ಭಾವನೆಗಳ ಜಾತ್ರೆ!
ಕಾರಿನ ಚಕ್ರ, ಸ್ಪೀಡ್ ಬ್ರೆಕರ್ ಗೆ ತಾಗಿದಾಗಲೆಲ್ಲ ಕಾರಿನ ಡಿಕ್ಕಿಯಲ್ಲಿರುವ ಆಟಿಕೆ ಸಾಮಾನುಗಳು 'ಪುoಯ್, ಪುಯ್ಯ ' ಎಂದೋ 'ಟರ್ ಕೊoಯ್ಯ' ಎಂದೋ ಧ್ವನಿ ಹೊರಡಿಸಿದಾಗಲೆಲ್ಲ ನನ್ನ ಮಗ, ಜಾತ್ರೆಯಿಂದ ತಂದ ಆಟಿಕೆ ಸಾಮಾನುಗಳು ಎಲ್ಲಿ ಕೆಳಗೆ ಬಿದ್ದವೋ ಎಂದು ಪ್ರತಿ ಬಾರಿ ಪರೀಕ್ಷಿಸುತ್ತಿದ್ದನು. ನನ್ನ ಮನಸ್ಸು ಅವನನ್ನು ಸಮಾಧಾನಿಸಿದಂತೆ ನಟಿಸಿದರೂ ಅದು ತನ್ನನ್ನು ತಾನೇ ಸಮಾಧಾನಿಸಿದಂತೆ ತೋರುತ್ತಿತ್ತು. ಪ್ರತಿ ಹಬ್ಬ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗುವಾಗ ಆಗುವ ದುಗುಡಕ್ಕಿಂತಲೂ ಜಾತ್ರೆ ಮುಗಿಸಿ ಬರುವಾಗಿನ ದುಗುಡ ಅಪ್ಯಾಯಮಾನವಾದುದು. ಏಕೆಂದರೆ ಅದರಲ್ಲಿ ಘನವಾದ ನೆನಪಿನ ಜಾತ್ರೆಯೇ ಸಾಗುತ್ತಿತ್ತು. ಅಷ್ಟಕ್ಕೂ ವರ್ಷಕ್ಕೊಮ್ಮೆಯೋ ಅಥವಾ ಮೂರೋ, ಐದೋ ವರ್ಷಗಳಿಗೊಮ್ಮೆ ಬರುವ ಈ ಜಾತ್ರೆ ಎಂಬುದು ಜೀವನದ ಒಂದು ಅತ್ಯಮೂಲ್ಯವಾದ ಭಾಗವಾಗಲು ಅಂತಹ ಕಾರಣವಾದರೂ ಏನಿರಬಹುದು ಎಂದು ಒಂದೊಂದು ಸಲ ದಿಗಿಲುಗೊಂಡಿದ್ದಿದೆ! ಈ ದಿಗಿಲು ದೇವರ ಮಹಾತ್ಮೆಗೋ, ಅಥವಾ ಜಮಾಯಿಸುವ ಜನರ ಸಂಖ್ಯೆಗೋ ಅಥವಾ ಅಲ್ಲಿ ಕಾಣಸಿಗುವ ಬಣ್ಣ ಬಣ್ಣದ ವಸ್ತುಗಳಿಗೋ ಎಂಬುದೇ ಪ್ರಶ್ನೆ. ಪ್ರಶ್ನೆಗೆ ಉತ್ತರ ಅರಸುತ್ತ ಹೋದಂತೆಲ್ಲ ನನ್ನ ಮನೋರಂಗದಲ್ಲಿ, ಗೌಜಿ ಗದ್ದಲ; ಅದೇ ಜಾತ್ರೆಯಲ್ಲಿ ಕಂಡುಬರುವಂತಹ ಒಂದು ಮಂದವಾದಂತಹ ಧೂಳಿನ ರಾಶಿಯ ತರಹ ! ಹಾಗೂ ಅಷ್ಟೇ ಸ್ಪಷ್ಟವಾದರೂ ಅಸ್ಪಷ್ಟವಾದ ಕೇಳಿಬರುವ ಗದ್ದಲದ ತರಹ! ಮೊದಲಿಗೆ ಆಕರ್ಷಣೆಯ ಕೇಂದ್ರಬಿಂದುವಾದಂತಹ ಬಣ್ಣದ ವಸ್ತುಗಳ ಬಗ್ಗೆ ಗಮನಹರಿಸಿದರೆ, ಜಾತ್ರೆಯಲ್ಲಿ ಸಿಗದ ವಸ್ತುಗಳೇ ಇಲ್ಲ ಎನ್ನಬಹುದು. ಇಲ್ಲಿ ತಾಯತಕ್ಕೆ ಬೇಕಾಗುವ ಕರೀ ದಾರ, ಬೇಂಟೆಕ್ಸ್ ಬಳೆಗಳು, ಪಂಚಲೋಹದ ಬಳೆಗಳಿಂದ ಶುರುವಾಗಿ ಪಾತ್ರೆ -ಪಗಡೆ, ಮನೆ ಅಲಂಕಾರಿಕ ವಸ್ತುಗಳು, ದಿನನಿತ್ಯದ ಬಟ್ಟೆಗಳು; ಅಷ್ಟೇ ಯಾಕೆ ಕಿವಿ ಚುಚ್ಚುವವರು, ಹಚ್ಛೆ ಹಾಕುವವರು, ಎಂಥದೆಂಥದೋ ಮಸಾಜ್ ಮಾಡುವ ಎಣ್ಣೆಗಳು ಇತ್ಯಾದಿ. ಈಗಲೂ ಬೆಂಗಳೂರಿನ ಮಾಲ್ಗಳಲ್ಲಿ ಸಿಗಲಾರದ ವಸ್ತುವನ್ನು ಹುಡುಕಿ ಹುಡುಕಿ ಸುಸ್ತಾದಾಗ ಮಗ ಅಳುಮೋರೆ ಮಾಡಿಕೊಂಡು "ನಾವದನ್ನ ಮುಂದಿನ ಸಲದ ಜಾತ್ರ್ಯಾಗ್ ತೊಗೊಳೋನು?" ಎಂದು ಕೇಳುತ್ತಿದ್ದರೆ , ಇವನಿಗೂ ಕೂಡ ಜಾತ್ರೆಯಲ್ಲಿ ಎಲ್ಲ ವಸ್ತುಗಳು ಸಿಗುತ್ತವೆ ಎಂದು ತಿಳಿದು ಹೋಯಿತೇ? ಎಂಬ ಆಶ್ಚರ್ಯ.
ಈಗಿನ ವಾಟ್ಸಪ್ಪ್ ಯುಗದಲ್ಲಿ ಎಷ್ಟೋ ಸ್ನೇಹ ಸಮ್ಮೇಳನಗಳ ಯೋಜನೆ ಮಾಡಿದರೂ ಕೈಗೂಡದೆ ಇದ್ದದ್ದು ಜಾತ್ರೆ ಸಮಯದಲ್ಲಿ ಯಾವೊಂದು ಪೂರ್ವತಯಾರಿಯೂ ಇಲ್ಲದೆ ಇದ್ದರೂ ಎಲ್ಲ ಹಳೆಯ ಮುಖಗಳು ಕಾಣಸಿಗುತ್ತವೆ. ಯಾವ ಸೂಚನೆಯು ಇಲ್ಲದೆಯೂ ಎಲ್ಲ ಅಘೋರಿಗಳೂ ಏಕಕಾಲಕ್ಕೆ ಕುಂಭಮೇಳಕ್ಕೆ ಜಮಾಯಿಸುವಂತೆ, ಎಲ್ಲೆಲ್ಲೋ ಹೊಟ್ಟೆಪಾಡಿಗೆ ಇರುವ ಜನರು ಏಕಕಾಲಕ್ಕೆ ಊರಿಗೆ ಬಂದು ಜಮಾಯಿಸುವುದು ಜಾತ್ರೆಯಲ್ಲಿಯೇ. "ಏ ಮಗನಾ, ನೋಡಿಲ್ಲಿ ಈಕಿ ನನ್ನ ಗೆಳತೀ, ಯಾವಾಗ್ಲೂ ಇಕಿನ ಶಾಲಿಗಿ ಫಸ್ಟ್ ಬರ್ತಿದ್ಲು " ಎಂದು ನನ್ನ ಬಾಲ್ಯದ ಗೆಳತಿ ಬಗಲಲ್ಲೊಂದು ಕೂಸನ್ನು ಎತ್ತಿಕೊಂಡೇ ತನ್ನ ಮೊದಲನೇ ಮತ್ತು ಎರಡನೇ ಮಕ್ಕಳಿಗೆ ನನ್ನನ್ನು ಪರಿಚಯಿಸುತ್ತಿದ್ದರೆ, ಅರೆ ನಾವಿನ್ನೂ ಇಂಜಿನಿಯರಿಂಗ್, ಸ್ನಾತಕೋತ್ತರ, ನೌಕರಿ ಎಂದೆನ್ನುತ ಒಂದೇ ಮಗುವಿನ ಜೊತೆ ಹೆಣಗುತ್ತಿದ್ದರೆ, ಇವಳು ಜೀವನದ ಈ ಮೈಲಿಗಲ್ಲನ್ನು ಯಾವಾಗಲೋ ದಾಟಿಬಿಟ್ಟಿದ್ದಾಳಲ್ಲವೇ? ಚಿಕ್ಕವರಿದ್ದಾಗ ಹೇಳಿದ ಪಾಠವನ್ನು ಸರಿಯಾಗಿ ಬರೆದುಕೊಳ್ಳಲೂ ಬರದೇ ಇದ್ದ ಹುಡುಗಿ ಈಗ ಜೀವನದ ಪಾಠವನ್ನೇ ಹೇಳುವಷ್ಟು ಬದಲಾಗಿದ್ದಾಳಲ್ಲವೇ ಎಂಬ ಸೋಜಿಗ. ಇನ್ನು ಜಾತ್ರೆ ಎಂದರೆ ವಿಶೇಷವಾಗಿ ನೆನಪಿಗೆ ಬರುವುದೇ ಬಣ್ಣ ಬಣ್ಣದ ನಾನಾ ಬಗೆಯ ಆಟಿಕೆಗಳು. ಅದರಲ್ಲೂ ನನಗೆ ಅತೀ ಅಗ್ಗದ ಸರಳ ಆಟಿಕೆಗಳ ಮೇಲೆಯೇ ವಿಶೇಷ ಆಕರ್ಷಣೆ. ಇಂಥ ಆಟಿಕೆಗಳು ಅಂಗಡಿಯಲ್ಲಿ ಕಾಣಸಿಗದೇ ನೆಲದ ಮೇಲೆಯೇ ಇಟ್ಟುಕೊಂಡು ಮಾರುತ್ತಿದ್ದರು. ಬರಿ ಐದು ಹತ್ತು ರೂಪಾಯಿಯ ಈ ಆಟಿಕೆಗಳಲ್ಲಿ ತುಂಬ ಸರಳ ವಿಧಾನವಿರುತ್ತಿತ್ತು. ಕೋಳಿ ಬಂದೂಕು (ಬಂದೂಕನ್ನು ಒತ್ತಿದರೆ ಅದರ ಎರಡೂ ತುದಿಗಳಿಗಿರುವ ಕೋಳಿಗಳು ನಡುವೆ ಅಳವಡಿಸಿದ ಬುಟ್ಟಿಯಲ್ಲಿನ ಕಾಳುಗಳನ್ನು ಒಂದಾದ ಮೇಲೊಂದು ತಿನ್ನುವ ಹಾಗಿರುವ ಜೋಡಣೆ), ಕೀಲಿ ಕೊಟ್ಟರೆ ಕುಣಿಯುವ ಜಿಗಿಯುವ ಅಥವಾ ಡೋಲು ಬಾರಿಸುವ ಮಂಗ, ಇನ್ನೂ ಏನೇನೋ. ಆ ಕೋಳಿಗಳೇಕೆ ಡಿಕ್ಕಿಯೇ ಹೊಡೆಯುವುದಿಲ್ಲ? ಮಂಗನ ಕೈ ಏಕೆ ಮುರಿಯುವುದಿಲ್ಲ? ಒಳಗೆ ಹುದುಗಿರುವ ಯಂತ್ರ ಇಂತಹುದಿರಬೇಕು? ಎಂಬೆಲ್ಲ ವಿಚಾರಗಳು ತಲೆಯಲ್ಲಿ. ಇನ್ನೂ ತಲೆ ಕೆಟ್ಟರೆ ಅವುಗಳನ್ನು ಕಲ್ಲಿನಿಂದ ಜಜ್ಜಿ ಒಡೆದು ನೋಡುವುದು. ಬಹುಷಃ ಇಂಥ ಆಟಿಕೆಗಳೇ ಮುಂದೆ ವಿಜ್ಞಾನದಲ್ಲಿ ಆಸಕ್ತಿ ತಳೆಯಲು ಕಾರಣವಾಗಿದ್ದಿರಬೇಕು. ಸಾವಿರಾರು ರೂಪಾಯಿ ಬೆಲೆತೆತ್ತು ತರುವ ರಿಮೋಟ್ ಕಂಟ್ರೋಲರ್ ಹೊಂದಿರುವ, ಅದರಲ್ಲಿ ಅಡಕವಾಗಿರುವ ಪೇಟೆಂಟ್ ಹೊಂದಿರುವ ಚಿಪ್ ಆಟಿಕೆಗಳಿಂದ ಇಂತಹ ಪ್ರಶ್ನೆಗಳೇ ಉದ್ಭವಿಸುವುದಿಲ್ಲವಲ್ಲ! ಹೆಚ್ಚೆಂದರೆ ಶೆಲ್ ಬದಲಿಸುವುದು. ಆದರೆ ಜಾತ್ರೆಯ ಸರಳ ಆಟಿಕೆಗಳ ಮೇಲೆ ಯಾವ ಪೇಟೆಂಟು ಇಲ್ಲವಲ್ಲ. ಅಲ್ಲದೇ ಇದನ್ನು ಮಾರುವ ಮಾರಾಟಗಾರರ ಬದುಕೂ ಕೂಡ ಎಷ್ಟು ಸರಳವಲ್ಲವೇ? ಜಾತ್ರೆಯಲ್ಲಿ ಇಟ್ಟಿದ್ದ ಅಂಗಡಿಯ ಹಿಂದೆಯೇ ಇವರ ಅಡುಗೆ, ಸ್ನಾನ, ನಿದ್ದೆ ಎಲ್ಲವು. ಸರಳತೆಯಲ್ಲಿಯೇ ಖುಷಿ ಎಂದೇ ಈ ಸರಳ ಆಟಿಕೆಗಳು ಸಾರುತ್ತಿದ್ದಿರಬೇಕು. ಈ ಆಟಿಕೆ ಮಳಿಗೆ ಮುಗಿಯುತ್ತಿದ್ದಂತೆ ಬಳೆ ಮಳಿಗೆಗಳು ಪ್ರಾರಂಭವಾಗಿ ಬಳೆಗಳ ಬಣ್ಣ ಕಣ್ಣು ಕುಕ್ಕಲು ಶುರು. "ತಂಗೀ, ದೇವಿ ಜಾತ್ರಿಗ್ ಬಂದ ಬಳಿ ಉಟ್ಕೊಳ್ಳಾರದ ಹೋಗಬ್ಯಾಡ. ನಿಮ್ಮ ಅವ್ವಾ, ಅಜ್ಜಿ ಎಲ್ಲಾರು ಪ್ರತಿ ಜಾತ್ರ್ಯಾಗ್ ನಮ್ಮ ಅಂಗಡ್ಯಾಗ ಬಳಿ ಹಾಕೋತಾರ್. ಬಾ ಇಲ್ಲಿ. ದಾಳಂಬರಿ ಚುಕ್ಕಿ ಬಳಿ ತೋರಸ್ತೀನಿ ! " ಎಂದು ಕರೆಯುತ್ತಿದ್ದರೆ ಈಕೆಯದು ವ್ಯಾಪಾರ ತಂತ್ರವೋ ಅಥವಾ ನಿಷ್ಕಲ್ಮಶ ಕಕ್ಕುಲಾತಿಯೋ ಎಂಬ ಸಂಶಯ ಮೂಡುವಷ್ಟು ಮಾತಿನ ಕುಶಲಗಾರಿಕೆ. ಯಾವಾಗ ಅಮ್ಮ ಮತ್ತು ಬಳೆಗಾರ್ತಿ ಹಿಂದಿನ ದಿನಗಳು, ಗತಿಸಿ ಹೋದ ಹಿರಿತಲೆಗಳನ್ನು ನೆನೆಸಿಕೊಂಡು ಅವರ ಕಣ್ಣು ತುಂಬಿದಾಗ ನನ್ನ ಕೈ ಕೂಡ ಬಳೆಯಿಂದ ತುಂಬಿರುತ್ತಿತ್ತು.
ಈ ಥರ ಮನಸ್ಸು ತುಂಬಿ ಬರುವುದರಿಂದಲೇ ನನಗೆ ಜಾತ್ರೆ ಎಂಬ ಪದವೇ ಆಕರ್ಷಿಸಿ ಬಿಡುತ್ತದೆ. ಇಂಥ ಆಕರ್ಷಣೆಗೆ ಒಳಗಾಗಿಯೇ, ಅಮೆರಿಕದಲ್ಲಿದ್ದಾಗ 'ಟೆಕ್ಸಸ್ ಫೇರ್ ' ಎಂದು ಕಂಡಿದ್ದೆ ತಡ ಒಳನುಗ್ಗಿ ಬಿಟ್ಟಿದ್ದೆವು. ಆದರೆ ಇಲ್ಲಿನ ಹಾಗೆ ಕೈ ತುಂಬಾ ಬಳೆ ತೊಟ್ಟು ಓಡಾಡುತ್ತಿದ್ದ ಮಹಿಳೆಯರನ್ನು ಕಲ್ಪಿಸಿಕೊಂಡಿದ್ದ ನನ್ನ ಕಣ್ಣಿಗೆ ಕಾಣಿಸಿದ್ದು, ಟರ್ಕಿ ಕೋಳಿ ಕಾಲನ್ನು, ಕೈಯಲ್ಲಿ ಐಸ್ಕ್ರಿಮ್ ನಂತೆ ಹಿಡಿದು ತಿನ್ನುತ್ತಾ ತಿರುಗಾಡುತ್ತಿದ್ದ ಜನರು! ನೋಡಲು ಹೋದ ಪ್ರತಿಯೊಂದು ಪ್ರದರ್ಶನಕ್ಕೂ ಟಿಕೆಟ್ ಕೇಳುತ್ತ ಹಣ ಕೀಳುತ್ತಿದ್ದರು. ಇಂಥ ಒಂದೊಂದು ಟಿಕೇಟಿನ ಹಣದಲ್ಲಿ ನಮ್ಮ ಇಡೀ ವಾರದ ಜಾತ್ರೆಯೇ ಮುಗಿಯುತ್ತಿತ್ತು. ಆವಾಗಿನಿಂದ ಜಾತ್ರೆ ಎಂದು ಕಂಡರೂ ಅದರ ಹಿಂದೆ ಮುಂದೆ ಕಣ್ಣಾಡಿಸಲು ಶುರು ಮಾಡಿದ್ದು. ಇದು ಫನ್ ಫೇರೋ, ಫುಡ್ ಫೇರ್, ಅಕ್ಷರ ಜಾತ್ರೆಯೋ, ಜಾನುವಾರು ಜಾತ್ರೆಯೋ ಎಂದು!
ಹಿಂದಿನ ದಿನಗಳಲ್ಲಿ ಚಕ್ಕಡಿ ಗಾಡಿಗಳಲ್ಲಿ (ಎತ್ತಿನ ಗಾಡಿ) ಇಡೀ ಮನೆ ಮಂದಿಯೇ ಜಾತ್ರೆಗೆ ಹೋಗುತ್ತಿದ್ದರು. ಅದರಲ್ಲೂ ಇಡೀ ಊರಿಗೆ ಊರೇ ಎಲ್ಲಮ್ಮನ ಜಾತ್ರೆಗೆ ಹೋಗುತ್ತಿದ್ದರೆ ಮೈಲಿಗಟ್ಟಲೆ ಉದ್ದವಿರುತ್ತಿದ್ದ ಎತ್ತಿನಗಾಡಿಗಳು ಸಂಜೆ ಮಬ್ಬುಗತ್ತಲಲ್ಲಿ ಲಾಟೀನು ಹಚ್ಚಿಕೊಂಡು ಹೋಗುತ್ತಿದ್ದ ದೃಶ್ಯ ದೀಪಗಳ ಸಾಲೇ ಚಲಿಸುತ್ತಿರುವಂತೆ ಭಾಸವಾಗುತ್ತಿತ್ತು. ಆ ಎತ್ತುಗಳ ಕೊರಳ ಗಂಟೆಯ ಹಿಮ್ಮೇಳದಲ್ಲಿ 'ಉಧೋ ಉಧೋ ಉಧೋ s s s ... ಉಧೋ ' ಎಂದು ಎಷ್ಟೋ ಮೈಲಿಗಳಾಚೆ ಮೆಲ್ಲಗೆ ಕೇಳಿಬರುವ ಸದ್ದು ಇನ್ನೂ ಕಿವಿಯಲ್ಲಿ ಅನುರಣಿಸಿದ ಹಾಗೆ ಭಾಸವಾಗುತ್ತದೆ. ಈ ಜಾತ್ರೆ ಮುಗಿಸಿದವರೆಲ್ಲ ವಾಪಸ್ಸಾಗುವಾಗಿನ ಊರಿನ ಜಾತ್ರೆಗಳನ್ನೆಲ್ಲ ಮುಗಿಸಿಕೊಂಡು ಅಂದರೆ ಆಯಾ ದೇವರ ದರ್ಶನ ಮಾಡಿಕೊಂಡೇ ಬರಬೇಕೆಂಬ ನಿಯಮವಿದ್ದುದರಿಂದ ಊರಿಗೆ ಹಿಂದಿರುಗಲು ಸರಿಸುಮಾರು ಒಂದು ತಿಂಗಳೇ ಬೇಕಾಗುತ್ತಿತ್ತು. ಹೀಗಾಗಿ ಅತ್ಯಾವಶ್ಯವಾದ ಎಲ್ಲ ವಸ್ತುಗಳೂ ಅಂದರೆ ಕೊಡ, ಚೆಂಬು, ತಟ್ಟೆ, ಆಹಾರ ಸಾಮಗ್ರಿ, ಹಾಸಿಗೆ, ಲಾಟೀನು, ದನಗಳಿಗೆ ಮೇವು ಎಲ್ಲವನ್ನು ಗಾಡಿಯಲ್ಲಿ ಒಯ್ಯಬೇಕಾಗುತ್ತಿತ್ತು. ಗಾಡಿಯು ಒಂದು ಚಲಿಸುವ ಸಂಸಾರವೇ ಎನ್ನಬೇಕು. ನೀರಿನ ಸೆಲೆ ಕಂಡಾಗ ಗಾಡಿ ನಿಲ್ಲಿಸಿ ಅಲ್ಲಿಯೇ ಒಂದು ತಾತ್ಕಾಲಿಕ ನೆಲೆ ಕಂಡು ದಿನನಿತ್ಯದ ಕೆಲಸ ಮುಗಿಸಿ ಅಡುಗೆ ಬೇಯಿಸಿ ಮತ್ತೆ ಮುಂದಿನ ಪಯಣ. ಗಾಡಿಯಲ್ಲಿ ಹೊತ್ತು ಕಳೆಯಲೆಂದು ಹಾಡಿನ ಬಂಡಿ, ಒಗಟು, ಕಥೆ ಇತ್ಯಾದಿ. ಅತ್ತ ಶೇಂಗಾ ಬಳ್ಳಿಯ ಹೊಲ ಕಂಡಿತೆಂದರೆ, ಕೂತು ಕೂತು ಕಾಲು ಜೋಮು ಬಂತೆಂದು ನೆಪ ಹೇಳಿ ಗಾಡಿಯ ಕೆಳಗಿಳಿದು ಸುತ್ತಮುತ್ತ ಸುಳಿದಂತೆ ಮಾಡಿ ಹೊಲದಲ್ಲಿನ ಬಳ್ಳಿ ಕಿತ್ತು ಶೇಂಗಾ ಸವಿಯುತ್ತಿದ್ದ ಮಜ ಅನುಭವಿಸಿದವರಿಗೆ ಗೊತ್ತು. ಇಷ್ಟೆಲ್ಲಾ ಮಾಡುವ ಹೊತ್ತಿಗೆ ನಮ್ಮ ಕುಟುಂಬದ ಗಾಡಿ ಮುಂದೆ ಸಾಗಿರುತ್ತಿತ್ತು. ಎಲ್ಲಿ ತಾನು ಕಳೆದುಹೋದೆನೋ ಎಂಬ ಭಯ ಸುಳಿದು ಎಲ್ಲ ಗಾಡಿಗಳನ್ನು ಇಣುಕಿ ಇಣುಕಿ ನೋಡುತ್ತ ಹೋಗುವುದು. ಮುಂದೆಯೂ ಕಣ್ಣಿಗೆ ಕಾಣುವಷ್ಟು ದೂರ ಗಾಡಿಗಳು, ಹಿಂದೆಯೂ ಕೊನೆ ಕಾಣದ ಸಾಲು. ಇನ್ನು ಅಳುವುದೊಂದೇ ಬಾಕಿ ಇರುವಾಗ ಉಳಿದ ಗಾಡಿಯವರು ನಮ್ಮನ್ನು ತಮ್ಮ ಗಾಡಿಯಲ್ಲಿ ಹತ್ತಿಸಿಕೊಂಡು ಸಮಾಧಾನಿಸುತ್ತಿದ್ದರೆ, ಗಾಡಿಯಲ್ಲಿನ ಹಿರಿತಲೆಗಳು ಹೀಗೆ ಹೇಳಿದ್ವು, "ಈ ಜಗತ್ತ್ ಒಂದ ಸಂಸಾರ! ನಮ್ಮದೇನಿದ್ರೂ ಒಂದ ತಾತ್ಕಾಲಿಕ ನೆಲೆ. ಹಿಂದಿನ ಎತ್ತಗೋಳ ಗಾಡಿ ಸಾಲ ನೋಡು. ಅದ ಎಲ್ಲಿಂದ ಶುರು ಆಯ್ತು ಅಂತ ಕಾಣಂಗಿಲ್ಲ. ಮುಂದ ಎಲ್ಲಿಗ್ ಹೊಂಟೇತಿ ಅಂತಾನೂ ಕಾಣಂಗಿಲ್ಲ. ಆದ್ರೂ ಹೋಗ್ತಾವ್. ಯಾವದೂ ನಿಲ್ಲಾಂಗಿಲ್ಲ. ಆ ಭಗವಂತನ ನೆಲೆ ಬಂದ ಕೂಡಲೇ ನಮ್ಮ ಇಲ್ಲಿನ ಪ್ರವಾಸ ಮುಗೀತಂತ ತಿಳ್ಕೋಬೇಕ !!" ಈ ಸಾಲುಗಳ ಹಿಂದಿನ ಮರ್ಮ ತಿಳಿಯಬೇಕಾದರೆ ಇಷ್ಟು ವರ್ಷಗಳು ಹಿಡಿದವು. ಮುಂದೆ ನಮ್ಮ ಕುಟುಂಬ ಕೂಡಿಕೊಂಡಾಗ ನಮ್ಮ ಅಕ್ಕ-ಅಣ್ಣಂದಿರು "ಅಯ್ಯ, ದೊಡ್ಡ ಹಿರಿ ಮನಶ್ಯಾನ ಗತೆ ಶೇಂಗಾ ಹರ್ಯಾಕ ಹೋಗಿ ಅಳಕೊಂತ ಬಂದೇತಿ ನೋಡ" ಅಂತ ನಗುತ್ತ ಛೇಡಿಸುತ್ತಿದ್ದನ್ನು ನೆನಪಿಸಿಕೊಂಡರೆ ಆ ಕಾರ್ಲ್ ಬೆಂಜ್ ಎನ್ನುವ ವಿಜ್ಞಾನಿ ಯಾಕಾದರೂ ವಾಹನವನ್ನು ಕಂಡು ಹಿಡಿದನೋ ಎಂಬ ವಿಚಿತ್ರವಾದ ಸಿಟ್ಟು!
ಇತ್ತೀಚಿಗೆ 'ಜಾತ್ರೆಗಳಲ್ಲಿ ಕೋಮುಗಲಭೆ' ಎಂಬ ಸುದ್ದಿಗಳು ಆಗಾಗ ಕೇಳಿಬರುತ್ತಿದ್ದರೂ, ಜಾತ್ರೆಗಳು ಧಾರ್ಮಿಕ ಅನ್ಯೋನ್ಯತೆಯ ಸಂಕೇತವೂ ಹೌದು. ಜಾತ್ರೆಗಳಲ್ಲಿ ದೇವರಿಗೆ ಸಂಭಂದಿಸಿದ ಪೂಜಾ ಸಾಮಗ್ರಿಗಳನ್ನು ಹೆಚ್ಚಾಗಿ ಮಾರುವವರು ಅನ್ಯಧರ್ಮಿಯರೇ. ನನ್ನೂರಲ್ಲಿ ಪ್ರತಿ ಜಾತ್ರೆಯಲ್ಲಿ ಕುಂಕುಮ ಇತ್ಯಾದಿ ಪರಿಕರಗಳನ್ನು ಕೊಳ್ಳುವುದು ಅಹ್ಮದ್ ಚಾಚಾ ಕಡೆಯಿಂದಲೇ. ನಗುಮುಖದಿಂದ ಎಲ್ಲ ಸಾಮಾನುಗಳನ್ನು ಚೊಕ್ಕಟವಾಗಿ ಕೊಡುವ ಈ ಚಾಚಾ 'ದೇವಿಗೆ ಮೊದ್ಲ ಉಡಿ ತುಂಬಾವ್ರ್ ನಾವ ನೋಡ್ರಿ. ಆಮೇಲೆ ನೀವು ಹೆಣ್ಣುಮಕ್ಕಳು ನೋಡ್ರಿ. ನನ್ನ ಹೆಣ್ಣಮಕ್ಳು ಮದೀನಾ, ಮುನ್ನಿ ಇಬ್ರು ನಿನ್ನೆನ ಉಡಿ ತುಂಬಿದ್ರ. ಇವತ್ತ್ ಭಾಳ್ ಮಂದಿ ನೋಡ್ರಿ ' ಅಂತ ಕಾಳಜಿ ನುಡಿ. ಅದೇ ತೆರನಾಗಿ ಅವರ ಹಬ್ಬಕ್ಕೆ ನಾವು ಗಲಿಫ್ ಮಾಡಿಸಿ ಹಾಕುವ ಪದ್ಧತಿ ಹಾಗು ನೈವೇದ್ಯ ತೋರಿಸುವ ಪದ್ದತಿಗೆ; ಇಂದಿಗೂ ಅಮ್ಮನ ಮನೆಯಲ್ಲಿರುವ ಚೋನ್ಗೆ ಖಾದ್ಯ ಮಾಡುವ ಮಣೆ ಇರುವುದೇ ಸಾಕ್ಷಿ. ಮದುವೆಯಲ್ಲಿ ತಾಯಿಯಿಂದ ಬಳುವಳಿಯಾಗಿ ಬರುವ ಪಾತ್ರೆ, ಪಗಡೆಗಳ ಜೊತೆ ಈ ಚೋನ್ಗೆ ಮಣೆ ಕೂಡ ಬಂದಿತ್ತು!
ಒಮ್ಮೊಮ್ಮೆ ಜಾತ್ರೆ ಹೆಸರನ್ನು ದಿನಪತ್ರಿಕೆಯಲ್ಲೋ ಅಥವಾ ಜಾಹಿರಾತಿನಲ್ಲೋ ಕೇಳಿದರೆ ಕರ್ನಾಟಕದ ಭೂಪಟವೇ ಕಣ್ಣ ಮುಂದೆ ಬರುತ್ತದೆ. ಬನಶಂಕರಿ, ಎಲ್ಲವ್ವ, ಹೊಳೆವ್ವ,ಮಾಯವ್ವಾ, ಲಗಮವ್ವ,ಥಲದವ್ವ ಅಂದರೆ ಅದು ಉತ್ತರ ಕರ್ನಾಟಕವೇ. ಮಾರಿಕಾಂಬಾ, ದುರ್ಗಾಪರಮೇಶ್ವರಿ, ಮೂಕಾಂಬಿಕೆ, ಇಂದ್ರಾಣಿ ಎಂದರೆ ಕರಾವಳಿಯೇ. ಇನ್ನು ಮಾರಮ್ಮ, ಚಾಮುಂಡಿ, ಚೌಡೇಶ್ವರಿ, ಅಂಡಾಳಮ್ಮ ಎಂದರೆ ದಕ್ಷಿಣ ಕರ್ನಾಟಕವೇ. ಎಲ್ಲ ದೇವರೂ, ಅವತಾರಗಳೂ ಒಂದೇ ಇದ್ದರೂ ಅದ್ಯಾವಾಗ ಹೆಸರಿನ ಆಧಾರದ ಮೇಲೆ ಆಯಾ ಪ್ರಾಂತ್ಯದಲ್ಲಿ ನೆಲೆಸಿದರು? ಅಥವಾ ಪ್ರಾಂತ್ಯದ ಆಧಾರದ ಮೇಲೆ ಹೆಸರು ಬಂದವೋ? ಒಟ್ಟಿನಲ್ಲಿ ಜಾತ್ರೆಗಳು ಭೌಗೋಳಿಕ ಸತ್ಯವನ್ನು ಒಂದರ್ಥದಲ್ಲಿ ತಿಳಿಹೇಳುತ್ತವೆ ಎಂದಾಯ್ತು. ಜಾತ್ರೆ ಇಷ್ಟೆಲ್ಲಾ ವಿಚಾರಗಳನ್ನು ಒರೆ ಹಚ್ಚಲು ಪ್ರೇರೇಪಿಸಿದರೂ 'ಜನ ಮರುಳೋ? ಜಾತ್ರೆ ಮರುಳೋ?' ಅಂತಾರಲ್ಲ. ಜನ ಒಂದೆಡೆ ಒಟ್ಟುಗೂಡಿದ್ದರಿಂದಲೇ ಜಾತ್ರೆ ಎಣಿಸಿಕೊಳ್ಳುತ್ತದಲ್ಲವೇ? ಅಥವಾ ಜಾತ್ರೆ ಅಂತ ದಿನ ನಿಗದಿ ಪಡಿಸಿದ ನಂತರವೇ ಜನ ಒಟ್ಟುಗೂಡುತ್ತಾರಲ್ಲವೇ? ಹಾಗಾದ್ರೆ ಯಾವುದಾದರೊಂದು ಮರುಳಾದರೂ ಸಾಕಲ್ಲವೇ?! ಮತ್ತ್ಯಾಕೆ ಈ ಉಕ್ತಿ ಹುಟ್ಟಿತೋ ಗೊತ್ತಿಲ್ಲ. ಈ ಜಾತ್ರೆಗೆ ಮರುಳಾದ ಮಾನವಕುಲ ನೆಟ್ಟಗಿರುವ ಪ್ರಾಣಿಗಳ ನಡುವೆ ಸ್ಪರ್ಧೆ ಏರ್ಪಡಿಸಿ ಮನರಂಜನೆ ಗಿಟ್ಟಿಸುತ್ತಾರೆ ಅಂದರೆ ಅದು ಅತಿಶಯೋಕ್ತಿ ಅಲ್ಲ. ಜೋಡೆತ್ತಿನ ಶರ್ಯತ್ತು, ಕುರಿ ಕಾಳಗ, ಇತ್ತೀಚೆಗೆ ಜನಪ್ರಿಯಗೊಂಡಿರುವ ನಾಯಿ ಓಟದ ಸ್ಪರ್ಧೆ, ಎಲ್ಲವುಗಳಲ್ಲಿಯೂ ಭಾಗವಹಿಸುವ ಜಾನುವಾರುಗಳು ಲಕ್ಷಾನುಗಟ್ಟಲೆ ಬೆಲೆಬಾಳುತ್ತವೆ. ಆದರೆ ಇದೇ ಜಾನುವಾರುಗಳನ್ನು ದೇವರಿಗೆ ಬಲಿ ಕೊಡುವುದೂ ಕೂಡ ಜಾತ್ರೆಯ ಮುಖ್ಯ ಅಜೇಂಡಾಗಳಲ್ಲಿ ಒಂದು. ಅದರಲ್ಲೂ ದೇವಿ ಜಾತ್ರೆಯಾಗಿದ್ದರೆ ಅಲ್ಲೊಂದು ರಕ್ತದ ಹೊಳೆಯೇ ಹರಿದಿರುತ್ತದೆ. ಇಂಥ ರೌದ್ರಾವತಾರದ ದೇವಿ ಜಾತ್ರೆಯಲ್ಲಿಯೇ ಪಡ್ಡೆ ಹುಡುಗರು ಅದೇ ಹೆಣ್ಣಿನ ರೂಪವಾದ ಹೆಣ್ಣುಮಕ್ಕಳ ಮೈ ಕೈ ಮುಟ್ಟಿ ನಗುವಾಗ ದೇವಿಯೇ ಬಂದು ಅವರ ಹೊಟ್ಟೆ ಬಗೆಯುವುದನ್ನು ಕಲ್ಪಿಸಿಕೊಂಡಿದ್ದ ನಮ್ಮ ಮುಗ್ಧ ಮನಸ್ಸುಗಳು ಬೆಳೆಯುತ್ತ ಬೆಳೆಯುತ್ತ ನಾಟಕದಲ್ಲಿಯೋ ಅಥವಾ ಸಿನಿಮಾಗಳಲ್ಲಿ ತೋರಿಸುವಂತೆ ನಾಯಕನು ನಾಯಕಿಯನ್ನು ಪೋಲಿ ಹುಡುಗರಿಂದ ರಕ್ಷಣೆ ಮಾಡಲು ಸಿಗುವ ಅವಕಾಶವನ್ನು ಹುಟ್ಟು ಹಾಕುವ ವೇದಿಕೆಯಾಗಿ ಕಂಡಿತು ಜಾತ್ರೆ!
ಇವುಗಳೆಲ್ಲದರ ಆಚೆಗೆ ಜಾತ್ರೆ ಎಂಬುದು ನಂಬಿಕೆ, ಪ್ರೀತಿ,ಗೌರವ, ಮನುಷ್ಯತ್ವ, ಅಧ್ಯಾತ್ಮ, ಮೂಢನಂಬಿಕೆ ಎಲ್ಲ ವಿಚಾರಗಳನ್ನೂ ಮೇಳೈಸಿಕೊಂಡಿರುವ ಕಾಲದ ವಿವಿಧ ಸ್ತರಗಳನ್ನು ತೋರಿಸುವ ಒಂದು ಮಾಯೆಯಂತೆ ಕಂಡರೂ, ಜನಸಾಗರದಂತೆ ಕಂಡರೂ; ಇದೊಂದು ಭಾವನೆಗಳ ಮಹಾಪೂರದಲ್ಲಿ ಮಿಂದೇಳುವ ಪ್ರಕ್ರಿಯೆಯೇ ಹೌದು.
ಧನ್ಯವಾದಗಳು,