ತಲೆಯಲ್ಲಿ ನುಸುಳುವ ಕೀಟಲೆ ವಿಚಾರಗಳೂ,,ಹೇಳಲು ಆಗದೇ ಉಳಿದ ಹೋದ ವಿಚಾರಗಳೂ,, ಹಂಚಿಕೊಳ್ಳಲೇಬೇಕಾದಂತಹ ವಿಚಾರಗಳೂ !
Monday, April 29, 2019
ಈ ಶತಮಾನದ ಸಾಹಸಿ ಹೆಣ್ಣು!!- Published in Udayavani, on 24th April 2019
.ಅನುಪಮಾ ಕೆ ಬೆಣಚಿನಮರ್ಡಿ
ಕಳೆದ ಒಂದೂವರೆ- ಎರಡು ವರ್ಷದಿಂದ ಅಂದರೆ ಬಸುರಿಯಾಗಿದ್ದಾಗಿಂದ ಮಗ ಒಂದು ವರ್ಷದವನಾಗುವ ವರೆಗೂ ಎಲ್ಲೂ ದೂರ ಹೋದದ್ದೇ ಇಲ್ಲ. ಆಫೀಸು-ಮನೆ-ಆಫೀಸು ಅಷ್ಟೇ. ಮಗ ಹುಟ್ಟಿದ ಮೇಲೆ ಊರಿಂದ-ಬೆಂಗಳೂರು- ಊರು ಅಷ್ಟೇ. ಚಿಕ್ಕಂದಿನಿಂದಲೂ ಹೊರಾಂಗಣ ಕ್ರೀಡೆ, ಚಟುವಟಿಕೆ/ಸಾಹಸಗಳಲ್ಲಿ ಕುತೂಹಲವಿದ್ದ ನನಗೆ ಈ ದಿನಚರಿ ಉಸಿರುಕಟ್ಟಿಸುವಂತಾಗಿತ್ತು. ಆಗ ಹೊಳೆದಿದ್ದೇ ರೆಸಾರ್ಟ್ ತಂಗುವಿಕೆ. ಸರಿ, ಸಿಕ್ಕಿದ್ದೇ ಚಾನ್ಸು ಎಂದು ನನಗೆ ಬೇಕಾದ ಚಟುವಟಿಕೆಗಳಿರುವ ರೆಸಾರ್ಟ್ ಬುಕ್ ಮಾಡಿದ್ದೂ ಆಯಿತು. ರೆಸಾರ್ಟ್ ಗೆ ಹೋದರೂ ಕೂಡ ನನ್ನ ದಿನಚರಿ ಮಗನ ಮೇಲೆ ಅವಲಂಬಿತವಾಗಿತ್ತು. ಕಡೆಗೂ ಒಂದೆರಡು ತಾಸು ಮಗನನ್ನು ಅವರಪ್ಪನ ಸುಪರ್ದಿಗೆ ಒಪ್ಪಿಸಿ "ನಾನು ಹೈಕಿಂಗ್ ಮತ್ತು ಜಿಪ್ ಲೈನಿಂಗ್ (ಎರಡು ಅಸಮತೋಲನ ಬೆಟ್ಟಗಳ ಮಧ್ಯೆ ತುಂಬಾ ಗಟ್ಟಿಯಾದ ಕಬ್ಬಿಣದ ಹಗ್ಗವಿರುತ್ತದೆ. ಇದಕ್ಕೆ ಸವಾರರು ಪುಲ್ಲಿ ಮೂಲಕ ಅಟ್ಯಾಚ್ ಆಗಿ ಒಂದು ಗುಡ್ಡದ ತುದಿಯಿಂದ ಇನ್ನೊಂದು ಗುಡ್ಡದ ತುದಿಗೆ ಗುರುತ್ವಾಕರ್ಷಣ ಬಲದಿಂದ ತಲುಪುವುದು.) ಅಡ್ವೆಂಚರ್ ಮಾಡಿ ಬರುವೆ. ನನ್ನ ಮಗ ಪ್ರಣವ್ ಗೆ ಇದನ್ನೆಲ್ಲಾ ತೋರಿಸಿ!" ಎಂದು ಹೊರಟೇ ಬಿಟ್ಟೆ. ನನ್ನ ಪತಿ ಸ್ವಲ್ಪ ಕಾಳಜಿಯಿಂದಾಗಿ ಹೆದರಿ " ಆಂ , ಊ " ಎನ್ನುವಷ್ಟರಲ್ಲಿ ನಾನು ಗುಡ್ಡದ ಬುಡಕ್ಕೆ ಹೈಕಿಂಗ್ ಮಾಡಲು ಸಜ್ಜಾಗಿ ನಿಂತಿದ್ದೆ. ಹೈಕಿಂಗ್ ಮಾಡುವ ಮುನ್ನ, ಹೈಕಿಂಗ್ ಮಾಡಲು ಬೇಕಾದ ಶೂ ಗಳನ್ನು ಧರಿಸಿದೆ. ಚಿಕ್ಕಂದಿನಲ್ಲಿ ಇಂತಹ ಸಣ್ಣ ಪುಟ್ಟ ಬೆಟ್ಟಗಳನ್ನು ತುಂಬ ಸಲೀಸಾಗಿ ಹತ್ತಿ ಇಳಿಯುತ್ತಿದ್ದ ನಾನು, ಈಗ ಏದುಸಿರು ಬಿಡುವಂತಾಗಿತ್ತು. ಇದಕ್ಕೆ ಕಾರಣ, ಬದಲಾದ ಜೀವನ ಕ್ರಮ ಹಾಗು ಹೆರಿಗೆ ಬಳಿಕ ಹೆಚ್ಚಾದ ದೇಹ ತೂಕವೂ ಕಾರಣವಾಗಿತ್ತು. ಆದರೆ ಸಾಹಸ ಮಾಡುವ ಹುಚ್ಚು ಮನಸ್ಸಿಗೆ ಇದೆಲ್ಲ ಹೇಗೆ ಗೊತ್ತಾಗಲು ಸಾಧ್ಯ? ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡು ನಡು ನಡುವೆ ಸುಧಾರಿಸಿಕೊಂಡು ಬೆಟ್ಟ ಹತ್ತಿದ್ದಾಯಿತು. ಅದೂ ಅಲ್ಲದೇ,ಜಿಪ್ ಲೈನಿಂಗ್ ಮಾಡಬೇಕಾದರೆ ಗುಡ್ಡ ಹತ್ತಲೇ ಬೇಕು. ಏಕೆಂದರೆ, ಜಿಪ್ ಲೈನಿಂಗ್ ಮಾಡುವುದು ಒಂದು ಬೆಟ್ಟದ ತುದಿಯಿಂದ ಇನ್ನೊಂದು ಬೆಟ್ಟದ ತುದಿಗೆ ಹಗ್ಗದ ಮೂಲಕ ಜೋತು ಬಿದ್ದು ತಲುಪುವುದು. ಇಲ್ಲಿ ಹಗ್ಗ ಕಬ್ಬಿಣದಿಂದ ಮಾಡಲ್ಪಟ್ಟಿದ್ದು ಇದನ್ನು ಪುಲ್ಲಿ ಮುಖಾಂತರ ಸವಾರರಿಗೆ ಗಟ್ಟಿಯಾಗಿ ಲಾಕ್ ಮಾಡಿರುತ್ತಾರೆ. ನಂತರ ಕಬ್ಬಿಣದ ಕೇಬಲ್ ಗಳು ಎರಡೂ ಬೆಟ್ಟದ ಮಧ್ಯೆ ಇರುವುದರಿಂದ ಸವಾರರು ಇದರ ಮೂಲಕ ಇನ್ನೊಂದು ಬೆಟ್ಟ ತಲುಪುವುದು.
ಬೆಟ್ಟದ ತುದಿ ತಲುಪಿದ ಮೇಲೆ ಅಲ್ಲಿ ಎತ್ತರದ ಮೇಲೆ ಒಂದು ಚಿಕ್ಕ ಗುಡಿಸಲು ತರಹ ಇದ್ದು ಅದ್ರಲ್ಲಿ ಒಬ್ಬ ಗೈಡ್ ಇದ್ದ. ಈತ ಸವಾರರಿಗೆ ಅಗತ್ಯವಿರುವ ಪುಲ್ಲಿ ಇರುವ ಹಗ್ಗವನ್ನು ಸವಾರರ ದೇಹಕ್ಕೆ ಗಟ್ಟಿಯಾಗಿ ಬಿಗಿಯುತ್ತಾನೆ. ಇದು ನಮ್ಮ ಚಿಕ್ಕಂದಿನಲ್ಲಿ ಅಂಗನವಾಡಿಯ ಮಕ್ಕಳ ತೂಕ ನೋಡಲು ಒಂದು ತರಹ ವಿಶೇಷ ಬೆಲ್ಟ್ ವ್ಯವಸ್ಥೆ ಇದ್ದು, ಮಕ್ಕಳಿಗೆ ಈ ಬೆಲ್ಟ್ ಹಾಕಿ ಅವರನ್ನು ವೆಯಿಂಗ್ ಮಷಿನ್ ಗೆ ತೂಗು ಬಿಡುತ್ತಿರಲಿಲ್ಲವೇ? ಅದೇ ತರಹ ಭದ್ರವಾದ ಬೆಲ್ಟ್ ಹಾಕುತ್ತಾರೆ. ಇದು ದೇಹ ತೂಕ ಸಮ ಪ್ರಮಾಣದಲ್ಲಿ ಹಂಚಿ ಹೋಗಲಿ ಎಂಬ ಕಾರಣಕ್ಕೆ. ಇಷ್ಟೆಲ್ಲಾ ಆದ ಬಳಿಕವೇ ನಾನು ಜಿಪ್ ಲೈನಿಂಗ್ ಮಾಡಲು ಸಜ್ಜಾಗಿ ನಿಂತಿದ್ದೆ. ಮೇಲಿನಿಂದ ಕೆಳಗಡೆ ಕಣ್ಣು ಹಾಯಿಸಿದಾಗ, ಜನರು ಇರುವೆಗಳಂತೆ ಕಾಣುತ್ತಿದ್ದರು. ದೊಡ್ಡದಾದ ವಿಶಾಲ ಮರಗಳು ಹುಲ್ಲು ಕಡ್ಡಿಯಂತೆ ಕಾಣುತ್ತಿದ್ದವು. ಒಂದು ಸಲ ಭಯವಾಯಿತು. ಹೃದಯದ ಬಡಿತ ಹೆಚ್ಚಾಯಿತು. ಸಾಹಸವೆಂದರೆ ಇದೇ ಅಲ್ಲವೇ? ಎಂದುಕೊಂಡು ಜಿಪ್ ಲೈನಿಂಗ್ ಮಾಡಲು ಧುಮುಕಿದೆ. ಒಂದು ಕ್ಷಣ ಎದೆ ಝಲ್ ಎಂದಿತು. ಅತಿಯಾದ ಗಲಿ ಬೇರೆ ಸುಳಿಯುತ್ತಿತ್ತು. ಗಾಳಿಯನ್ನು ಸೀಳಿಕೊಂಡು ಹೋಗುವ ನಾನು ಕಬ್ಬಿಣದ ಕೇಬಲ್ ಸರ್ರ್ ಎಂಬ ಮಾಡುತ್ತಿದ್ದ ಸದ್ದು . ಹೃದಯ ಬಡಿತ ಇನ್ನೂ ಹೆಚ್ಚಾಗಿಯೇ ಇತ್ತು. ನಾನು ಭದ್ರವಾಗಿ ಕೇಬಲ್ ಗೆ ಅಟ್ಯಾಚ್ ಆಗಿದ್ದೇನೆ ಎಂದು ಗೊತ್ತಿದ್ದರೂ, ನನ್ನ ದೇಹ ಸ್ವಾಭಾವಿಕ ರಿಫ್ಲೆಕ್ಸ್ ನಿಂದಾಗಿ ಅಲುಗಾಡದೆ ಎರಡು ಕೈ ಗಳನ್ನೂ ಪುಲ್ಲಿಗೆ ಗಟ್ಟಿಯಾಗಿ ಹಿಡಿದುಕೊಂಡಿದ್ದೆ. ಕೆಲವು ಕ್ಷಣಗಳಾದ ಮೇಲೆ ನಾನು ನಿಜವಾಗಿಯೂ ಗಾಳಿಯಲ್ಲಿ ತೇಲುತ್ತಿದ್ದೇನೆ ಎಂದೆನಿಸಿತು. ಆಗ ನಿಧಾನವಾಗಿ ನನ್ನೆರಡೂ ಕೈಗಳನ್ನು ಬಿಚ್ಚಿ ಆಕಾಶದಲ್ಲಿ ಹಾರುವ ಹಾಗೆ ಅಗಲ ಮಾಡಿದೆ. ಅದು ತುಂಬಾ ರೋಮಾಂಚನಕಾರಿಯಾದ ಕ್ಷಣವಾಗಿತ್ತು. ಕೆಳಗಿನಿಂದ ಜೋರಾದ ಸದ್ದು ಗದ್ದಲ ಕೇಳಿಸುತ್ತಿತ್ತು. ಬಹುಷಃ ನನ್ನ ಗೆಳೆಯರ ಬಳಗ ನನ್ನನ್ನು ಪ್ರೋತ್ಸಾಹಿಸುತ್ತಿದ್ದಿರಬೇಕು. ನನ್ನ ಮಗ ಇದ್ದ ಕಡೆ ಸುಮ್ಮನೆ ಕೈ ಬೀಸಿದೆ . ನಿಜವಾಗಲೂ ಅವರೇ ಎಂದು ಗುರುತಿಸಲು ಆಗುತ್ತಿರಲಿಲ್ಲ. ಎಷ್ಟು ಮಜವಾಗಿದೆ ಎಂದು ಒಂದೆರಡು ಕೂಗು ಹಾಕುವ ಹೊತ್ತಿಗೆ ನಾನು ಇನ್ನೊಂದು ಬೆಟ್ಟದ ತುದಿ ತಲುಪಿದ್ದೆ. ಅಯ್ಯೋ ಎಷ್ಟು ಬೇಗ ಮುಗಿಯಿತಲ್ಲ ಎಂದು ಬೇಸರವಾಯಿತು. ಆ ಕೆಲವು ಕ್ಷಣಗಳ ಹಕ್ಕಿಯ ಹಾಗೆ ತೇಲುವ ಅನುಭವವನ್ನು ವರ್ಣಿಸಲು ಅಸಾಧ್ಯ. ಅಷ್ಟು ರೋಮಾಂಚವಾಗಿತ್ತು. ೨೦ ನಿಮಿಷದ ಹೈಕಿಂಗ್ ಮತ್ತು ೧೫ ಸೆಕೆಂಡುಗಳ ಜಿಪ್ ಲೈನಿಂಗ್ ನನಗೆ ಹೊಸ ಚೈತನ್ಯ ತಂದು ಕೊಟ್ಟಿತು.
Monday, April 1, 2019
ಅಮೇರಿಕಾದಲ್ಲಿ ಹೋಳಿಗೆ ತಿಂದರೆ ಏಳಿಗೆಯುಂಟು !!! - Lalitha Prabandha, published in 'Tushar' monthly magazine, March issue
ಜನೆವರಿ-ಫೆಬ್ರವರಿ ಶುರುವಾಗುತ್ತಿದ್ದಂತೆ ಒಂದರ ಹಿಂದೊಂದು ಜಾತ್ರೆಗಳು ಪ್ರಾರಂಭವಾಗುತ್ತವೆ. ಈ ವಾರ ನಮ್ಮೂರ ಜಾತ್ರೆಯಾದರೆ ಮುಂದಿನ ವಾರ ಪಕ್ಕದ ಊರಿನ ಜಾತ್ರೆ. ಚಿಕ್ಕವರಿದ್ದಾಗೇನೋ ನಮಗೆ ಜಾತ್ರೆಗಳಿಂದ ಖುಷಿಯಾಗುತ್ತಿತ್ತು. ಆದರೆ ನಮ್ಮ ತಾಯಂದಿರಿಗೆ ಹೇಗಾಗುತ್ತಿತ್ತು ಎಂದು ಈಗ ಗೊತ್ತಾಗುತ್ತಿದೆ. ಮನೆಯೆಲ್ಲಾ ಶುಚಿಗೊಳಿಸಬೇಕು, ನೆಂಟರನ್ನು ಕರೆಯಿಸಿಕೊಳ್ಳಬೇಕು, ಬಂದವರನ್ನು ಉಪಚರಿಸಬೇಕು ಅಲ್ಲದೇ ಮಹತ್ವದ ಕೆಲಸವೆಂದರೆ ದೇವರಿಗೆ ನೈವೇದ್ಯ ಹೋಳಿಗೆ ಮಾಡಬೇಕಿತ್ತು. ಹೋಳಿಗೆ ಅಂದರೆ ಮುಗೀತು, ಇದಕ್ಕೆ ೨-೩ ಸಿಹಿ ಅಡುಗೆ ಮಾಡುವಷ್ಟು ತಾಳ್ಮೆ , ಸಮಯ ಬೇಕು. ಆದರೆ ಈ ಚಳಿಗಾಲದ ಚಳೀಲಿ ಬಿಸಿ ಬಿಸಿ ಹೋಳಿಗೆ, ನೆಂಜಿಕೊಳ್ಳಲು ತುಪ್ಪ ಜೊತೆಗೆ ಸಂಡಿಗೆ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು. ಒಟ್ಟಿನಲ್ಲಿ ಜಾತ್ರೆಗಳ ಭರಾಟೆ ಶುರುವಾದ್ದರಿಂದಲೂ ಹಾಗೂ ಚಳಿಗಾಲವಾದ್ದರಿಂದಲೂ ಹೋಳಿಗೆಯ ನೆನಪು, ಒಬ್ಬ ಹುಡುಗಿಗೆ, ಬಿಟ್ಟು ಹೋದ ಸಖನ ತರಹ ಮೇಲಿಂದ ಮೇಲೆ ನೆನಪಾಗತೊಡಗಿತು.
ಮನೆಯಲ್ಲಿ ಎಲ್ಲರಿಗಿಂತಲೂ ಚಿಕ್ಕವಳಾದ ಕಾರಣ ನಾನು ಎಂದಿಗೂ ಅಡುಗೆ ಮನೆ ಕಡೆ ಸುಳಿದವಳಲ್ಲ (ತಿನ್ನೋದಕ್ಕೆ ಹೋಗೋದು ಬಿಟ್ಟರೆ). ಮದುವೆಯಾದ ಹೊಸದರಲ್ಲಿ ಒಗ್ಗರಣೆ ಕೊಡಬೇಕಾದರೆ ಸಾಸಿವೆ, ಕರಿಬೇವು ಚಟಪಟ ಅನ್ನೋದೇ ತಡ, ನಾನು ಮಾರುದ್ದ ಸರಿದು ನಿಂತಿರುತ್ತಿದ್ದೆ. ನಾವು ಯಾವಾಗ ಅಮೆರಿಕಕ್ಕೆ ಹೋದೆವೋ ಆವಾಗ್ಲೇ ಭಾರತೀಯ ಅಡುಗೆಯ ಮಹತ್ವ ತಿಳಿಯಿತು. ಅಲ್ಲಿ ಎಲ್ಲಾದರೂ ಸುತ್ತಾಡಲು ಹೋದರೆ ಜೊತೆಗೆ ಮನೆಯಲ್ಲಿ ಮಾಡಿದ ಚೂಡಾ ಚಕ್ಕುಲಿ ಒಯ್ಯುತ್ತಿದ್ದೆವು. ಭಾರತೀಯ ಹೋಟೆಲ್ಲುಗಳು ದುಬಾರಿಯಾದ್ದರಿಂದ, ಏನೋ ಒಂದು ಸಿಗುವ ಸ್ಯಾಂಡ್ವಿಚ್ ತಿಂದು ಮೇಲೆ ಈ ಚೂಡಾ-ಚಕ್ಕುಲಿ ತಿನ್ನುವುದು. ಊಟವಾದ ಮೇಲೆ ಮೌತ್ ಫ್ರೆಶ್ನೆರ್ ಆಗಿ ಸೋಂಪನ್ನು ತಿನ್ನುವ ತರಹ ನಮ್ಮದು ಖಾರ ಫ್ರೆಶ್ನೆರ್ ! ನಾಲಿಗೆಯ ರುಚಿ ಗ್ರಂಥಿಗಳನ್ನು ಸಜೀವವಿಡಲು! ಅವಾಗೆಲ್ಲ ನನಗೆ ಕಾಡಿದ್ದು ಒಂದು ಪ್ರಶ್ನೆ, ಏನೆಂದರೆ ಅಮೇರಿಕಾ ಮುಂದುವರೆದ ದೇಶ ಅಂಥ ಚಿಕ್ಕಂದಿನಿಂದ ಓದುತ್ತ ಬಂದರೂ, ಇವರು ಯಾಕೆ ಶಿಲಾಯುಗದ ತರಹ ಬರೀ ಹಸಿ ಸೊಪ್ಪು ಅಥವಾ ಮಾಂಸವನ್ನು ಸುಟ್ಟೋ ತಿನ್ನುತ್ತಾರೆ? ಒಗ್ಗರಣೆ ದೂರಿನ ಮಾತು. ಅದಕ್ಕೆ ಕನಿಷ್ಠ ಪಕ್ಷ ಉಪ್ಪು ಖಾರ ಉಪಯೋಗಿಸುವುದು ಗೊತ್ತಿಲ್ಲವೇ?! ಎಲ್ಲರಿಗೂ ಪರದೇಶಕ್ಕೆ ಹೋದರೆ ದೇಶಭಕ್ತಿ ಇಮ್ಮಡಿಯಾಗುತ್ತದೆ. ನನಗೆ ದೇಶಭಕ್ತಿ ಜೊತೆ ಅಡುಗೆ ಮೇಲಿನ ಭಕ್ತಿಯೂ ದ್ವಿಗುಣಗೊಂಡಿತು. ಮನೆ ಬಿಟ್ಟು ದೂರ ಇದ್ದುದರಿಂದಲೂ ಹಾಗೂ ಜಾತ್ರೆ ಸಮಯವಾದ್ದರಿಂದ ಹೋಳಿಗೆ ತಿನ್ನಬೇಕು ಎನಿಸಿತು. ಸರಿ, ಕೂಡಲೇ ಅಮ್ಮನಿಗೆ ಫೋನಾಯಿಸಿದೆ. ಫೋನ್ ರಿಂಗ್ ಆಗುತ್ತಲೂ ನನ್ನ ತಲೆಯಲ್ಲಿ; ಹೋಳಿಗೆ ಮಾಡಿ ಅದನ್ನು ತುಪ್ಪದ ಜೊತೆ ತಿನ್ನುವ ಚಿತ್ರ ಬಂದಿತ್ತು. ಅಮ್ಮ ನನ್ನ ಆಸೆ ಕೇಳಿ, "ಏನಾಯಿತೇ? ಏನಾದರೂ ವಿಶೇಷ ಇದೆಯಾ?" ಅಂತ ಕೇಳಬೇಕೆ? ಆಗ ಗೊತ್ತಾಯಿತು, ಅಮೆರಿಕದಲ್ಲಿರುವ ನಾನು ನನ್ನ ಮಧ್ಯಾಹನ ಫೋನ್ ಮಾಡಿದರೂ, ಅಮ್ಮನಿಗೆ ಅದು ಬೆಳಗಿನ ಜಾವ ೨ ಗಂಟೆ. ಆ ಹೊತ್ತಿಗೆ ಹೋಳಿಗೆ ಮಾಡೋದು ಹೇಗೆ ಎಂದು ಕೇಳಿದ್ದಕ್ಕೆ ಅವರು ಬಸುರಿ ಬಯಕೆ ಅಂತ ತಿಳಿದಿದ್ದರು!!
ಅಮ್ಮನ ಆಜ್ಞೆಯಂತೆ ಹೂರಣದ ಹೋಳಿಗೆಗೆ ಬೇಕಾಗುವ ಸಾಮಗ್ರಿಗಳ ಪಟ್ಟಿ ಮಾಡಿಕೊಂಡೆ. ಆದರೆ ಕೈಯಲ್ಲಿ ಆ ಪಟ್ಟಿ ಹಿಡಿದುಕೊಂಡು ಅಂಗಡಿಯಲ್ಲಿ ನಿಂತಾಗ ಎದೆ ಧಸಕ್ಕೆಂದಿತು. ಇಷ್ಟು ದೊಡ್ಡ ಸೂಪರ್ ಮಾರ್ಕೆಟಿನಲ್ಲಿ ಎಲ್ಲಿ ಅಂತ ಹುಡುಕಾಡೋದು? ಒಮ್ಮೆ ಮೊಬೈಲ್ ಬ್ಯಾಟರಿ ಚೆಕ್ ಮಾಡಿದೆ. ಇಷ್ಟು ದೊಡ್ಡ ಮಾರ್ಕೆಟಿನಲ್ಲಿ ಕಳೆದು ಹೋದೆನೆಂಬ ಭಯ! (ಇದ್ಯಾಕೋ ಅತಿಯಾಯ್ತು ಅನ್ಕೋಬೇಡಿ. ಇಲ್ಲಿ ಮಾರ್ಕೆಟಗಳು ಸುಮಾರು ೨ ಎಕರೆ ಪ್ರದೇಶವನ್ನು ಅವರಿಸಿಕೊಂಡಿರುತ್ತವೆ!) ನಮ್ಮ ಬಾಲ್ಯದಲ್ಲಿ; ಊರಿನಲ್ಲಿ ಇರೋ ಒಂದು ಪುಟ್ಟ ಅಂಗಡಿಗೆ ಹೋಗಿ ಪಟ್ಟಿ ಕೊಟ್ಟರೆ ಸಾಕು, ಅಂಗಡಿಯಾತ ಪಟಪಟ ಅಂತ ಕೊಟ್ಟು ಬಿಡುತ್ತಿದ್ದ. ಅಮ್ಮ ಹೇಳಿದ್ದು, ಅವನು ಕೊಟ್ಟಿದ್ದು ಎರಡೂ ಸರಿಯಾಗಿರುತ್ತಿತ್ತು. ಜೊತೆಗೆ ನನಗೆ ಕಮಿಷನ್ ಬೇರೆ ಸಿಗುತ್ತಿತ್ತು (ಉಳಿದ ಚಿಲ್ಲರೆ). ಇಲ್ಲಿ ಎಷ್ಟೊಂದು ವೈವಿಧ್ಯ? ಯಾವ ತರಹದ ಬೆಲ್ಲ ತಗೋಬೇಕು ಅಂತ ಹೇಗೆ ತಿಳಿಯೋದು? ಬೆಲ್ಲದ ಪ್ಯಾಕೆಟ್ ಮೇಲಿನ ವಿವರ ಹೋಳಿಗೆಗೆ ಸಂಭಂದಿಸಿದ್ದಿಲ್ಲ! ಸರಿ, ಯಾವ ಪ್ಯಾಕೆಟ್ನಲ್ಲಿ ನಾನು ಮೊದಲು ನೋಡಿದ ಬೆಲ್ಲದ ತರಹ ಇರುತ್ತದೋ ಹಾಗೂ ಅದರ ಜೊತೆಗೆ, ನೋಡಿದ ತಕ್ಷಣ ಬಾಯಲ್ಲಿ ಜಾಸ್ತಿ ನೀರು ಬರುವುದೋ ಅದನ್ನೇ ತಗೊಂಡರಾಯಿತು ಎಂದು ನಿರ್ಧಾರ ಮಾಡಿದೆ. ಊರಲ್ಲಿ ಅಬ್ಬಬ್ಬಾ ಅಂದರೆ ೫೦೦೦ ಜನಸಂಖ್ಯೆಗೆ ಒಂದು ಪುಟ್ಟ ಅಂಗಡಿ ಆಹಾರ ಸಾಮಗ್ರಿಗಳನ್ನು ಪೂರೈಸುತ್ತಿತ್ತು. ಇಲ್ಲಿರುವ ಜನಸಂಖ್ಯೆಗೆ ಇಷ್ಟೊಂದು ದೊಡ್ಡ ಸೂಪರ್ ಮಾರ್ಕೆಟ್ ಬೇಕಾ ಎಂದೆನಿಸಿತ್ತು. ಬರೀ ಆರು ಸಾಮಾನು ತರೋಕೆ ನನಗೆ ಬರೋಬ್ಬರಿ ಮೂರು ಗಂಟೆ ಹಿಡಿಯಿತು. ನಮ್ಮಮ್ಮ ಆಗಿದ್ದರೆ ಅಷ್ಟರಲ್ಲಿ ಹೋಳಿಗೆ ಮಾಡಿ ಊಟಾನೂ ಮುಗಿದಿರುತ್ತಿತ್ತು. ಮನೆಗೆ ಅನಿರೀಕ್ಷಿತವಾಗಿ ನೆಂಟರು ಬಂದರೆ, ಬೇಕಾಗಿರೋ ಸಾಮಗ್ರಿಗಳನ್ನು ನಾವು ಹಿತ್ತಲು ಬಾಗಿಲಿನಿಂದ ಹೋಗಿ ಕ್ಷಣಮಾತ್ರದಲ್ಲಿ ತಂದು ಬಿಡುತ್ತಿದ್ದೆವು. ಇಲ್ಲೇನಾದರೂ ಹಾಗೆ ನೆಂಟರು ಬಂದರೆ ಅವರಿಗೆ ಚಹಾನೇ ಗತಿ!
ಹೂರಣದ ಹೋಳಿಗೆ ಮಾಡುವ ದಿನ ಬಂದೇ ಬಿಟ್ಟಿತು. ಚಿಕ್ಕವರಿದ್ದಾಗ ಅನ್ನುತ್ತಿದ್ದ ಒಂದು ಜಾನಪದ ಪದ್ಯದ ಸಾಲು ನೆನಪಾಯಿತು "ಕತ್ತಿ ಕತ್ತಿ ಕಾರಣ, ಮುದುಕಿ ಹೂರಣ" . ಅದನ್ನೇ ಮೆಲಕು ಹಾಕುತ್ತ ಹೋಳಿಗೆ ಮಾಡುವ ಕಾರ್ಯಕ್ರಮ ಶುರುವಾಯಿತು. ಈ ಸಲ ಗೂಗಲ್ ನ ಸಹವಾಸಕ್ಕೆ ಹೋಗದೇ ಅಮ್ಮನ ಅಣತಿಯಂತೆ ಎಲ್ಲ ಪೂರ್ವತಯಾರಿ ಮಾಡಿಕೊಂಡಿದ್ದೆ. ಹಿಂದೆ ಒಂದು ಸಾರಿ ಅಂತರ್ಜಾಲವನ್ನು ನಂಬಿ ಪಾವ್ ಭಾಜಿ ಮಾಡಿ ಕೈ ಸುಟ್ಟಿಕೊಂಡಿದ್ದೆ . ಅದು ಎಷ್ಟು ಖಾರವಾಗಿತ್ತೆಂದರೆ, ಅದನ್ನು ಆಕಳಿಗೆ ಹಾಕಿದಾಗ ತಿಂದೊಡನೆ ಅದು ಖಾರ ಹತ್ತಿದಂತೆ ಕೋಲೆ ಬಸವನ ಹಾಗೆ ತಲೆ ಅಲ್ಲಾಡಿಸ ಹತ್ತಿತ್ತು! ಅದನ್ನು ಯಾರಾದರೂ ನೋಡುವ ಮೊದಲೇ ಒಂದು ಬುಟ್ಟಿ ನೀರನ್ನು ಇಟ್ಟು ಪಟ್ಟನೆ ಬಾಗಿಲು ಹಾಕಿಕೊಂಡು ಬಂದಿದ್ದೆ. ಅದೂ ಅಲ್ಲದೆ ಹೋಳಿಗೆ ಅಂತ ಟೈಪ್ ಮಾಡಿದರೆ ಅದು ಡಿಡ್ ಯು ಮೀನ್ ಹೋಳಿಗೆ? ಅಂತ ಕೇಳಿ ಇನ್ನಷ್ಟು ಗೊಂದಲುಗೀಡು ಮಾಡಿ ಕಡೆಗೆ ತನಗೆ ಗೊತ್ತಿದ್ದನ್ನೆಲ್ಲಾ ತೋರಿಸತೊಡಗುತ್ತದೆ. ಹೋಳಿಗೆ ರೆಸಿಪಿ, ಒಬ್ಬಟ್ಟು ರೆಸಿಪಿ, ಬೊಬ್ಬಟ್ಲು ರೆಸಿಪಿ, ಪೂರನ್ ಪೋಳಿ, ಬೇಳೆ ಹೋಳಿಗೆ ರೆಸಿಪಿ ಇತ್ಯಾದಿ. ಲ್ಯಾಬ್ ಎಕ್ಸಾಮಿನ ವೈವಾ ದಲ್ಲಿ ಉಪನ್ಯಾಸಕರು ಒಂದು ಪ್ರಶ್ನೆ ಕೇಳಿದರೆ, ಅದಕ್ಕೆ ಸರಿಯಾದ ಉತ್ತರ ಗೊತ್ತಿಲ್ಲವಾದ್ದರಿಂದ ಅದಕ್ಕೆ ರಿಲೇಟೆಡ್ ಉತ್ತರ ಕೊಡುವ ವಿದ್ಯಾರ್ಥಿಗಳಂತೆ!! ಹೂರಣ ಮಾಡಲು ಇಲ್ಲಿ ಕೈಯಂತ್ರ ಇಲ್ಲವಾದ್ದರಿಂದ ಮಿಕ್ಸಿಗೆ ಹಾಕಿಕೊಂಡದ್ದಾಯಿತು. ಊರಲ್ಲಾಗಿದ್ರೆ ಇದನ್ನ ಕಲ್ಲಿನ ಮೇಲೆ ಅರೆದು ಅರೆದು ಹೂರಣ ಆದ ಮೇಲೆ, ಕಲ್ಲನ್ನು ಸ್ವಚ್ಛಗೊಳಿಸಲು ನನಗೆ ಕೊಡುತ್ತಿದ್ದರು. ನಾನು ಮೊದಲು ಅದನ್ನು ಅಂಗೈಯಿಂದ, ಆಮೇಲೆ ಕೈಬೆರಳುಗಳಿಂದ, ನಂತರ ನಾಲಿಗೆಯಿಂದ ಸ್ವಚ್ಛ ಮಾಡುತ್ತಿದ್ದೆ. ಇದಾದ ಮೇಲೂ ಏನಾದರೂ ಉಳಿದಿತ್ತೆಂದರೆ ಸ್ವಲ್ಪ ನೀರು ಹಾಕಿ ತೊಳೆದವರ ಹಾಗೆ ನಟಿಸುವುದು. ಈಗ ಹಾಗೆ ಮಾಡಲಿಕ್ಕಾಗುವುದಿಲ್ಲ. ಮಿಕ್ಸರ್ ಬ್ಲೇಡ್ ಗೆ ನೀರೇ ಗತಿ. ನನ್ನ ನಾಲಿಗೆಯಿಂದ್ ಶುಚಿಗೊಳ್ಳುವ ನಸೀಬು ಇದಕ್ಕಿಲ್ಲ.
ಮೊದಲು ನೈವೇದ್ಯಕ್ಕೆಂದು ಸಾಮಾನ್ಯ ಗಾತ್ರದ ಹೋಳಿಗೆ ಮಾಡಿ, ನಂತರ ದೊಡ್ಡ ಗಾತ್ರದ ಹೋಳಿಗೆ ಮಾಡಿದರಾಯಿತು ಎಂದುಕೊಂಡೆ. ಇದೂ ಕೂಡ ಅಮ್ಮನ ಶೈಲಿಯೇ. ಏಕೆಂದರೆ ಹಬ್ಬ ಹರಿದಿನಗಳಲ್ಲಿ ಬರೀ ದೇವರಿಗಲ್ಲದೆ, ಹೊಲದಲ್ಲಿ ಇರುವ ದೇವರು, ಬಾವಿಯ ಮೋಟರ್ ಪಂಪು, ಸೀಮೆ ದೇವರು ಹೀಗೆ ಜಾಸ್ತಿ ಸಂಖ್ಯೆಯ ಹೋಳಿಗೆ ಮಾಡಬೇಕಾದ್ದರಿಂದ ಮಧ್ಯಮ ಗಾತ್ರದ ಹೋಳಿಗೆ ಮಾಡಿ ಮುಗಿಸಿ ಬಿಡುತ್ತಿದ್ದರು. ಚಿಕ್ಕಂದಿನಿಂದಲೂ ಅಮ್ಮನಿಗೆ ಸಹಾಯಕಿಯಾಗಿ ಕೆಲಸ ಮಾಡಿದ್ದರಿಂದಲೂ ಹಾಗೂ ಹೊಲಕ್ಕೆ ನೈವೇದ್ಯ ಕೊಡಲು ಅಪ್ಪನ ಜೊತೆ ನಾನೂ ಹೋಗುತ್ತಿದ್ದರಿಂದಲೂ ನನಗೆ ಇಂತ ಸೂಕ್ಷ್ಮಗಳ ಅರಿವಿತ್ತು. ಹೊಲಕ್ಕೆ ಹೋಗಲು ಇನ್ನೂ ಒಂದು ಕಾರಣವಿತ್ತು, ಏನಪ್ಪಾ ಅಂದರೆ ಒಂದು ನೈವೇದ್ಯ ಬಾವಿಗೆ ತೋರಿಸಿ ಅದನ್ನು ಬಾವಿಗೇ ಹಾಕುತ್ತಿದ್ದುದು. ಇದರಲ್ಲೇನು ವಿಶೇಷ ಅಂದಿರಾ? ಬಾವಿಯ ನೀರಿನಲ್ಲಿ ಹೋಳಿಗೆ ದೊಪ್ಪ ಎಂದು ಬಿದ್ದಿದ್ದೇ ತಡ, ಕಲ್ಲಿನ ಮೇಲೆ ಕುಳಿತಿರುತ್ತಿದ್ದ ಏಡಿಯು ಧ್ಯಾನಭಂಗವಾದ ಸನ್ಯಾಸಿಯಂತೆ ಪಟ್ಟನೆ ಕಲ್ಲಿನ ಸಂದಿಗೆ ಹೋಗಿ ಬಿಡುತ್ತಿತ್ತು ಹಾಗೂ ನೀರು ಅಲೆ ಅಲೆಯಾಗಿ ಇನ್ನು ದಡ ಮುಟ್ಟುವ ಮೊದಲೇ, ಮೀನುಗಳು ಹೋಳಿಗೆಗೆ ಆಕ್ರಮಣ ಮಾಡಿ ತಿನ್ನಲು ಪ್ರಾರಂಭಿಸುತ್ತಿದ್ದವು. ಹೋಳಿಗೆ ಕ್ಷಣ ಹೊತ್ತು ನೀರಿನ ಮೇಲೆ ತೇಲಿ ನಂತರ ಮೀನುಗಳ ಸಂಖ್ಯೆಯ ಆಧಾರದ ಮೇಲೆ ಮುಳುಗುವ ವೇಗಮಿತಿಯನ್ನು ನಿಗದಿ ಪಡಿಸುತ್ತಿತ್ತು. ಹೋಳಿಗೆಯ ಕೆಳಭಾಗ ನೀರಿನಲ್ಲಿ ನೆನೆದಿದ್ದರಿಂದಲೂ ಹಾಗೂ ಮೀನುಗಳ ದಾಳಿಯಿಂದಲೂ ಅದು ಹೋಳಾಗಿ ಮುಳುಗಲು ಪ್ರಾರಂಭಿಸುತ್ತಿತ್ತು. ಆಗ ಅದರ ಮೇಲೆ ಹಚ್ಚಿರುವ ಅನ್ನ ತನ್ನ ಸಾಂದ್ರತೆಯಿಂದ ಬೇಗ ಕೆಳಗಿಳಿಯುತ್ತಿತ್ತು. ಮೀನುಗಳ ಗುಂಪು ಗಡಿಬಿಡಿಯಿಂದ ಮೊದಲು ಅದನ್ನು ತಿಂದು ಮುಗಿಸಿ ಮತ್ತೆ ಹೋಳಿಗೆಯ ಕಡೆ ಧಾವಿಸುತ್ತಿದ್ದವು. ಹೋಳಿಗೆಯ ಎರಡೂ ಬದಿಯನ್ನು ಕಚ್ಚಿ ತಿಂದರಿಂದ ಅದರಲ್ಲಿಯ ಹೂರಣ ಹೊರಗೆ ಬಂದು ಅದು ಕೂಡ ಸಾಂದ್ರ ಬಲದಿಂದ ಬೇಗನೆ ಕೆಳಗಿಳಿಯಲು, ಮೀನುಗಳು ಮತ್ತೆ ಅದರ ಕಡೆ ಧಾವಿಸುತ್ತಿದ್ದವು. ಕೊನೆಗೆ ಮುಗಿಯಿತೆಂದು ಕೆಲ ಮೀನುಗಳು ಚದುರಿ ಹೋದರೂ ಸಂಡಿಗೆಯೊಂದು ನೀರಿನ ಮೇಲೆ ತೇಲುತ್ತಿರುತ್ತಿತು. ಅದರ ಸುತ್ತ ಎಣ್ಣೆಯೆಲ್ಲ ಹರಡಿ, ಅದರಲ್ಲಿ ಕಾಮನಬಿಲ್ಲಿನ ಬಣ್ಣಗಳು ಗೋಚರಿಸುತ್ತಿತ್ತು. ಮೀನುಗಳಿಗೆ ಅದು ಅಪರಿಚಿತವಾಗಿ ಕಂಡು ತಿನ್ನಲೋ ಬೇಡವೋ ಎಂಬಂತೆ ಸುಮ್ಮನೆ ಕಚ್ಚಿ ನೋಡುತ್ತಿದ್ದವು. ಇದೆಲ್ಲ ಕೆಲವೇ ಕ್ಷಣಗಳಲ್ಲಿ ನಡೆದು ಹೋದರೂ ಇದು ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದ ನೆನಪು. ಈಗಲೂ ಮನೆಗೆ ಹೋದೆನೆಂದರೆ "ನಾನೂ ಬರಲೇ ಅಪ್ಪಾಜಿ?" ಎಂದು ಕೇಳುವೆ. ಅವರು ಮಾತ್ರ "ನೀನು ನಿನ್ನ ಪಡಿಯಚ್ಚನ್ನು ನೋಡಿಕೋ ಸಾಕು " ಎಂದು ಮೊಮ್ಮಗನನ್ನು ನೋಡಿಕೊಂಡಿರು ಎನ್ನುವರು. ಆದರೆ, ಇವತ್ತು ಮಾತ್ರ ನನಗೆ ಯಾವ ಗಾತ್ರದ ಹೋಳಿಗೆಯೂ ಆಗುವ ಹಾಗೆ ಕಂಡು ಬರಲಿಲ್ಲ. ಹೂರಣ ಗಟ್ಟಿಯಾಯಿತೋ? ಹಿಟ್ಟಿನ ಕನಕ ತೆಳುವಾಯಿತೋ ಹೇಳುವವರಾರು? ಆ ದೇವರೇ ಬಲ್ಲ. ಸ್ವಲ್ಪ ಪ್ಯಾಚ್ ವರ್ಕ್ ಮಾಡಿ ಹಾಗೂ ಅಲ್ಲಿ ಇಲ್ಲಿ ತೀಡಿ ಒಂದೈದು ಯಾವುದ್ಯಾವುದೋ ನಕಾಶೆ ಆಕಾರದಲ್ಲಿ ಹೋಳಿಗೆಗಳು ಸಿದ್ಧಗೊಂಡವು. ಆದರೂ ಮನಸ್ಸು ತೃಪ್ತಿಯಾಗಲಿಲ್ಲ. ಮತ್ತೆ ಮಾಡಿದರಾಯಿತು ಎಂದುಕೊಂಡೆ, ಆದರೆ ತಾಳ್ಮೆ ಬೇಕಲ್ಲ. ಅಮ್ಮ ಹೇಳುತ್ತಿದ್ದರು, ಹೋಳಿಗೆ ಮಾಡುವವರ ಮುಖ ಸುದ್ಧಿವಾಚಕರ ಮುಖದಂತಿರಬೇಕು(ದೂರದರ್ಶನದ ಸುದ್ಧಿ ವಾಚಕರನ್ನು ನೆನಪಿಸಿಕೊಂಡರೆ ಒಳಿತು. ಬೇರೆ ಮಾಧ್ಯಮದ ಸುದ್ಧಿ ವಾಚಕರ ಮುಖ ನೆನಪಿಗೆ ಬಂದರೆ ಅದಕ್ಕೆ ನಾನು ಜವಾಬ್ದಾರಳಲ್ಲ.) ಯಾವ ಭಾವನೆಯೂ ಇಣುಕಬಾರದು. ಗಂಡನ ಮೇಲಿನ ಕೋಪವನ್ನೋ ಅಥವಾ ಅತ್ತೆಯ ಮೇಲಿನ ದ್ವೇಷವನ್ನೋ ಹೋಳಿಗೆ ಮೇಲೆ ತೋರಿಸುವಂತಿಲ್ಲ. ಮನಸ್ಸು ಅಷ್ಟು ನಿರ್ಮಲವಾಗಿರಬೇಕು. ಅದಕ್ಕೇ ಏನೋ ನಮ್ಮ ಪೂರ್ವಜರು ಇದನ್ನು ನೈವೇದ್ಯಕ್ಕೆ ಯೋಗ್ಯವಾಗಿ ಪರಿಗಣಿಸಿದ್ದಾರೆ.
ವಿಧಿ ತನ್ನ ಆಟ ಮುಂದುವರಿಸಿತು. ಅಂತೂ ಇಂತೂ ಒಂದು ಗುಂಡಗಿರುವ ಒಳ್ಳೆಯ ಹೋಳಿಗೆ ಸಿದ್ಧಪಡಿಸಿ ಬೇಯಿಸ ಹೊರಟರೆ ಅದು ಹರಿದು ಹೋಗಬೇಕೆ? ಬೇಯಿಸುವುದಕ್ಕೂ ನೈಪುಣ್ಯತೆ ಬೇಕು. ಬಹುಶಃ ಈ ಕಾರಣಕ್ಕೇ ಇದನ್ನು ಯಾವ ಅಡುಗೆ ರಿಯಾಲಿಟಿ ಶೋ ನಲ್ಲೂ ಮಾಡೋದಿಲ್ಲ. ಅಮ್ಮ ಬರಿಗೈಯಿಂದ್ ಬೇಯಿಸುತ್ತಿದ್ದ ನೆನಪು. ಅದು ನನ್ನಿಂದ ಅಸಾಧ್ಯದ ಮಾತಾಗಿತ್ತು. ಚೂಪಾದ ಚಪಾತಿ ಬೇಯಿಸುವ ಚಮಚದಿಂದ ಬೇಯಿಸಿದ್ದರಿಂದ ಅದು ಹರಿದು ಹೋಗಿತ್ತು. ಅದರ ಒಳಗಿರುವ ಹೂರಣ ಆಚೆ ಬಂದು ಸುಟ್ಟು ಹೋಗಿ ಹೊಗೆಯಾಡುತ್ತಿತ್ತು. ಇನ್ನೇನು ಫೈರ್ ಅಲಾರ್ಮ್ ಕೂಗಿಕೊಂಡು ಮನೆಯಲ್ಲೆಲ್ಲ ನೀರು ಚಿಮುಕಿಸುವುದರಲ್ಲಿತ್ತು. ಅಷ್ಟರಲ್ಲಿ ಕಿಟಕಿ ತೆಗೆದು ಹೊಗೆಯನ್ನೆಲ್ಲಾ ಹೊರಗಟ್ಟಿದೆ. ಅದೇ ಬೆಂಗಳೂರಿನಲ್ಲಾಗಿದ್ದರೆ, ಸುಟ್ಟ ವಾಸನೆ ಪತ್ತೆ ಹಚ್ಚಿ ಬಾಡಿಗೆ ಮನೆಯ ಮಾಲೀಕರು ಬಂದು "ಏನಮ್ಮಾ ಸುಟ್ಟ ಹೊಗೆಗೆ ಮನೆಯ ಗೋಡೆ ಕಪ್ಪಾದರೆ ಏನು ಗತಿ ?" ಎಂದು ತರಾಟೆ ತಗೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ. ನೆರೆಹೊರೆಯವರು ಬಂದು "ಓಹ್ ಹೋಳಿಗೆ ಮಾಡಲು ಯಾಕೆ ಹೋದಿರಿ?", "ಸರಿಯಾಗಿ ತೋರಿಸಲಾದ ವೆಬ್ ಸೈಟ್ ನೋಡಬಾರದೇ?" ಎಂದೆಲ್ಲಾ ಕೇಳುತ್ತಿದ್ದರೋ ಏನೋ? ಅದಕ್ಕೆ ಹೋಲಿಸಿದರೆ ಫೈರ್ ಅಲಾರ್ಮ್ ಎಷ್ಟೋ ಪಾಲು ಒಳ್ಳೆಯದು!
ಹೋಳಿಗೆ ಮಾಡಿ ವಿಡಿಯೋ ಕಾಲ್ ಮುಖಾಂತರ ಅಮ್ಮನಿಗೆ ತೋರಿಸಿ ಶಹಬ್ಬಾಸ್ ಪಡೆಯಬೇಕೆಂದು ವಿಚಾರ ಮಾಡಿದ್ದೆ. ಎಲ್ಲ ಹಾಳಾಗಿ ಹೋಯಿತು. ಹೋಗಲಿ ಹೋಳಿಗೆ ಫೋಟೋ ಫೇಸ್ಬುಕ್ ನಲ್ಲಿ ಹಾಕಿ ಅತಿ ಹೆಚ್ಚು ಲೈಕ್ ಗಿಟ್ಟಿಸಬೇಕೆಂಬ ಕನಸೂ ನುಚ್ಚು ನೂರಾಯಿತು. ಕಡೆಗೆ, ರುಚಿ ಬೇರೆಯಾಗಿದ್ದರಿಂದ ಹಸುವಿಗಾದರೂ ಹಾಕೋಣವೆಂದರೆ ಇಲ್ಲಿ ಯಾವ ಪ್ರಾಣಿಯೂ ಇಲ್ಲ. ರಾತ್ರಿ ಕಣ್ಣು ಮುಚ್ಚಿದರೂ ಮನಸಲ್ಲಿ ಬಗೆ ಬಗೆಯ ಕಾಯಿ ಹೋಳಿಗೆ, ಶೇಂಗಾ ಹೋಳಿಗೆ, ಸಜಕದ ಹೋಳಿಗೆ, ಹುರೆಕ್ಕಿ ಹೋಳಿಗೆ, ಗೆಣಸಿನ ಹೋಳಿಗೆ, ಖರ್ಜೂರದ ಹೋಳಿಗೆ ಬಂದು ಅಣಕಿಸುತ್ತಿದ್ದವು. ಬೆಳಿಗ್ಗೆ ನನ್ನ ಫೋನ್ ಟುಯ್ ಟುಯ್ ಎಂದು ಬಡಕೊಂಡಾಗಲೇ ಎಚ್ಚರ ಆಗಿದ್ದು. ತೆರೆದು ನೋಡಿದರೆ, ನನ್ನ ಬಂಧು ಬಳಗ ಇರುವ ವಾಟ್ಸಪ್ಪ್ ಗ್ರೂಪ್ ನಲ್ಲಿ ನನ್ನ ನಕಾಶೆಯಾಕಾರದ ಹೋಳಿಗೆ. ಅದರ ಕೆಳಗೆ ಪುಂಖಾನುಪುಂಖವಾಗಿ ಬರುತ್ತಿರುವ ತರಾವರಿ ಸ್ಟೈಲಿಗಳು! ಅದನ್ನು ಪೋಸ್ಟ್ ಮಾಡಿದವರು ಮಾತ್ರ ಬೆಚ್ಚನೆಯ ಹೊದಿಕೆಯಲ್ಲಿ ಮಲಗಿಕೊಂಡೇ ಮುಸಿ ಮುಸಿ ನಗುತ್ತಿದ್ದರು.
ಅರ್ಪಣೆ!!- Published in Kannada Prabha news paper on 28th March 2019
ಬೇಸಿಗೆ ರಜೆಗಿಂತ ಮೊದಲು ಎಲ್ಲ ಕಾಲೇಜುಗಳಲ್ಲಿ, ಸ್ನೇಹ ಸಮ್ಮೇಳನ/ವಾರ್ಷಿಕೋತ್ಸವ ನಡೆಯುವ ಭವ್ಯ ಕಾಲ. ಆ ಎರಡು ಮೂರು ದಿನಗಳ ಆಚರಣೆಗೆ ಕೆಲ ತಿಂಗಳು ಮೊದಲೇ ತಯಾರಿ ನಡೆದಿರುತ್ತದೆ. ಅದರಲ್ಲೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇದೊಂದು ಪರ್ವಕಾಲ ಎಂದೇ ಹೇಳಬೇಕು. ವಿದ್ಯಾರ್ಥಿಗಳಿಂದ ಶುರುವಾಗಿ ಶಿಕ್ಷಕ ವೃಂದ ಹಾಗೂ ಪಠ್ಯೇತರ ಸಿಬ್ಬಂದಿಗಳೂ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕಾಲ. ಅಲ್ಲದೇ ಕಾರ್ಯಕ್ರಮಗಳಲ್ಲೂ ಅಷ್ಟೇ ವಿಭಿನ್ನತೆ.
ನನಗಿನ್ನೂ ನೆನಪಿದೆ, ಅದು ಇಂಜಿನೀರಿಂಗ್ ಮೊದಲ ವರ್ಷ. ನಾವಿಲ್ಲ್ಯಾಕೆ ಬಂದಿದ್ದೀವಿ, ಏನೇನು ಓದಬೇಕು, ಹೇಗೆಲ್ಲ ಪರೀಕ್ಷೆ ಎದುರಿಸಬೇಕು ಎಂಬ ಮುಂತಾದ ವಿಷಯಗಳನ್ನು ತಿಳಿಯುವ ಮೊದಲೇ ಪರೀಕ್ಷಾ ವೇಳಾಪಟ್ಟಿ ನೋಟಿಸ್ ಬೋರ್ಡ್ ಮೇಲೆ ನೇತಾಡುತ್ತಿತ್ತು. ಅಂತದ್ದರಲ್ಲಿ ಈ ವಾರ್ಷಿಕೋತ್ಸವದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ದೂರದ ಮಾತು. ಹಾಸ್ಟೆಲ್ಲಿನ ಹುಡುಗಿಯರನ್ನು ಬಿಟ್ಟರೆ (ಅವರಿಗೆ ಸೀನಿಯರ್ಸ್ ಒತ್ತಡದಿಂದ ಭಾಗವಹಿಸಲೇಬೇಕಾಗಿತ್ತು!), ನಾವು ಸುತ್ತಲಿನ ಊರುಗಳಿಂದ ಎಡತಾಕುವವರಿಗೆ ವಾರ್ಷಿಕೋತ್ಸವದ ಬಗ್ಗೆ ಹೆಚ್ಚೇನೂ ಕುತೂಹಲವಿರಲಿಲ್ಲ. ಕುತೂಹಲವಿದ್ದುದು ಎರಡೇ ವಿಷಯಗಳಿಗೆ; ಒಂದು ಅವತ್ತು ಊಟಕ್ಕೆ ಏನೇನಿರುತ್ತದೆ? ಎರಡೆನೆಯದು ಮತ್ತು ಮುಖ್ಯವಾದದ್ದು ವಾರ್ಷಿಕೋತ್ಸವದ ಕಾರ್ಯಕ್ರಮಗಳು ಮುಗಿದ ಮೇಲೆ ಕಾಲೇಜ್ ಬಸ್ ಅರೇಂಜ್ಮೆಂಟ್ ಇರುತ್ತದೆಯೋ ಎಂದು!
ಹೀಗಿರುವಾಗ, ವಾರ್ಷಿಕೋತ್ಸವದ ಮೊದಲನೇ ದಿನ ಒಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಏನೆಂದರೆ, ಒಬ್ಬರು ತಮ್ಮ ಪ್ರೀತಿಪಾತ್ರರಾದವರಿಗೆ ಅಥವಾ ಸ್ನೇಹ ಸಂಬಂಧಕ್ಕಾಗಿ ಒಂದು ಕವಿತೆ, ಚಿತ್ರಗೀತೆ ಅಥವಾ ಶಾಯರಿ ಅರ್ಪಿಸುವುದು. ಕಾರ್ಯಕ್ರಮ ನಡೆಸಿಕೊಡುವ ನಿರೂಪಕರು, ಈ ಹಾಡು ಯಾರಿಂದ ಹಾಗೂ ಯಾರಿಗೋಸ್ಕರ ಎಂದು ಮೈಕ್ ನಲ್ಲಿ ಪುಕಾರಿಸುತ್ತಿದ್ದರು. ಕಾರ್ಯಕ್ರಮ ಚೆನ್ನಾಗಿ ನಡೆದಿತ್ತು. ಕೆಲವರು ತಮ್ಮ ಸ್ನೇಹ ಗಟ್ಟಿಯಾಗಿರಲಿ ಎಂದು ಸ್ನೇಹಕ್ಕೆ ಸಂಬಂಧಿಸಿದ ಹಾಡು, ಕೆಲವರು ತಮ್ಮ ಇಷ್ಟದ ಶಿಕ್ಷಕರಿಗೆ ಗೌರವಾರ್ಥವಾಗಿ ಹಾಗು ಹೆಚ್ಚಿನವರು ತಮ್ಮ ಪ್ರೀತಿ ನಿವೇದನೆಯನ್ನು ವ್ಯಕ್ತಪಡಿಸಲು ವರ್ಷವೆಲ್ಲಾ ಕಾದು ಕುಳಿತು ಹಾಡನ್ನು ಅರ್ಪಿಸುತ್ತಿದ್ದರು. ನನ್ನ ಹೆಚ್ಚಿನ ಸಹಪಾಠಿಗಳಿಗೆ ಪ್ರೀತಿ ನಿವೇದನೆಯ ಹಾಡುಗಳು ಸಾಲು ಸಾಲಾಗಿ ಬರಲಾರಂಭಿಸಿದ್ದವು. ಅದೂ ಅಲ್ಲದೇ ಕೆಲ ಹುಡುಗರು ತಮ್ಮ ಹೆಸರನ್ನು ಹೇಳದೆ, ಬರೀ ಇಲೆಕ್ಟ್ರಾನಿಕ್ಸ್ ವಿಭಾಗ, ಮೆಕ್ಯಾನಿಕಲ್ ವಿಭಾಗ ಎಂದಷ್ಟೇ ನಮೂದಿಸಿ; ಈ ಹುಡುಗ ಯಾರಿರಬಹುದು ಎಂದು ರಹಸ್ಯ ಬೇಧಿಸುವಂತೆ ಪ್ರೇರೇಪಿಸುತ್ತಿದ್ದರು.
ಅಂತದ್ದರಲ್ಲಿ, ನಿರೂಪಕರು ಥಟ್ಟನೇ ನನ್ನ ಹೆಸರನ್ನು ಪುಕರಿಸಿದರು "ಈಗ ಹಾಕಲಾಗುವ ಹಾಡು, ಅನುಪಮಾ ಬೆಣಚಿನಮರ್ಡಿ ಇವರಿಗೆ, ವಿದ್ಯುತ್ ಮತ್ತು ವಿದ್ಯುನ್ಮಾನ ಶಾಖೆ (ಎಲೆಕ್ಟ್ರಿಕಲ್ ಆಂಡ್ ಇಲೆಕ್ಟ್ರಾನಿಕ್ಸ್ branch ), ಬಿ ಸೆಕ್ಷನ್ " ಎಂದು ಹೇಳಿದರಷ್ಟೇ. ನಿಮಿರಿ ನಿಂತಿದ್ದ ನನ್ನ ಕಿವಿಗಳು "ಯಾರಿಂದ " ಎಂದು ಕೇಳಲು ಹಾತೊರೆದವು. ಆದರೆ, ಇಷ್ಟು ಹೊತ್ತಿನವರೆಗೂ ವಿಧಿವಿಧಾನಗಳಂತೆ ಯಾರಿಗೆ, ಯಾರಿಂದ, ಯಾವ ಹಾಡು ಎಂದು ಪುಕಾರಿಸುತ್ತಿದ್ದವರು; ನನ್ನ ವಿಷಯದಲ್ಲಿ ಮಾತ್ರ ಯಾವೊಂದು ವಿವರಣೆ ಕೊಡಲಿಲ್ಲ. ಬದಲಾಗಿ ನೇರವಾಗಿ ಹಾಡನ್ನೇ ಪ್ಲೇ ಮಾಡಿದರು. "ಹೊಡಿ ಮಗ ಹೊಡಿ ಮಗ , ಬಿಡಬೇಡ ಅವನ್ನಾ ..... " ಜೋಗಿ ಚಿತ್ರದ ಪ್ರಸಿದ್ಧ ಹಾಡು! ಎಲ್ಲರೂ ಹೋ ಎಂದು ಕೂಗಲು ಶುರು ಮಾಡಿದರು. ಸ್ವಲ್ಪ ಹೊತ್ತು ಜಾಸ್ತಿನೇ ಪ್ಲೇ ಮಾಡಿದ ನಿರೂಪಕರು, ಹಾಡು ಆದ ಮೇಲೆ "ಇದು ಎಲ್ಲ ಫಸ್ಟ್ ಇಯರ್ ಹುಡುಗರ ಕಡೆಯಿಂದ " ಎಂದು ಒತ್ತಿ ಒತ್ತಿ ಹೇಳಿದರು. ನನಗಂತೂ ಕೋಪ ನೆತ್ತಿಗೇರಿತ್ತು. ನನ್ನ ಸ್ನೇಹಿತೆಯರೆಲ್ಲ ನಕ್ಕು ನಕ್ಕು, ಏನೇ ಕಾಲೇಜ್ ಬ್ಯಾಗಲ್ಲಿ ಮಚ್ಚು ಏನಾದರೂ ಇಟ್ಕೊಂಡಿದೀಯಾ? ಅವರು ಯಾಕೆ ಆ ಹಾಡನ್ನು ಅರ್ಪಿಸಿದ್ದಾರೆ ಅಂತ ಗೇಲಿ ಮಾಡುತ್ತಿದ್ದರು.
ಸ್ವಲ್ಪ ನೇರವಾಗಿ ಇದ್ದುದನ್ನು ಇದ್ದ ಹಾಗೆ ಹೇಳುವ ನನ್ನ ಸ್ವಭಾವ ಹಾಗೂ ಒಂದೆರಡು ಬಾರಿ, ಕಾಲೇಜ್ ಬಸ್ ನಲ್ಲಿ ಮಹಿಳೆಯರಿಗೆ ಮೀಸಲಿರಿಸಿದ ಸೀಟ್ ನಲ್ಲಿ ಕುಳಿತಿದ್ದ ಹುಡುಗರನ್ನು ಎಬ್ಬಿಸಿ ನಾನು ಕೂತಿದ್ದಕ್ಕೆ ಈ ಹಾಡನ್ನು ಅರ್ಪಿಸುವುದೇ? ನನಗೊತ್ತಿತ್ತು, ಇಡೀ ಕಾಲೇಜಿನ ಫಸ್ಟ್ ಇಯರ್ ಹುಡುಗರ ಮೆದುಳು ಒಂದೇ ತೆರನಾಗಿ ಕೆಲಸ ಮಾಡಲು ಸಾಧ್ಯವೇ? ಯಾರೋ ತಮ್ಮ ಹೆಸರನ್ನು ನಮೂದಿಸಲು ಭಯವಾಗಿ ಹೀಗೆ ಮಾಡಿದ್ದಾರೆ ಎಂದು!
ಆದರೆ, ಇದೊಂದು ಸವಿನೆನಪಾಗಿ ನನ್ನ ಮನಃ ಪಟಲದಲ್ಲಿ ಉಳಿದಿದೆ. ಈಗಲೂ, ಜೋಗಿ ಚಿತ್ರದ ಹಾಡು ಟಿವಿ ಮೇಲೆ ಬಂದರೆ ನನ್ನ ಸ್ನೇಹಿತರ ಮೆಸೇಜ್ ಬಂದಿರುತ್ತೆ, ಈ ಟಿವಿ ಚಾನೆಲ್ ಹಾಕು, surprise ಅಂತ. ಆದರೂ ಕೂಡ ಇಂದಿಗೂ ಆ "ಎಲ್ಲ ಫಸ್ಟ್ ಇಯರ್ ಹುಡುಗರ ಕಡೆಯಿಂದ " ಎಂದು ಬರೆದುಕೊಟ್ಟ ಹುಡುಗನನ್ನು ಹುಡುಕುತ್ತಿದ್ದೇನೆ (ಸಿಗಲಿ ನನ್ನ ಕೈ ಗೆ ಎಂದು!!).
Subscribe to:
Posts (Atom)
ಪುಸ್ತಕ: ಶಾಲಭಂಜಿಕೆ
ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...
-
ಪುಸ್ತಕ: ಹೊಳಲ್ಕೆರೆಯ ನರಭಕ್ಷಕ ಮತ್ತು ಇತರ ಕೆನ್ನೆತ್ ಆಂಡರ್ಸನ್ ಕಥೆಗಳು ಲೇಖಕ: ಕೆನ್ನೆತ್ ಆಂಡರ್ಸನ್ ಕನ್ನಡ ಅನುವಾದ: ಸಾಕ್ಷಿ ಪ್ರಕಟಣೆ: ಆಕೃತಿ ಪುಸ್ತಕ ...
-
ಪುಸ್ತಕ: ಪೆರುವಿನ ಪವಿತ್ರ ಕಣಿವೆಯಲ್ಲಿ' ಲೇಖಕಿ: ನೇಮಿಚಂದ್ರ ಪ್ರಕಾಶನ: ನವಕರ್ನಾಟಕ ಪ್ರಕಾಶನ ಬೆಲೆ: ೧೫೦ ಪುಸ್ತಕ ವಿಮರ್ಶೆ: 'ಪೆರುವಿನ ಪವಿ...
-
ಪುಸ್ತಕ: ಮೋಹನಸ್ವಾಮಿ e-book, MyLang app ಲೇಖಕ: ವಸುಧೇಂದ್ರ ಬೆಲೆ: 119 ಪ್ರಕಾಶನ: ಛಂದ ಪ್ರಕಾಶನ ಮುದ್ರಣ: 5, 2017 ಪುಸ್ತಕವು 12 ಕಥೆಗಳನ್ನು ಒಳಗೊಂಡಿದ್ದು ...




