗಬಹುದು.
ಇಂಥ ಹಠಮಾರಿ ಜಿರಲೆಯು ಪರಮಾಣು ಬಾಂಬ್ ನಿಂದಲೂ ಉಳಿದುಕೊಳ್ಳುತ್ತದೆ ಎನ್ನುವುದು ಕೆಲವರ ವಾದ. ಹಿರೋಷಿಮಾ ನಾಗಾಸಾಕಿ ಮೇಲೆ ಪರಮಾಣು ದಾಳಿಯಾದಾಗ ಎಲ್ಲ ಜೀವಿಗಳೂ ನಿರ್ನಾಮವಾದರೂ ಜಿರಳೆ ಮಾತ್ರ ಬದುಕುಳಿದಿತ್ತು ಎಂದು ಅಂಬೋಣ. ಇದನ್ನೇ ಎತ್ತಿ ಹಿಡಿಯುವಂತೆ, ಕಳೆದ ದಶಕದಲ್ಲಿ ಬಿಡುಗಡೆಗೊಂಡ ಒಂದು ಅನಿಮೇಷನ್ ಚಿತ್ರ "WALL-E" ನಲ್ಲಿ; ಭೂಮಿಯ ಮೇಲೆ ಯಾವ ಜೀವಿ ಇಲ್ಲದಿದ್ದರೂ ಜಿರಲೆಯೊಂದಿತ್ತು ಎಂದು ರೋಬೋಟ್ ಜೊತೆಗೆ ಜಿರಲೆಯ ಸ್ನೇಹ ಸಂಬಂಧದ ಬಗ್ಗೆ ಸುಂದರ ಕಲ್ಪನೆಯನ್ನು ಚಿತ್ರಿಸಿದ್ದರು. ನಿಜವಾಗಿಯೂ ಹೇಳಬೇಕೆಂದರೆ, ಜಿರಳೆ ಪರಮಾಣು ವಿಕಿರಣವನ್ನು ತಡೆದುಕೊಳ್ಳಲಾರದು. ಮನುಷ್ಯನಿಗೆ ಹೋಲಿಸಿದರೆ ವಿಕಿರಣ ತಡೆದುಕೊಳ್ಳುವ ಶಕ್ತಿ ಜಿರಳೆಗೆ ಹೆಚ್ಚಿದ್ದರೂ ಇದು ಪರಮಾಣುವಿನಿಂದ ಉಳಿಯಲಾರದು.
ಹಾಗಂತ ಮನೆಯಲ್ಲೇನಾದರೂ ಪರಮಾಣು ಪ್ರಯೋಗ ಮಾಡಲಾದೀತೇ?! ಅದೂ ಅಲ್ಲದೆ ಈ ಸರ್ವವ್ಯಾಪಿ ಜಿರಲೆಯು ಮನೆಯಿಂದ ತೊಲಗಿದರೂ, ಜಗತ್ತಿನ ಎಲ್ಲ ಮೂಲೆಗಳಲ್ಲೂ ಇದರ ಸಂತತಿ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಸಂತತಿಯ ಹೆಸರೇ ವಾಸಸ್ಥಾನವನ್ನು ಸೂಚಿಸುತ್ತದೆ. ಅಮೆರಿಕನ್ ಜಿರಳೆ, ಜರ್ಮನ್ ಜಿರಳೆ, ಒರಿಒಂಟಲ್ ಜಿರಳೆ ಇತ್ಯಾದಿ. ಇವು ಆಯಾ ಪ್ರದೇಶಕ್ಕೆ ಅನುಗುಣವಾಗಿ ವಿಕಸನಗೊಂಡಿವೆ. ಖ್ಯಾತ ಸಸ್ಯ ಶಾಸ್ತ್ರಜ್ಞ ಮತ್ತು ಸಾಹಿತಿ ಬಿ ಜಿ ಎಲ್ ಸ್ವಾಮಿ ಹೇಳುವಂತೆ ಒಂದೇ ವರ್ಗದ ಮರಗಳು ಹವಾಮಾನಕ್ಕೆ ಅನುಗುಣವಾಗಿ ಬೇರೆ ಬೇರೆಯಾಗಿ ಬೆಳೆಯುತ್ತವೆ. ಹಾಗೆಯೇ ಜಿರಲೆಗಳೂ ಕೂಡ ಇಲ್ಲಿ ಗಾತ್ರದಲ್ಲಿ ಚಿಕ್ಕವಿದ್ದರೂ ಉಷ್ಣ ವಲಯದಲ್ಲಿ ಇದರ ಮೂರು ಪಟ್ಟು ದೊಡ್ಡದಾಗಿ ಬೆಳೆಯುತ್ತವೆ. ಈ ಕಟುಸತ್ಯವನ್ನು ನನ್ನಿಂದ ಅರಗಿಸಿಕೊಳ್ಳಲು ಬಹುಕಷ್ಟ. ಊಹಿಸುವುದಕ್ಕೂ ಮನಸ್ಸು ಬೇಡ ಎನ್ನುತ್ತದೆ. ಇದಕ್ಕಿಂತ ಕಠೋರವಾದ ಸತ್ಯವೇನೆಂದರೆ ಚೀನಾದಲ್ಲಿ ಜಿರಲೆಯನ್ನು ಆಹಾರವಾಗಿ ತಿನ್ನುತ್ತಾರೆ ಮತ್ತು 'ಜಿರಳೆ ಕೃಷಿ ' ಮಾಡುತ್ತಾರಂತೆ!! ತಿನ್ನುವುದಕ್ಕಲ್ಲದೇ ಕೆಲವು ಮೆಡಿಸಿನ್ ಗಳಲ್ಲಿಯೂ ಬಳಸುತ್ತಾರಂತೆ. ಕುಕ್ಕಟಗಳಿಗೆ ಆಹಾರವಾಗಿ ಜಿರಳೆ ಕೃಷಿ.
ಅಬ್ಬಾ! ಈ ಸರ್ವಾಹಾರಿ ಬವ್ವಾವಿನ ಸುತ್ತ ಇಷ್ಟೆಲ್ಲಾ ವೈಚಿತ್ರ್ಯಗಳಿದ್ದರೂ ಮನಸ್ಸು ಈಗಲೂ ಜಿರಳೆ ರಹಿತ ಮನೆಯನ್ನೇ ಬಯಸುತ್ತದೆ. ಪರಮಾತ್ಮನಂತೆ ಸರ್ವವ್ಯಾಪಿಯಾಗಿರುವ ಇವು; ತಮ್ಮನ್ನು ಸರ್ವನಾಶ ಮಾಡಲು ಬರುವ ಮನುಜರನ್ನು ನೋಡಿದ ಕೂಡಲೇ, ಜಿರಲೆಯ ಮನಸ್ಸೂ ಕೂಡ ನಮ್ಮಂತೆಯೇ ಮನೆಯನ್ನು ಮಾನವರಹಿತವಾಗಿ ಬಯಸುತ್ತವೆಯೋ ಅಥವಾ ಅವುಗಳ ಜೀವನದಲ್ಲಿ ನಮ್ಮನ್ನು ಮನರಂಜನೆಯಂತೆ ಬಿಂಬಿಸಿಕೊಳ್ಳುತ್ತವೆಯೋ ಏನೋ? ಯಾರು ಬಲ್ಲರು ಜಿರಲೆಯ ಮನಸ್ಸನ್ನು! ಆದರೂ, ಯಾವುದೋ ಮೆಚ್ಚಿನ ಹಳೆಯ ಪುಸ್ತಕವೊಂದನ್ನು ಓದುವಾಗ ಪುಸ್ತಕದ ಮಧ್ಯದಲ್ಲಿ ಚಪ್ಪಟೆಯಾಗಿ ಅವಶೇಷವಾಗಿ ಸಿಗುವ ಜಿರಲೆಯ ಅಸ್ಥಿಪಂಜರ ಮಾತ್ರ ಚಿದಂಬರ ರಹಸ್ಯವಾಗಿ ಕಂಡು ಬರುತ್ತದೆ!

