Wednesday, January 30, 2019

ಕೊಂಚಿಗೆ ಮತ್ತು ಕುಲಾವಿಯ ಗಮ್ಮತ್ತು !! - Published in Udayavani news paper on 30th January 2019







•ಅನುಪಮಾ ಬೆಣಚಿನಮರ್ಡಿ
ಘಟನೆ-1
ಅನುಪಮಾ, ನಿನ್ನೆ ನಿಮ್ಮ ಮಗುವಿಗೆ ಟೊಪ್ಪಿ ಹಾಕಿದ್ರಲ್ಲಾ, ಆ ಟೊಪ್ಪಿ ಎಲ್ಲಿ ತಗೊಂಡ್ರಿ? ತುಂಬಾ ಚೆನ್ನಾಗಿತ್ತು. ನಾನಂತೂ ಇಂಥ ಟೋಪಿಯನ್ನು ಎಲ್ಲೂ ನೊಡೇ ಇಲ್ಲಾ. ನಿಮಗೆ ಹೇಗೆ ಸಿಕ್ತು?
ಘಟನೆ-2
ಪುಸ್ತಕ ಖರೀದಿಗೆ ಹೋಗಿದ್ದಾಗ, ಆ ಅಂಗಡಿಯಲ್ಲಿದ್ದ ವಯಸ್ಸಾದವರೊಬ್ಬರು, 'ಎಷ್ಟು ದಿನ ಆಯ್ತು ಇಂಥ ಕೊಂಚಿಗೆ ನೋಡಿ. ನನ್ನ ಬಾಲ್ಯದ ದಿನಗಳು ನೆನಪಾದವು. ನಾನು, ನನ್ನ ತಮ್ಮ ಇಂಥದ್ದೇ ಕೊಂಚಿಗೆ ಕಟ್ಟಿಕೊಂಡು ತೆಗೆಸಿಕೊಂಡ ಫೋಟೊ ಇದೆ. ಈಗ ಯಾರೂ ಇದನ್ನ ಮಕ್ಕಳಿಗೆ ಹಾಕೋದೇ ಇಲ್ಲ. ಈ ಮಗೂನ ನೋಡಿ ಖುಷಿಯಾಯ್ತು.
ಘಟನೆ-3
ಬೆಂಗಳೂರಿನಲ್ಲಿ ನಾವಿರೋ ಬಡಾವಣೆಯಲ್ಲಿ ಇರುವ ಅಸ್ಸಾಮ್‌ನ ಮಹಿಳೆಯೊಬ್ಬರು, 'ಇವನು ನಿಮ್ಮ ಮಗನೇ? ನಾನು ದಿನಾ ಇವನನ್ನು ಕೆರೆ ಪಕ್ಕ ಇರುವ ಉದ್ಯಾನದಲ್ಲಿ, ಅಪ್ಪನ ಜೊತೆ ಆಡೋದನ್ನು ನೋಡಿದ್ದೇನೆ. ಅವನ ತಲೆ ಮೇಲೆ ವಿಶಿಷ್ಟ ರೀತಿಯ ಟೊಪ್ಪಿ ಇರುತ್ತಲ್ಲಾ? ಅದಕ್ಕೇನಂತಾರೆ? ದೊಡ್ಡವರೂ ಅದನ್ನು ಹಾಕಿಕೊಳ್ಳಬಹುದಲ್ವಾ? ಅದನ್ನು ಲೆಹೆಂಗಾ ಜೊತೆ ಹಾಕಿಕೊಳ್ಳಬಹುದೆ?' ಎಂದು ಕೇಳಿದರು.
•••••
ಹೀಗೆ, ನನ್ನ ಮಗ ಪ್ರಣವ್‌ನ ಜೊತೆ ಎಲ್ಲಿಗೇ ಹೋದರೂ ಜನರು ಅವನನ್ನು ತಿರುತಿರುಗಿ ನೊಡುತ್ತಿರುತ್ತಾರೆ. ಇದಕ್ಕೆ ಕಾರಣ; ಅವನ ತಲೆಗೆ ಕಟ್ಟಿರುವ ಕೊಂಚಿಗೆ ಎಂಬ ಟೊಪ್ಪಿ. ಅದುವೇ ಎಲ್ಲರನ್ನೂ ಆಕರ್ಷಿಸುವುದು.
ಈ ವರ್ಷ ಚಳಿ ಯಾರನ್ನು ಬಿಟ್ಟಿದೆ ಹೇಳಿ? ಇನ್ನು ಚಿಕ್ಕ ಮಕ್ಕಳ ಬಗ್ಗೆ ಹೇಳಬೇಕೆ? ಇಂಥ ಚಳಿಯಿಂದ ಮಕ್ಕಳನ್ನು ರಕ್ಷಿಸಲು ಅಮ್ಮಂದಿರು ಮಕ್ಕಳಿಗೆ ಸ್ವೆಟರ್‌, ಟೊಪ್ಪಿ ಹಾಕುತ್ತಾರೆ. ಇತ್ತೀಚೆಗಂತೂ ವಿವಿಧ ಬಗೆಯ ಟೊಪ್ಪಿಗಳು ಮಾರುಕಟ್ಟೆಯಲ್ಲಿ ಲಭ್ಯ. ಮಕ್ಕಳನ್ನು ಸೆಳೆಯಲು, ಕಾರ್ಟೂನ್‌ ಕ್ಯಾರೆಕ್ಟರ್‌ಗಳ, ಪ್ರಾಣಿ-ಪಕ್ಷಿಗಳ ವಿನ್ಯಾಸದ ಟೊಪ್ಪಿಗಳು ಬಂದಿವೆ. ಟೊಪ್ಪಿ ನೋಡಲು ಎಷ್ಟೇ ಆಕರ್ಷಕವಿದ್ದರೂ, ಮೊದಲ ಆದ್ಯತೆ ಗುಣಮಟ್ಟ ಹಾಗೂ ಚಳಿ ತಡೆಯುವ ಸಾಮರ್ಥ್ಯದ್ದು. ಈ ಎರಡೂ ಗುಣಗಳನ್ನು ಹೊಂದಿರುವ ಟೊಪ್ಪಿಗಳಲ್ಲಿ ಕೊಂಚಿಗೆ/ ಕುಲಾವಿಗೆ ಮೊದಲ ಸ್ಥಾನ ಸಲ್ಲತಕ್ಕದ್ದು.
ಏನಿದು ಕೊಂಚಿಗೆ- ಕುಲಾವಿ?
ಕೊಂಚಿಗೆ ಎಂಬುದು ಮಕ್ಕಳ ತಲೆಗೆ ಕಟ್ಟುವ ಟೊಪ್ಪಿ. ಇದನ್ನು ಕಾಟನ್‌ ಬಟ್ಟೆಯಿಂದ ಹೊಲಿದಿರುತ್ತಾರೆ. ನವಜಾತ ಶಿಶುವಿನಿಂದ ಹಿಡಿದು, ಐದು ವರ್ಷದ ಮಕ್ಕಳ ತನಕ ನಾನಾ ಗಾತ್ರದ ಕೊಂಚಿಗೆ ಹೊಲಿಯಬಹುದು. ಇದು ತಲೆ ಮತ್ತು ಕಿವಿಯನ್ನು ಬೆಚ್ಚಗಿಡುವುದಲ್ಲದೆ, ಒಂದು ಗೇಣು ಬೆನ್ನನ್ನು ಕೂಡ ಕವರ್‌ ಮಾಡುತ್ತದೆ. ಆದರೆ ಕುಲಾವು, ಕುತ್ತಿಗೆಯವರೆಗಷ್ಟೇ ಚಳಿಯಿಂದ ರಕ್ಷಿಸುತ್ತದೆ. ಇದೇ, ಕೊಂಚಿಗೆ ಮತ್ತು ಕುಲಾವಿನ ನಡುವಿರುವ ವ್ಯತ್ಯಾಸ. ಕೊಂಚಿಗೆ/ಕುಲಾವು ಎರಡಕ್ಕೂ; ಎರಡು ನಾಡಿಗಳಿರುತ್ತವೆ. ಇವು ತಲೆಯ ಗಾತ್ರಕ್ಕೆ ತಕ್ಕಂತೆ ಬಿಗಿ ಮತ್ತು ಸಡಿಲಗೊಳಿಸಲು ಇರುತ್ತವೆ. ಕೊಂಚಿಗೆಯನ್ನು ಕಟ್ಟಬೇಕಾದರೆ ಎಡ ನಾಡಿಯನ್ನು ಬಲಗಡೆಯಿಂದ ಹಾಗೂ ಬಲ ನಾಡಿಯನ್ನು ಎಡಗಡೆಯಿಂದ ಕುತ್ತಿಗೆಯ ಸುತ್ತು ಬಳಸಿ ಹಿಂಭಾಗಕ್ಕೆ ಕಟ್ಟಲಾಗುತ್ತದೆ. ಇದರಿಂದ ಗಂಟು ಭದ್ರವಾಗಿ ಇರುವುದಲ್ಲದೆ ಮಗುವಿನ ಚರ್ಮಕ್ಕೆ ಕಚಗುಳಿ ಮಾಡುವುದಿಲ್ಲ. ಕುಲಾವಿಯನ್ನು ಸಾಮಾನ್ಯ ಟೊಪ್ಪಿಯ ಹಾಗೆ ಕುತ್ತಿಗೆಯ ಮುಂದಿನ ಭಾಗಕ್ಕೆ ಕಟ್ಟಲಾಗುತ್ತದೆ.

ಕೊಂಚಿಗೆಯ ಲಾಭಗಳು

•ಕಾಟನ್‌ ಬಟ್ಟೆಯದ್ದಾದ ಕಾರಣ, ಮಗುವಿನ ಚರ್ಮಕ್ಕೆ ಉತ್ತಮ.
•ಉಣ್ಣೆ ಟೊಪ್ಪಿಯಂತೆ ದಾರದ ಎಳೆ, ಮಗುವಿನ ಕಿವಿಯೋಲೆಯಲ್ಲಿ ಸಿಕ್ಕಿ ಹಾಕಿಕೊಳ್ಳುವುದಿಲ್ಲ.
•ಬೆನ್ನನ್ನೂ ಕವರ್‌ ಮಾಡುವುದರಿಂದ ಚಳಿಯಿಂದ ಸಂಪೂರ್ಣ ರಕ್ಷಣೆ ಸಿಗುತ್ತದೆ.
•ತೆಳ್ಳನೆಯ ಕಾಟನ್‌ ಬಟ್ಟೆಯಿಂದ ಮಾಡಲ್ಪಟ್ಟಿರುವ ಕೊಂಚಿಗೆಯನ್ನು ಬಿಸಿಲಿನಿಂದ ರಕ್ಷಣೆ ಪಡೆಯಲೂ ಬಳಸಬಹುದು.
•ಮಗು ಎಷ್ಟೇ ಕಿತ್ತೆಸೆಯಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ.
•ನೋಡಲು ಆಕರ್ಷಕವಾಗಿರುತ್ತದೆ (ತಲೆಯ ಮೇಲೆ ಗೋಪುರಾಕಾರದ ವಿನ್ಯಾಸ ಬರುವುದರಿಂದ) ಅಲ್ಲದೆ ನಮಗೆ ಇಷ್ಟವಾದ ಬಟ್ಟೆಯಲ್ಲಿ ಡಿಸೈನ್‌ ಮಾಡಿಸಬಹುದು.
•ಬೆಲೆಯೂ ಅಗ್ಗ. ರೇಷ್ಮೆ ಬಟ್ಟೆಯಲ್ಲಿ (ಕಾಟನ್‌ ಲೈನಿಂಗ್‌ ಬಳಸಿ) ಹೊಲಿಸಬಹುದು.


ಕೊಂಚಿಗಿ ಕುಲಾವೀ ಗೊಂಚಲ ಬಿಳಿಮುತ್ತ...
ಶೃಂಗಾರ ಶ್ರೀಕೃಷ್ಣಗೆ ಚಂದಾಗಿ ತೊಡಿಸೀರಿ...
ಜೋ... ಜೋ...
ಹಿಂದಿನ ಕಾಲದಲ್ಲಿ ಕೊಂಚಿಗೆಗೆ, ಮುತ್ತು ರತ್ನ ಹಾಗೂ ಬಂಗಾರದ ಹೂವುಗಳಿಂದ ಕಸೂತಿ ಮಾಡುತ್ತಿದ್ದರು. ಈಗಲೂ ವಿಶೇಷ ಸಮಾರಂಭಗಳಿಗಾಗಿ ಕೊಂಚಿಗೆಗೆ ಮುತ್ತು ಪೋಣಿಸಿ, ಹೊಲಿಯುವ ವಾಡಿಕೆ ಇದೆ. ತಾಯಿ ಮತ್ತು ಮಗು ಮೊದಲನೇ ಸಲ ಗಂಡನ ಮನೆಗೆ ಬರುವಾಗ, ತವರು ಮನೆಯಿಂದ ತೊಟ್ಟಿಲು ಹಾಗೂ ಆ ತೊಟ್ಟಿಲಿನ ನಾಲ್ಕೂ ಮೂಲೆಗಳಿಗೆ ನಾಲ್ಕು ಕೊಂಚಿಗೆಗಳನ್ನು ಹಾಕಿ, ಒಂದು ಕೊಂಚಿಗೆಯನ್ನು ಮಧ್ಯದಲ್ಲಿ ಇರಿಸಿ, ತೊಟ್ಟಿಲನ್ನು ಮಗುವಿನ ಸೋದರಮಾವನ ಹೊತ್ತು ತರುವ ಸಂಪ್ರದಾಯವಿದೆ.
ಪ್ರಾಚೀನ ಸಂಸ್ಕೃತಿ ಹಾಗೂ ಭಾವನಾತ್ಮಕ ಸಂಬಂಧದ ಪ್ರತೀಕವಾಗಿರುವ ಕೊಂಚಿಗೆಯ ಮುಂದೆ, ನಿಟ್ಟೆಡ್‌ ಕ್ಯಾಪ್‌ನ ಥಳುಕು ನಿಲ್ಲಲು ಸಾಧ್ಯವೇ?•





























Thursday, January 24, 2019

ರೂಮ್ ನಂಬರ್ ೧೧!! -Published in Udayavani news paper on 8th January 2019



ರೂಮ್ ನಂಬರ್ ೧೧!!
ಹೊಸ ವರ್ಷ ಶುರುವಾಗುತ್ತಿದ್ದಂತೆ, ನನಗೆ ನನ್ನ ಹಾಸ್ಟೆಲ್ ದಿನಗಳಲ್ಲಿ ನಡೆದ ಘಟನೆಯೊಂದು ನೆನಪಾಯಿತು. ನಾವು ಆಗಷ್ಟೇ sslc ಮುಗಿಸಿ ಕಾಲೇಜಿಗೆ ಕಾಲಿಟ್ಟೆದ್ದೆವು. ಹಾಸ್ಟೆಲ್ ನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದೆವು. ನನಗೆ ಇಬ್ಬರು ರೂಮ್ ಮೇಟ್. ಒಬ್ಬಳು ಮಾಧವಿ, ಒಳ್ಳೆಯ ಮಾತುಗಾರ್ತಿ ಅಲ್ಲದೆ ವರದಿಗಾರ್ತಿ ಕೂಡ! ಇನ್ನೊಬ್ಬಳು ಸಮರೀನ್, ಮಿತಭಾಷಿ ಆದರೆ ಅವಳ ನಿದ್ದೆಯ ಗೊರಕೆಗೆ ಹೊಂದಿಕೊಳ್ಳಲು ನನಗೆ ಮೂರು ತಿಂಗಳು ಹಿಡಿಯಿತು. ನಾನು ಹೊಸ ವರ್ಷದಿಂದ ಡಯರಿ ಬರೆಯಬೇಕೆಂದು ಪ್ರತಿಜ್ಞೆ ಮಾಡಿದ್ದೆ. ಅವತ್ತು ರಾತ್ರಿ ಡಯರಿ ಬರೆಯುತ್ತಿದ್ದಾಗ ೧೧ ಗಂಟೆ ದಾಟಿತ್ತು. ಹೊರಗಡೆ ಓಡಿದ ಹಾಗೆ ಶಬ್ದ. ಸ್ವಲ್ಪ ಹೊತ್ತಿಗೆ ಹೆಜ್ಜೆ ಸಪ್ಪಳ! ನನ್ನ ಮಂಚ ಕಿಟಕಿ ಪಕ್ಕ ಇರುವುದರಿಂದ ಹೊರಗಿನ ಸದ್ದು ಸ್ಪಷ್ಟವಾಗಿ ಕೇಳುತ್ತಿತ್ತು. ಅದನ್ನು ಮರೆತು (ಮರೆತವರ ಹಾಗೆ ನಟಿಸಿ) ಮತ್ತೆ ಬರೆಯತೊಡಗಿದೆ. ಮರುದಿನ ಮಾಧವಿ ಕೂಡ ನನ್ನ ಜೊತೆ ಇನ್ನೂ ಓದುತ್ತಿದ್ದಳು. ಪುನಃ ಅದೇ ಶಬ್ದ! ನಿನ್ನೆ ರಾತ್ರಿ ಕೂಡ ಇದೇ ತರಹ ನಡೆದಿತ್ತು ಎಂದು ಮಾಧವಿಗೆ ಹೇಳಿದೆ. ಹೇಳಿದ್ದೇ ತಡ ಮಾಧವಿ, ದೇವರಿಗೆ ಊದಿನಕಡ್ಡಿ ಹಚ್ಚಿದಳು! ಮರುದಿನ ಹಾಸ್ಟೆಲ್ ನಲ್ಲಿ ಇದೇ ಬ್ರೇಕಿಂಗ್ ನ್ಯೂಸ್! ಎಲ್ಲರೂ ತಮ್ಮ ಊಹಾಪೋಹ ಹೇಳತೊಡಗಿದರು. ಕೆಲವರು, ಯಾರೋ ಕಳ್ಳರು  ಹಾಸ್ಟೆಲ್ ಕಿಟಕಿಯಲ್ಲಿ ಇಡುವ ವಸ್ತುಗಳನ್ನು ಕದಿಯಲು ಬರುತ್ತಿರಬಹುದು ಎಂದರು. ಇನ್ನು ಕೆಲವರು ಯಾರೋ ಬೇಕು ಅಂತ ಹುಡುಗಿಯರನ್ನು ಹೆದರಿಸಲು ಬರುತ್ತಿರುವರು ಎಂದರು. ಕೆಲವರು ಇನ್ನೂ ಸ್ವಲ್ಪ ಮುಂದುವರಿದು ಇದು ಯಾವುದೊ ಆತ್ಮ ಇರುವುದೆಂದು ರೂಮ್ ನಂಬರ್ ೧೧ ಕ್ಕೆ ೧೧ ಗಂಟೆಯ ನಂತರ ಕಾಟ ಕೊಡುವುದು ಎಂದರು. ಒಟ್ಟಾರೆ ನಾನು ರಾತ್ರಿ ವೇಳೆಯಲ್ಲಿ ಬರೆಯುವುದನ್ನು ಹಾಗೂ ಓದುವುದನ್ನು ನಿಲ್ಲಿಸಿದೆ. ಆದರೆ ಈ ಉಪಟಳ ಮಾತ್ರ ಒಂದು ವಾರದ ನಂತರವೂ ಮುಂದುವರಿಯಿತು. ಕೊನೆಗೆ ಹಾಸ್ಟೆಲ್ ವಾರ್ಡನ್ ಗೆ ದೂರು ಸಲ್ಲಿಸಿದೆವು. ಅವರು ಸೆಕ್ಯುರಿಟಿ ಗಾರ್ಡ್ ಗೆ ನಮ್ಮ ರೂಮಿನ ಹತ್ತಿರ ಕಟ್ಟೆಚ್ಚರ ಇಡಲು ಹೇಳಿದರು. ಆದರೂ ಕೂಡ ಎಂದಿನಂತೆ ಅದೇ ಘಟನೆ!! ಸೆಕ್ಯುರಿಟಿ ಗಾರ್ಡ್ ಮಾತ್ರ ತಾನು ಯಾರನ್ನೂ ನೋಡಲಿಲ್ಲ ಎಂದ. ವಾರ್ಡನ್, ನಮಗೆ ಬುದ್ದಿಮಾತು ಹೇಳಿ ಕಳುಹಿಸಿದರು. ನಮಗೋ ಆ ಸೆಕ್ಯುರಿಟಿ ಗಾರ್ಡ್  ಮೇಲೆ ಅನುಮಾನ. ಹಾಸ್ಟೆಲ್ ಆವರಣದಲ್ಲಿ ತೆಂಗಿನ ಗಿಡಗಳಿದ್ದು ಇವನೇ ಕಾಯಿಗಳನ್ನು ಆಯ್ದುಕೊಳ್ಳುತ್ತಾನೋ ಎಂದು. ಅದರ ಮಧ್ಯೆ ಮಾಧವಿ ಬೇರೆ ಈ ರೂಮ್ ಸಹವಾಸವೇ ಬೇಡ ಎಂದು ರೂಮ್ ಶಿಫ್ಟ್ ಮಾಡುವಳಿದ್ದಳು! ಆದರೆ ಒಂದು ದಿನ ಜೋರಾಗಿ ಮಳೆ ಸುರಿಯಿತು. ಅದರ ನಂತರ ಆ ಶಬ್ದ ಬರುವುದೇ ನಿಂತು ಹೋಯಿತು. ಸ್ವಲ್ಪ ದಿನಗಳ ನಂತರ ಆಯಾಗಳು ಊಟದ ಮೆಸ್ಸಿನಲ್ಲಿ ಮಾತನಾಡುತ್ತಿದ್ದರು; ಜೋರಾದ ಮಳೆ ಕಾರಣವೋ ಏನೋ ಒಂದು ದೊಡ್ಡ ಹೆಗ್ಗಣ ಸತ್ತು ಬಿದ್ದಿದೆ. ಅದನ್ನು  ಬೇಗ ಅಲ್ಲಿಂದ ಸಾಗಿಸದಿದ್ದರೆ ರೂಮ್ ನಂಬರ್ ೧೧ ರಲ್ಲಿ ದುರ್ನಾತದಿಂದ ಕಾಲಿಡಲಾಗುವುದಿಲ್ಲ ಅಂತ. ನನಗೆ ಫಕ್ಕನೆ ಏನೋ ಹೊಳೆದಂತಾಯಿತು. ಹೋಗಿ ನನ್ನ ಇಬ್ಬರೂ ರೂಮೇಟ್ಸ್ ಗೆ ಹೇಳಿದೆ. ಇಬ್ಬರೂ ಗಹಗಹಿಸಿ ನಗತೊಡಗಿದರು. ಆದಿದ್ದಿಷ್ಟೇ , ಹೆಗ್ಗಣವು ಪ್ರತಿ ರಾತ್ರಿ ಆಹಾರ ಶೋದಿಸುತ್ತಿರುವಾಗ, ಬೆಕ್ಕೋ ನಾಯಿಯೋ ಬೆನ್ನಟ್ಟಿ ಬರುತ್ತಿತ್ತು. ಅಲ್ಲಿ ತರಗೆಲೆಗಳ ಹಾಸಿಗೆಯಿದ್ದುದರಿಂದ ಅದು ಥೇಟ್ ಮನುಷ್ಯರ  ಸದ್ದಿನಂತೆ ಭಾಸವಾಗುತ್ತಿತ್ತು. ಹೆಗ್ಗಣ ಸತ್ತು ಹೋಗಿದ್ದರಿಂದ ಆ ಸದ್ದೂ ನಿಂತು ಹೋಯಿತು!!! 







ಈ ಇರುವೆ ಹೆಸರೇ ‘ಕ್ರೇಜಿ ಆ್ಯಂಟ್(Crazy Ant)' - Published in digital magazine






ಇರುವೆ ಹೆಸರೇ ‘ಕ್ರೇಜಿ ಆ್ಯಂಟ(crazy ant)’

ನನಗೂ ಇರುವೆಗೂ ಮೊದಲಿನಿಂದಲೂ ಏನೊ ವಿಚಿತ್ರ ನಂಟು. ಚಿಕ್ಕವಳಿದ್ದಾಗ ಇರುವೆ ಗೂಡಿನ ಹತ್ತಿರ ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದೆ. ಈಗ ಮಗನ ನೆಪ ಮಾಡಿಕೊಂಡು ಅವುಗಳ ಜೊತೆ ಆಟ ಆಡ್ತೀನಿ!! ಇದೇ ಕುತೂಹಲದಿಂದ ಇವುಗಳನ್ನು ಗಮನಿಸಿದಾಗ (ಅಭ್ಯಾಸ ಮಾಡಿದಾಗ ಅಂದರೆ ಸಮಂಜಸವಾದೀತು!) ಕೆಲವು ಕುತೂಹಲ ಕೆರಳಿಸುವ ಅಂಶಗಳು ಕಂಡು ಬಂದವು. ಇರುವೆಗಳ ಬಗ್ಗೆ, ಅಂತರ್ಜಾಲದಲ್ಲಿ ಹುಡುಕಾಡಿದರೂ ಆ ಮಾಹಿತಿ ಬೇರೆ ದೇಶಗಳಲ್ಲಿ ಕಂಡು ಬರುವ ಮಾಹಿತಿಯಾಗಿರುತ್ತದೆ. ಕೀಟಗಳು ಭೌಗೋಳಿಕ ಪ್ರದೇಶಗಳ ಅನುಸಾರ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಒಂದೇ ಜಾತಿಯ ಇರುವೆ ಬೇರೆ ಬೇರೆ ಗುಣಲಕ್ಷಣಗಳನ್ನು ಆ ಪ್ರದೇಶದ ಅನುಗುಣವಾಗಿ ಹೊಂದಿರುತ್ತವೆ. ಅಂದ ಹಾಗೆ ಈ ಇರುವೆಗೆ crazy ಹೆಸರು ಬಂದಿರುವುದು ಇದರ ವರ್ತನೆಯಿಂದ!! ಸ್ವಲ್ಪ ಛೇಡಿಸಿದರೂ ಕೂಡಲೇ ಪ್ರತಿಕ್ರಿಯೆ ಬರುತ್ತದೆ!! ಅತ್ತಿಂದಿತ್ತ ಓಡಾಡುವುದು, ನೆಗೆಯುವುದು. ಇದರ ವೈಜ್ಞಾನಿಕ ಹೆಸರು Anoplolepis gracilipes.

ಭೌತಿಕ ಗುಣಲಕ್ಷಣಗಳು:

  • ಕೆಂಪು ಅಥವಾ ಕಂದು ಬಣ್ಣದ ಇರುವೆ. ಹೊಟ್ಟೆಯ ಭಾಗ ಗಾಢ ಕಂದು ಬಣ್ಣ ಆಗಿದ್ದು ಅದರ ಮೇಲೆ ಅಡ್ಡ ಗೆರೆಗಳಿರುತ್ತವೆ

  • ದೇಹಕ್ಕೆ ಹೋಲಿಸಿದರೆ ಉದ್ದವಾಗಿರುವ ೬ ಕಾಲು

  • ೧ ಇಂಚು ಉದ್ದ

ಆವಾಸಸ್ಥಾನ:

  • ತಂಪು ಅಥವಾ ಒಣ ಪ್ರದೇಶ

  • ಗೋಡೆಯ ಸಂದು,ಗಿಡದ ಬುಡ,ಹೂಕುಂಡ,ಕಸದ ತೊಟ್ಟಿ ಇತ್ಯಾದಿ

ಆಹಾರ:

ಇದು ಮಾಂಸಾಹಾರಿ ಹಾಗೂ ಸಸ್ಯಾಹಾರಿ. ತಮ್ಮ ಗೂಡು ಬಿಟ್ಟು ತುಂಬಾ ದೂರ ಆಹಾರ ಅರಸುವುದಕ್ಕೆ ಇವು ಪ್ರಸಿದ್ಧ. ಮಾಂಸಾಹಾರದಲ್ಲಿ  ಚಿಕ್ಕ ಕೀಟಗಳು, ಜಿರಳೆ,ಹಲ್ಲಿ ಇತ್ಯಾದಿ. ಸಸ್ಯಹಾರದಲ್ಲಿ ಕೆಲವು ಬೀಜಗಳು, ಅಡುಗೆ ಮನೆಯಲ್ಲಿ ಸಿಗುವ ಎಲ್ಲಾ ಬಗೆಯ ತಿಂಡಿ ತಿನಿಸುಗಳು. ಮುಖ್ಯವಾಗಿ ಇದು ಸಿಹಿತಿಂಡಿ ಪ್ರಿಯ!! ಜೇನು, ಸಕ್ಕರೆಯಿಂದ ಮಾಡಿದ ಪದಾರ್ಥಗಳು, ಸಿಹಿಯಾದ ಹಣ್ಣುಗಳು. ಒಮ್ಮೆ ಚಿಕ್ಕು ಹಣ್ಣುಗಳನ್ನು ತಂದು ಸ್ವಲ್ಪ ಹಣ್ಣಾಗಲಿ ಎಂದು ಬುಟ್ಟಿಯಲ್ಲಿ ಇಟ್ಟಿದ್ದೆವು. ಮರುದಿನ ಬೆಳಿಗ್ಗೆ ನೋಡಿದರೆ ಹಣ್ಣಿನಲ್ಲಿ ದೊಡ್ಡ ರಂದ್ರ!! ತೆಗೆದು ನೋಡಿದರೆ ಒಳಗೆಲ್ಲಾ ರಸ ಹೀರುತ್ತ ಕುಳಿತಿರುವ ಇರುವೆಗಳು!! ಮಾಮೂಲಾಗಿ ಒಂದು ಚೂರು ಅವುಗಳಿಗೆ ತೊಂದರೆ ಕೊಟ್ಟರೆ ಅತಿಯಾಗಿ ಓಡಾಡುವ ಇರುವೆಗಳು, ಸಿಹಿ ಹೀರುವಾಗ ತದ್ವಿರುದ್ಧವಾಗಿ ಪ್ರತಿಕ್ರಿಯಿಸುತ್ತವೆ!! ಅವುಗಳನ್ನು ಸಿಹಿ ಪದಾರ್ಥಗಳಿಂದ ಕಿತ್ತು ಬೇರ್ಪಡಿಸಬೇಕು! ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಈ ಸಿಹಿಯನ್ನು ಹೊಟ್ಟೆಯಲ್ಲಿ ಶೇಖರಿಸಿಕೊಂಡಿದ್ದು; ಬೇರೆ ಇರುವೆಗಳಿಗೆ ಅವಶ್ಯವೆನಿಸಿದಾಗ ಬಾಯಿ ಮುಖಾಂತರ ಹಂಚುತ್ತವೆ.

  ಈ ಇರುವೆಗಳ ದೊಡ್ಡ ಗುಣವೆಂದರೆ, ಇವು ಕುಟುಕುವುದಿಲ್ಲ ಹಾಗು ಕಚ್ಚುವ ಪ್ರಮಾಣವೂ ಕಡಿಮೆ. ಅದಕ್ಕೆ ಏನೊ ನನ್ನ ಮಗ ಪ್ರಣವ, “ಇರಿ ಇರಿ” (ಇರುವೆ ಅಂತ ಪೂರ್ತಿಯಾಗಿ ಅನ್ನಲು ಬರ್ತಿರಲಿಲ್ಲ)  ಎಂದು ಕೂಗುತ್ತಾ ಅವುಗಳನ್ನು ತಗೊಂಡು ನಿರ್ಭಯವಾಗಿ  ಬಾಯಲ್ಲಿ ಹಾಕಿಕೊಳ್ಳುತ್ತಿದ್ದ. ಇವುಗಳ ಅತಿಯಾದ ಸಂಖ್ಯೆಯೇ ಇವುಗಳ ಅಸ್ತ್ರ. ಎಲ್ಲೆಂದರಲ್ಲಿ ವೇಗವಾಗಿ ಓಡಾಡುವ ಇರುವೆಗಳನ್ನು ನೋಡಿದರೆ ಎಂಥವರಿಗಾದರೂ ಹುಚ್ಚು ಹಿಡಿಸುತ್ತದೆ.

ಈ ಅತಿಯಾದ ಸಂತಾನೋತ್ಪತ್ತಿಯ ಕಾರಣ ಇದು ಬೇರೆ ಜಾತಿಯ ಇರುವೆಗಳ ಸಮೂಹವನ್ನು ಕೂಡ ಸ್ಥಳಾಂತರಿಸುತ್ತದೆ. ಸಾಮಾನ್ಯವಾಗಿ ಒಂದು ಗೂಡಿನಲ್ಲಿ ಒಂದಕ್ಕಿಂತ ಹೆಚ್ಚು ರಾಣಿ ಇರುವೆಗಳಿದ್ದು ಗೂಡಿನ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಇವು ಚಿಕ್ಕ ಚಿಕ್ಕ ಸಮೂಹಗಳ ನಡುವೆ ಸಂಪರ್ಕ ಇಟ್ಟುಕೊಂಡು ದೊಡ್ಡ ಸಮೂಹವಾಗಿ (super colony) ಮಾರ್ಪಡುತ್ತವೆ. ಅಂದ ಹಾಗೆ ನಮ್ಮ ಮನೆಯಲ್ಲಿ ಇರೋದು super colony ಅಲ್ಲ. ಬೇಸಿನ್ ಕೆಳಗಡೆ ಇರುವ ಒಂದು ಸಾಮಾನ್ಯ ಇರುವೆ ಗೂಡು. ಇವು ಈಗ ನಮ್ಮ ಕುಟುಂಬ ಸದಸ್ಯರಾಗಿವೆ. ಈಗಲೂ ಕೂಡ ನನ್ನ ಮಗನಿಗೆ ಊಟ ಮಾಡಿಸಬೇಕಾದರೆ ಇವುಗಳ ಪಾಲು ಮಹತ್ವದ್ದು. ಅದರ ಕಣ್ಣು ನೋಡು ಎನ್ನುತ್ತಲೊ ಅಥವಾ ಅದು ಕೊಂಡೊಯ್ಯುವ ಆಹಾರ ಏನು ಎನ್ನುತ್ತ ಒಂದೊಂದು ತುತ್ತು ಕೆಳಗಿಳಿಯುವುದು.


ಎದೆ ಹಾಲಿನ ಗಂಟುಗಳಾಗದಿರಲಿ ಎಚ್ಚರಿಕೆ!! ನವ ತಾಯಂದಿರಿಗೆ ಕಿವಿಮಾತು - Published in news paper





ಎದೆ ಹಾಲಿನ ಗಂಟುಗಳಾಗದಿರಲಿ ಎಚ್ಚರಿಕೆ!! ನವ ತಾಯಂದಿರಿಗೆ ಕಿವಿಮಾತು 

ಮಗುವಿಗೆ ತಾಯಿಯ ಹಾಲೇ ಅಮೃತ ಎನ್ನುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಎದೆಹಾಲಿನ ಬದಲು ಪೌಡರ್ ಹಾಲನ್ನು ಕೊಡುವ ವಾಡಿಕೆ ಅಲ್ಲಲ್ಲಿ ನೋಡುತ್ತಿದ್ದೇವೆ. ಇದಕ್ಕೆ ಕಾರಣ, ಎದೆಹಾಲಿನ ಅಲಭ್ಯತೆ, ಉದ್ಯೋಗಸ್ಥ ಮಹಿಳೆ, ದೈಹಿಕ ಸೌಂದರ್ಯದ ಬಗ್ಗೆ ಇರುವ ಕಾಳಜಿ ಹೀಗೆ ಹಲವಾರಿರಬಹುದು. ಆದರೆ, ತಾಯಿಯು ಸಶಕ್ತವಾಗಿದ್ದು, ಆದರೂ ಎದೆಹಾಲು ಉಣಿಸಲಾರದ ಸ್ಥಿತಿಗೆ ಕಾರಣವೆಂದರೆ ಎದೆಹಾಲಿನ ಗಂಟುಗಳಾಗುವುದು. ಇದು ಪೃಕೃತಿಯ ಸಾಮಾನ್ಯ ಸಂಗತಿಯಾದರೂ ಮನೆಯಲ್ಲಿ ಅನುಭವಸ್ಥರ ಮಾರ್ಗದರ್ಶನದ ಕೊರತೆಯಿಂದ ನವತಾಯಂದಿರಿಗೆ ದುಃಸ್ವಪ್ನವಾಗಿ ಕಾಡಬಹುದು. ಹೀಗಾಗಿ ಇದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. 
ಸಾಮಾನ್ಯ ಹೆರಿಗೆ ಆದ ಕೆಲವು ಗಂಟೆಗಳಲ್ಲಿ ಎದೆ ಹಾಲು ಬರುವುದು ಸ್ವಾಭಾವಿಕ. ಅದೂ ಮೊದಲು ಬಂದ ಹಾಲು ಅಂದರೆ ಕೊಲಸ್ಟ್ರಮ್ ಮಗುವಿಗೆ ತುಂಬ ಪೌಷ್ಟಿಕದಾಯಕ. ಇದು ಕಡ್ಡಾಯವಾಗಿ ಮಗುವಿಗೆ ಕೊಡಲೇಬೇಕಾದದ್ದು. ಆದರೆ ಸಿ-ಸೆಕ್ಷನ್ ನಿಂದಾದ ಹೆರಿಗೆಯಾದರೆ ಎದೆಹಾಲು ಬರುವುದು ಸ್ವಲ್ಪ ತಡವಾಗಬಹುದು. ಕೆಲವೊಮ್ಮೆ ೨-೩ ದಿನಗಳಾಗಬಹುದು. ಆಗ ವೈದ್ಯರು ಅಥವಾ lactation consultant ಗಳ ಸಲಹೆ ಅಗತ್ಯವಾಗುತ್ತದೆ. ಇದೆಲ್ಲಾ ಆಗುವುದು ತಾಯಿ ಮತ್ತು ಮಗು, ಇನ್ನೂ ಆಸ್ಪತ್ರೆಯಲ್ಲಿದ್ದಾಗ; ಇದಾದ ಮೇಲೆ ಅಂದರೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ಖಚಿತವಾದ ಮೇಲೆ ವೈದ್ಯರು ಇಬ್ಬರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುತ್ತಾರೆ. ಸ್ವಲ್ಪ ದಿನ ತಾಯ್ತನ ಸುಖವಾಗಿ ನಡೆಯುತ್ತದೆ. ಆದರೆ ಸುಮಾರು ಒಂದು ತಿಂಗಳಾದ ನಂತರ ತಾಯಿಗೆ ಎದೆಯ/ಮೊಲೆಯ ಮೇಲಿನ ಭಾಗದಲ್ಲಿ ಅಥವಾ ಕಂಕುಳಲ್ಲಿ ಗಂಟು ಕಾಣಿಸಿಕೊಳ್ಳಬಹುದು. ಇದು ಸರ್ವೇಸಾಮಾನ್ಯ ಕೂಡ. ಮನೆಯಲ್ಲಿ ಹಿರಿಯರು/ಅನುಭವಸ್ಥರು ಇದ್ದರೆ ಅವರಿಗೆ ಕೂಡಲೇ ಅದು ಎದೆಹಾಲಿನ ಗಂಟು ಅಂತ ಅರಿವಾಗುತ್ತದೆ.

ಎದೆಹಾಲಿನ ಗಂಟುಗಳ ಗುಣಲಕ್ಷಣಗಳು:
  • ಮೊದಲನೇ ದಿನ ಸಣ್ಣ ಗಂಟು ಕಾಣಿಸಿಕೊಳ್ಳುವುದು 
  • ಹಾಲುಣಿಸಿದಾಗ ಸಣ್ಣದಾಗುತ್ತದೆ 
  • ಅದರ ಮೇಲೆ ಒತ್ತಿದರೆ ಸಣ್ಣ ನೋವು ಕಂಡು ಬರುತ್ತದೆ. 
  • ಕಂಕುಳಲ್ಲಿ ಇದ್ದರೆ ಕೈ ಎತ್ತಿದಾಗ ಅಥವಾ ಸಣ್ಣ ಕೆಲಸ ಮಾಡುವಾಗ ನೋವಿನಿಂದಾಗಿ ಗಂಟಿನ ಅರಿವಾಗುತ್ತದೆ. 
  • ೨-೩ ದಿನ ಬಿಟ್ಟರೆ ಗಂಟಿನ ಸುತ್ತ ಕೆಂಪಾಗುತ್ತದೆ ಹಾಗೂ  ಕೀವು ತುಂಬಲು ಶುರುವಾಗುತ್ತದೆ. ಸಣ್ಣದಾಗಿ ಜ್ವರ ಕಾಣಿಸಿಕೊಳ್ಳುತ್ತದೆ. 
ಎದೆಹಾಲಿನ ಗಂಟುಗಳಾಗಲು ಕಾರಣ :
  • ಮಗುವಿನ ಅವಶ್ಯಕತೆಗಿಂತ ಹೆಚ್ಚಾದ ಎದೆಹಾಲಿನ ಉತ್ಪಾದನೆ 
  • ಮಗುವು ಮೊಲೆಯನ್ನು ಸರಿಯಾಗಿ ಕಚ್ಚಿಕೊಳ್ಳುವುದಕ್ಕೆ ಸಾಧ್ಯವಾಗದಾದಾಗ(poor latching) ಇದರಿಂದಾಗಿ ಸಾಕಷ್ಟು ಹಾಲು ಹೊರಗೆ ಬರದೇ ಅಲ್ಲೇ ಉಳಿದು ಗಂಟುಗಳಾಗುವ ಸಾಧ್ಯತೆ. 
  • ಮೊಲೆಯ ತೊಟ್ಟು ಸರಿಯಾಗಿಲ್ಲದಿದ್ದರೆ ಅಂದರೆ ಚಪ್ಪಟೆಯಾಗಿದ್ದು  (flat nipple) ಅಥವಾ sore nipple ಇದ್ದಲ್ಲಿ ಮಗುವಿಗೆ latch ಮಾಡಲು ಸಾಧ್ಯವಾಗದೆ ಹೋದಾಗ. 
  • ಮೊಲೆಯ ತೊಟ್ಟು ಸತ್ತ ಚರ್ಮ (dead skin) ದಿಂದಾಗಿ ಮುಚ್ಚಿದಾಗ ಹಾಲು ಸರಿಯಾಗಿ ಹೊರಗೆ ಬರಲು ಅಸಾಧ್ಯವಾಗುತ್ತದೆ. 
  • ಎದೆಹಾಲು ಉಣಿಸುವಿಕೆಯ ಭಂಗಿ (position) ಸರಿಯಾಗಿರದಿದ್ದರೆ ಮಗುವಿಗೆ ಸಾಕಷ್ಟು ಹಾಲು ಕುಡಿಯಲು ಅಸಾಧ್ಯವಾಗುತ್ತದೆ.
ಇಷ್ಟೆಲ್ಲಾ ತಿಳಿದುಕೊಂಡ ಮೇಲೆ; ಈ ಗಂಟುಗಳಾಗದೆ ಇರೋ ಹಾಗೆ ಏನು ಮಾಡಬೇಕೆಂದು ನೋಡೋಣ.
ಮುಂಜಾಗೃತಾ ಕ್ರಮಗಳು:
  • ಮಗುವಿಗೆ ಸರಿಯಾದ latching ಮಾಡಿ ಕೊಡಬೇಕು. 
  • ಹಾಲುಣಿಸುವ ಭಂಗಿ (position) ಸರಿಯಾಗಿರಬೇಕು. 
  • ಮಗುವು ಸಾಕಷ್ಟು ಹಾಲು ಕುಡಿಯದೆ ಇದ್ದಾಗ, ಅಧಿಕವಾದ ಹಾಲನ್ನು ಕೈಯಿಂದ ಹಿಂಡಿ ತೆಗೆಯಬೇಕು. 
  • ಗಂಟಾಗಿದ್ದು ಕಂಡ ಕೂಡಲೇ ಕೈಯಿಂದ ಗಂಟಿನ ಮೇಲೆ ನಿಧಾನವಾಗಿ ಮಸಾಜ್ ಮಾಡುತ್ತ ಮಗುವಿಗೆ ಹಾಲುಣಿಸಬೇಕು. ಆಗ ಗಂಟು ಕರಗಿ ಹೋಗುತ್ತದೆ. 
  • ಎದೆಹಾಲು ಹೆಚ್ಚಿಸುವಂಥ ಆಹಾರವನ್ನು ನಿಯಂತ್ರಿಸಬೇಕು. 
  • ಬಿಗಿಯಾದ ಉಡುಪನ್ನು ತ್ಯಜಿಸಿ. 
ಮೇಲಿನ ಎಲ್ಲ ಮುಂಜಾಗೃತೆ ವಹಿಸಿದರೂ ಗಂಟು ಕಂಡು ಬಂದಲ್ಲಿ, ಅದರ ಬೆಳವಣಿಗೆಯನ್ನು ಗಮನಿಸುತ್ತಿರಬೇಕು. ಕೆಂಪಾಗಿದ್ದು ಕಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಮಾತ್ರೆಯಿಂದ ಸರಿಹೋಗದಿದ್ದರೆ ಒಂದು ಸಣ್ಣ ಆಪರೇಷನ್ ಮೂಲಕ ಗಂಟು ತೆಗೆಯಬೇಕಾಗುತ್ತದೆ. ಅಥವಾ ಮಾತ್ರೆಗಳ ಮೂಲಕ ಎದೆಹಾಲು ಉತ್ಪಾದನೆಯನ್ನೇ ತಡೆಗಟ್ಟುತ್ತಾರೆ. ಆಗ ಮಗುವಿಗೆ ಪೌಡರ್ ಹಾಲು ಕೊಡಬೇಕಾಗುತ್ತದೆ. 
ಎದೆಹಾಲಿನ ಗಂಟುಗಳಾಗುವುದು ಸರ್ವೇಸಾಮಾನ್ಯವಾದರೂ, ಅದನ್ನು ಹತೋಟಿಯಲ್ಲಿಡುವುದು ತಾಯಿಯ ಕರ್ತವ್ಯ. ಆಗ ಮಾತ್ರ ಮಗುವಿನ ಆರೋಗ್ಯದಾಯಕ ಬೆಳವಣಿಗೆ ಆಗುತ್ತದೆ. ಕೆಲವು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಉತ್ತಮ, ಆರೋಗ್ಯದಾಯಕ ಮತ್ತು ಸಂತೋಷದಾಯಕ ತಾಯ್ತನ ನಿಮ್ಮದಾಗಲಿ ಎಂದು ಹಾರೈಸುತ್ತೇನೆ.

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...