ಮಗ ಶಾಲೆಗೆ ಹೋಗಲು ಶುರು ಮಾಡಿದ್ದರಿಂದ ನನಗೆ ಸಿಗುವ ಅತ್ಯಮೂಲ್ಯ ಮೂರು ಗಂಟೆಗಳಲ್ಲಿ ಮಾಡದ ಕೆಲಸವೇ ಇಲ್ಲ. ಅದರಲ್ಲಿ ಮನೆಯ ಸ್ವಚ್ಛತಾ ಅಭಿಯಾನವೂ ಒಂದು. ಹೀಗೆ ಸ್ವಚ್ಛ ಮಾಡುತ್ತಿರಬೇಕಾದರೆ ಒಂದು ಪುಸ್ತಕವನ್ನು ಟೇಪಿನಿಂದ ಐದಾರು ಸುತ್ತು ಸುತ್ತಿ ಭದ್ರಪಡಿಸಿತ್ತು. ಇದೇನು? ಎಂದು ನೋಡುತ್ತಿರಬೇಕಾದರೆ ನನ್ನ ಮನಸ್ಸು, "ಮಂಗ್ಯಾ, ಇದ ನಿನ್ನ ಡೈರಿ. ನೀನ ಅದನ್ನ ಪ್ಯಾಕ್ ಮಾಡಿದ್ದ ಮರತ ಹೋತ್ ಏನು?" ಎಂದು ರೊಚ್ಚಿಗೆದ್ದಾಗ; ಈಗೆಲ್ಲಾ ನನ್ನ ಭಾವನೆಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಕರ್ನಾಟಕ ಜನತೆಗೆ ಡಂಗುರ ಬಡಿಯುವ ನಾನು ಈ ಡೈರಿಯಲ್ಲಿ ಹಂತಾದ್ದೇನು ಬರ್ದಿದ್ದೀನಿ ಎಂದು ಸಂಶಯ ಮೂಡಿತು! ತೆಗೆದು ನೋಡಿದರೆ ಇಪ್ಪತ್ತು ವರ್ಷಗಳ ಇತಿಹಾಸದಲ್ಲಿ ಹೂತು ಹೋದೆನು. ನನಗೆ ಸಿಕ್ಕ ಮೊದಲ ಉಡುಗೊರೆ, ಅಮ್ಮ ಬಯ್ದಿದ್ದು, ಅಣ್ಣ ನನ್ನ ರಕ್ಷಣೆಗಾಗಿ ನಿಂತಿದ್ದು, ಅಕ್ಕ ತನ್ನ ಶಾಲೆಗೆ ನನ್ನನ್ನು ಕರೆದೊಯ್ದಿದ್ದು, ಜೀವಮಾನದಲ್ಲೇ ಮೊದಲು ನೋಡಿದ ಹಾವು ಹಾಗು ಅದರ ವರ್ಣನೆ, ಶಾಲೆ ಮುಂದೆ ಇರುವ ಮೊಸಳೆ ಗಿಡದ ಆಟ, ಕೆಂಪವಲಕ್ಕಿ ಆಸೆಗೆ ಯಾರಿಗೂ ಹೇಳದೆ ಕೇಳದೆ ಗೆಳತೀ ಮನೆಗೆ ಹೋಗಿದ್ದು, ಕದ್ದ ಪೆನ್ಸಿಲಿನ ಕಥೆ, ತಂದೆ ಬರೆದುಕೊಟ್ಟ ಸ್ವಾತಂತ್ರ್ಯೋತ್ಸವದ ಭಾಷಣದ ಚೀಟಿಗಳು, ಋತುಚಕ್ರದ ಬಗ್ಗೆ ಗೆಳತಿಯರೊಂದಿಗೆ ಗುಸುಗುಸು ಮಾತನಾಡಿದ ಚರ್ಚೆಗಳು, ಶಾಲೆ ಕಾಲೇಜುಗಳಲ್ಲಿ ಕಾರ್ಯಕ್ರಮ ನಡೆಸಿಕೊಡಲು ತಯಾರಿಸಿದ ಟಿಪ್ಪಣಿಗಳು, rank ಬರದೇ ಹೋದಾಗ ಮಾಡಿದ ಭೀಷಣ ಪ್ರತಿಜ್ಞೆ ಇತ್ಯಾದಿ. ಓದುತ್ತಿರಬೇಕಾದರೆ ಡೈರಿ ಬರಿಯ ಒಂದು ಪುಸ್ತಕ ಎನಿಸದೇ ನಮ್ಮ ಭೂತಕಾಲವನ್ನು ತೋರಿಸುವ ಟೈಮ್ ಮಷಿನ್ ನಂತೆ ಭಾಸವಾಗತೊಡಗಿತು! ಅದಕ್ಕೇ ಆ ಟೈಮ್ ಮಷಿನ್ ನನ್ನು ನಾನೊಬ್ಬಳೇ ಬಳಸಬೇಕೆಂದೇ ಅದನ್ನು ಭದ್ರಪಡಿಸಿ ಜೋಪಾನವಾಗಿ ಇಟ್ಟಿದ್ದು!
ಆದರೆ ಈಗೀಗ ಡೈರಿ ಭದ್ರವಾಗಿಡಲು ಪುಸ್ತಕಕ್ಕೆ ಪುಟ್ಟ ಕೀಲಿ ಇರುವಂತಹವು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅಷ್ಟೇ ಏಕೆ? ತರತರದ ವಿನ್ಯಾಸವುಳ್ಳ ಡೈರಿ, ಉಡುಗೊರೆ ಕೊಡಲೆಂದೇ ಇರುವ ಡೈರಿ, ಮೇಲಿನ ಹೊದಿಕೆಗೆ ಕಟ್ಟುವ ವಿನ್ಯಾಸ, ಚರ್ಮದ ಹೊದಿಕೆ ಇರುವಂತದ್ದು, ಮುಚ್ಚಿದ ಮೇಲೆ ಪುಟ್ಟ ಬಟನ್ ನಿಂದ ಭದ್ರಪಡಿಸುವಂತದ್ದು ಇತ್ಯಾದಿ. ನನಗೆ ಮಾತ್ರ ಡೈರಿ ಎಂದರೆ ಮೊತ್ತ ಮೊದಲು ನೆನಪಾಗುವುದೇ ಜೀವ ವಿಮೆ ಏಜಂಟರು ಕೊಡುವ ಡೈರಿ ಅಲಿಯಾಸ್ ಎಲ್ ಐ ಸಿ ಡೈರಿ ಎನ್ನಬಹುದು! ನಾನು ಯಾವತ್ತೂ ಡೈರಿ ಕೊಂಡಿದ್ದೇ ಇಲ್ಲ. ಅದೂ ಅಲ್ಲದೆ ಚಿಕ್ಕವಳಿದ್ದಾಗ ದಿನಚರಿ ಬರೆಯುವುದೊಂದೇ ಗೊತ್ತಿತ್ತೇ ವಿನಃ ಅದನ್ನು ಇಂತಹದ್ದೇ ಪುಸ್ತಕದಲ್ಲಿ ನಮೂದಿಸಬೇಕೆಂದು ಗೊತ್ತಿರಲಿಲ್ಲ. ಈಗಲೂ ಈ ಅನಕೊಂಡದ ಬಂಧನದಲ್ಲಿ ಕುಳಿತ ಹೊತ್ತಿಗೆಯಲ್ಲಿ ನೂರಾರು ತರಹದ ಚಿಕ್ಕ ಚಿಕ್ಕ ವಿದ್ಯಾ ನೋಟಬುಕ್ ನ (ಶಾಲೆಗೆ ಉಪಯೋಗಿಸಿ ನಂತರ ಉಳಿದ ಖಾಲಿ ಹಾಳೆಗಳು ) ಮಾಸಿದ ಹಳದಿ ಬಣ್ಣದ ಹಾಳೆಗಳು, ಬರೆಯಬೇಕೆಂದಾಗ ಕೈಗೆ ಸಿಕ್ಕ ಖಾಲಿ ಹಾಳೆಗಳು, ಎಲ್ ಐ ಸಿ ಡೈರಿಗಳು, ಇನ್ನು ಕೆಲವು ಪರೀಕ್ಷೆ ಬರೆಯಲು ಬಳಸುತ್ತಿದ್ದ ಸ್ವಲ್ಪ ದೊಡ್ಡದಾದ ಪೇಪರುಗಳು, ಕೆಲವು ಖಾಲಿ ಇದ್ದರೆ ಇನ್ನು ಕೆಲವುದರ ಹಿಂದೆ ಅಮ್ಮ ಬಿಡಿಸಿದ ಗಂಟು ಗಂಟಾದ ರಂಗೋಲಿಗಳೋ ಅಥವಾ ನಾನು ಬರೆದ ಬೀಜಗಣಿತದ ಲೆಕ್ಕಗಳೋ, ತಿದ್ದಿ ತೀಡಿದ ಮಾನವನ ಜೀರ್ಣಾಂಗವ್ಯೂಹ! ಇನ್ನು ಏನೇನೋ! ಹೀಗಾಗಿ ಡೈರಿಯಿಂದ ಬರೀ ನಮ್ಮ ಇತಿಹಾಸ ಅಷ್ಟೇ ಅಲ್ಲದೆ ನಮ್ಮ ನಮ್ಮ ಕಲೆ, ಗಣಿತ, ವಿಜ್ಞಾನದ ಆಗಿನ ಪರಿಚಯವೂ ಬೋನಸ್ ನಂತೆ ಸಿಗುತ್ತದೆ! ಅದಕ್ಕೇ ಅಲ್ಲವೇ ಇದು ಅಪ್ಯಾಯಮಾನವಾದುದು. ವಿಶ್ವ ಮಹಾಯುದ್ಧ ನಡೆಯುತ್ತಿದ್ದಾಗ ಆನ್ನೇ ಫ್ರಾಂಕ್ ಎಂಬ ಹುಡುಗಿ ತಮ್ಮ ಇಡೀ ಕುಟುಂಬ ನಾಜಿಗಳಿಂದ ಬಚ್ಚಿಟ್ಟುಕೊಂಡು ಕುಳಿತಾಗ ತನ್ನ ಡೈರಿ ಬರೆಯದೇ ಹೋಗಿದ್ದರೆ ಆವತ್ತಿನ ಆ ಚಿತ್ರಣ ನಮಗೆ ಸಿಗುತ್ತಿತ್ತೇ? ದಿನಪತ್ರಿಕೆಯಲ್ಲಿ ಮಹಾಯುದ್ಧದ ಬಗ್ಗೆ ವರದಿ ಓದುವುದಕ್ಕೂ ಹಾಗೂ ಹದಿಮೂರು ವರ್ಷದ ಬಾಲಕಿಯ ಭಾವನೆಗಳಿಂದ ಯುದ್ಧದ ಬಗ್ಗೆ ತಿಳಿದುಕೊಳ್ಳುವುದಕ್ಕೂ ಇರುವ ವ್ಯತ್ಯಾಸವನ್ನು ಆ ಡೈರಿಯ ಪುಸ್ತಕ ಮುದ್ರಣಗೊಂಡು ಮಾರಾಟವಾದ ದಾಖಲೆಯೇ ತೋರಿಸುತ್ತದೆ.
ಅಷ್ಟಕ್ಕೂ ಡೈರಿ ಎನ್ನುವುದು ನಮ್ಮ ದಿನದ ಆಗುಹೋಗುಗಳೋ ಅಥವಾ ಭಾವನೆಗಳನ್ನಷ್ಟೇ ನಮೂದಿಸದೆ ಕೆಲವೊಂದು ಬಾರಿ ಅಂಕಿ ಅಂಶಗಳನ್ನು ನಮೂದಿಸಿದ್ದಿದೆ. ಉದಾಹರಣೆಗಾಗಿ ನಾವು ಸಾಕಿದ ಬೆಕ್ಕು ಯಾವ ದಿನ ಎಷ್ಟು ಮರಿ ಹಾಕಿತು, ಆ ವರ್ಷದ ಗರಿಷ್ಠ ಮಳೆ, ಹೊಲದಲ್ಲಿ ಎಷ್ಟು ಚೀಲ ಕಡಲೆ, ಸೋಯಾಬೀನ್ ಬಂತು, ಎಮ್ಮೆ ಕರು ಹಾಕಿದ್ದು ಹಾಗು ಆ ಕರುವಿಗೆ ಹಾಲು ಕುಡಿಯಲು ಬಾರದೇ ಇದ್ದಾಗ ನಮ್ಮ ರೈತ ದಿನಕ್ಕೆ ಎಷ್ಟು ಬಾಟಲಿ ಹಾಲು ಕುಡಿಸಿದ! ಹೀಗೆ ಹತ್ತು ಹಲವಾರು. ಇನ್ನು ನನ್ನ ಅಮೆರಿಕೆಯ ಪ್ರವಾಸದ ಬಗ್ಗೆ ಡೈರಿಯಲ್ಲಿ ಬರೆಯುತ್ತಿದ್ದೇನೆ ಎಂದು ನನ್ನ ಅಪ್ಪನಿಗೆ ಹೇಳಿದಾಗ, ಅವರು 'ಬರೆದಿಡು, ಅದೊಂದು ಪ್ರವಾಸ ಕಥನವಾಗಬಹುದು' ಎಂದಿದ್ದರು. ಹೀಗೆ ಏನು ಬರೆಯುತ್ತಿದ್ದೇವೆ ಎಂಬುದರ ಆಧಾರವಾಗಿ ಡೈರಿ ಬರೆಯುವಿಕೆಯಲ್ಲಿ ಹತ್ತು ಹಲವಾರು ಪ್ರಕಾರಗಳಿವೆ ಎಂದು ಗೊತ್ತಾದದ್ದು ತೀರಾ ಇತ್ತೀಚಿಗೆ. ಅದೂ ನನ್ನ ಮಗ ಹುಟ್ಟಿದ ಮೇಲೆ ಅವನ ಆರೋಗ್ಯದಲ್ಲಿ ಏರುಪೇರಾದಾಗ ಅವನು ಏನು ತಿಂದ? ಎಷ್ಟು ಸಲ ಮೂತ್ರ ವಿಸರ್ಜಿಸಿದ ಎಂದೆಲ್ಲ ಬರೆದು ಅದನ್ನು ಡಾಕ್ಟರಿಗೆ ತೋರಿಸಿದೆ. ಅವರು "ಓಹ್ ನೀವು ಅವನ ಡಯಟ್ ಕಮ್ ಹೆಲ್ತ್ ಚಾರ್ಟ್ ಇಟ್ಟಿದ್ದೀರಾ? ನೀವೊಬ್ಬ ಮಾದರಿ ತಾಯಿ!" ಎಂದೆನ್ನುತ್ತಾ ಡೈರಿಯ ಹಿಂದೆ ಮುಂದೆ ಕಣ್ಣಾಡಿಸಿದರು. ಅದರಲ್ಲಿ ನನ್ನ ಗರ್ಭಧಾರಣೆ ಪರೀಕ್ಷೆಯಿಂದ ಶುರುವಾಗಿ ಮಗು ಮೊದಲ ಬಾರಿ ಒದ್ದಿದ್ದು, ಹುಟ್ಟಿದ ನಂತರ ಮೊದಲು ನಕ್ಕಿದ್ದು, ಬೋರಲು ಬಿದ್ದಿದ್ದು, ಮಣ್ಣು ತಿಂದಿದ್ದು, ಬೇಕು ಅಂತಲೇ ಚಿತ್ರ ಬರೆಯುವ ಹಾಗೆ ಮೂತ್ರ ವಿಸರ್ಜಿಸುವುದು! ಬರೆದಿದ್ದನ್ನು ನೋಡಿದ ಡಾಕ್ಟರಿಗೆ ತಲೆ ಸುತ್ತಿದಂತಾಗಿ ಇದಕ್ಕೆ ಪ್ರೆಗ್ನನ್ಸಿ ಜರ್ನಲ್ ಎನ್ನಬೇಕೋ? ಡಯಟ್ ಡೈರಿ ಎನ್ನಬೇಕೋ ಎಂದು ನಿರ್ಧರಿಸದೆ, ಪ್ರತಿಕ್ರಿಯಿಸದೆ ತಮ್ಮ ಪ್ರಿಸ್ಕ್ರಿಪ್ಷನ್ ಬರೆಯಲು ಮುಂದುವರಿಸಿದ್ದರು! ಆದರೆ ನನ್ನ ಗಮನ ಸೆಳೆದಿದ್ದು ಮಗನಿಗೆ ಶಾಲೆಯಲ್ಲಿ ಕೊಟ್ಟ ಶಾಲಾ ಡೈರಿ! ಮೂರು ವರ್ಷದ ಮಗು ಅದೇನು ಡೈರಿ ಬರೀತದ? ಬಹುಷಃ ಅದರಲ್ಲಿ ಹೋಮ್ ವರ್ಕ್ ಏನೆಂಬುದನ್ನು ತಿಳಿಸುತ್ತಾರೆ ಎಂದುಕೊಂಡಿದ್ದೆ. ಕೆಲ ದಿನಗಳಲ್ಲೇ ಅದು ಬರಿ ಹೋಮ್ ವರ್ಕ್ ಗಷ್ಟೇ ಸೀಮಿತವಾಗಿರದೆ, "ಅವನು ದೋಸೆ ತಿನ್ನುತ್ತಿಲ್ಲ. ಬೇರೆ ಏನಾದರೂ ಡಬ್ಬಿಯಲ್ಲಿ ಹಾಕಿ ಕೊಡಿ!" "ನ್ಯಾಪಕಿನ್ ಮರೆಯದೆ ಕೊಟ್ಟು ಕಳಿಸಿ" ಎಂದೆಲ್ಲ ಬರೆದು ಕಳುಹಿಸತೊಡಗಿದರು. ಓಹೋ! ಇದರಲ್ಲಿ ಮಗುವಿಗೆ ಸಂಬಂಧ ಪಟ್ಟಿದ್ದನ್ನು ಬರೆಯಬೇಕೆಂದು ಅರ್ಥೈಸಿಕೊಂಡು ನಾನು ಹೀಗೆ ಬರೆದೆ, "ಮಗುವಿಗೆ ಡೈಪರ್ ಹಾಕಿಕೊಂಡು ಇರುವ ರೂಢಿ ಇಲ್ಲ. ಈಗ ಮಗು ಶಾಲೆಗೆ ಹೊಂದಿಕೊಂಡಿರುವುದರಿಂದ, ಅವನೇ ತನ್ನ ಭಾಷೆಯಲ್ಲಿ ನೈಸರ್ಗಿಕ ಕರೆಗಳ ಬಗ್ಗೆ ಸುಳಿವು ನೀಡುತ್ತಾನಾದ್ದರಿಂದ ಡೈಪರ್ ಅವಶ್ಯವಿಲ್ಲ ಎಂದುಕೊಳ್ಳುತ್ತೇನೆ! 'ಇಶ್ಶಿ' = ಮಲ ವಿಸರ್ಜನೆ! 'ಸುಸು ' = ಮೂತ್ರ ವಿಸರ್ಜನೆ! ದಯವಿಟ್ಟು ಅವನ ಭಾಷೆಯೊಂದಿಗೆ ಸಹಕರಿಸಿ!" ನಂತರ ಅವತ್ತು ಶಾಲೆಯಿಂದ ಮಗುವನ್ನು ಕರೆತರಲು ಹೋದರೆ, ಶಾಲಸಿಬ್ಬಂದಿ, "ಮೇಡಂ, ದಯವಿಟ್ಟು, ಡೈರಿಯಲ್ಲಿ ಮಲ, ಮೂತ್ರ ಎಂದೆಲ್ಲ ಬರೆಯಬೇಡಿ! ಏನಿದ್ದರೂ ನಮಗೆ ಮೌಖಿಖವಾಗಿ ತಿಳಿಸಿ!" ಎಂದು ವಿನಂತಿಸಿದಂತೆ ಶಬ್ದಪ್ರಯೋಗ ಮಾಡಿದರೂ ಪ್ರಕಟ ಪಡಿಸಿದ ಭಾವಪ್ರಯೋಗ ಮಾತ್ರ ನನಗೆ ಎಚ್ಚರಿಕೆ ನೀಡುವಂತಿತ್ತು! ಆ ಸಂಧರ್ಭಕ್ಕೆ ನನಗೆ ನೆನಪಾಗಿದ್ದು 'ಹ್ಯಾರಿ ಪಾಟರ್' ಎಂಬ ಚಿತ್ರದಲ್ಲಿದ್ದ 'ರಿಡಲ್ಸ್ ಡೈರಿ!' ಏಕೆಂದರೆ ಈ ಡೈರಿ ನಿರ್ಜೀವವಾಗಿರದೆ ಒಬ್ಬ ಜೀವಂತ ಮನುಷ್ಯನಂತೆ ನಾವು ಬರೆದುದಕ್ಕೆ ಸ್ಪಂದಿಸುತ್ತಿತ್ತು! ಅರ್ಥಾತ್ ಉತ್ತರವಾಗಿ ತನ್ನ ಪುಟದಲ್ಲಿ ತೋರಿಸುತ್ತಿತ್ತು. ಶಾಲೆಯವರು ಇಂಥ ಡೈರಿಯನ್ನು ಕೊಟ್ಟಿದಿದ್ದರೆ ನಾನೇ ಖುದ್ದಾಗಿ ಡೈರಿಯಿಂದ ನನ್ನ ಮಗನ ಎಲ್ಲ ಚಟುವಟಿಕೆಗಳನ್ನು ಕೇಳಿ ತಿಳಿಯಬಹುದಾಗಿತ್ತು! ಬರೀ ಅಷ್ಟೇ ಅಲ್ಲದೆ, ನನಗೆ ಬೇಕಾದ ಭೂತಕಾಲದ ದಿನಾಂಕವನ್ನು ಅದರಲ್ಲಿ ನಮೂದಿಸಿದರೆ ಅವತ್ತಿನ ದಿನಕ್ಕೆ ನನ್ನನ್ನು ಕರೆದುಕೊಂಡು ಹೋಗಿ ದೃಶ್ಯಗಳನ್ನೂ ತೋರಿಸುತ್ತಿತ್ತು! ಇರಲಿ, ಈಗ ಕಲ್ಪನಾಲೋಕದಿಂದ ವಾಸ್ತವಕ್ಕೆ ಮರಳೋಣ.
ನಾನಾ ಬಗೆಯ ಡೈರಿ ಬರೆಯುವ ಪ್ರಕಾರಗಳಿದ್ದರೂ, ಅದು ವ್ಯಕ್ತಿಯ ಯೋಚನಾಲಹರಿಯನ್ನು ತಿಳಿಸುತ್ತದೆಯೇ ಹೊರತು ಪ್ರಕಾರಗಳಿಗನುಗುಣವಾಗಿ ಅದೇ ತರಹ ಯೋಚಿಸಲಾಗುವುದಿಲ್ಲ. ಹೀಗಾಗಿ ಡೈರಿ ಬರೆಯುವುದರಲ್ಲಿ ಚಿಂತನೆ ಅಥವಾ ಬರವಣಿಗೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಬಹುದು. ಒಂದು ಸಲ ನಾನು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಕಿರಿಯ ಇಂಜಿನಿಯರುಗಳಿಗೆ ತರಬೇತಿ ನೀಡುತ್ತಿದ್ದೆ. ವಿಷಯ ಹೊಸದು ಎನ್ನಿಸಿದರೆ ಟಿಪ್ಪಣಿ ಮಾಡಿಕೊಳ್ಳಲಿ ಎಂದು ಒಂದು ನೋಟ್ಬುಕ್ ಅನ್ನು ಕೂಡ ಎಲ್ಲರಿಗೂ ಕೊಟ್ಟಿದ್ದೆವು. ಆದರೆ ಒಬ್ಬ/ಳು ಅಭ್ಯರ್ಥಿಯೂ ಅದನ್ನು ತೆರೆಯುವ ಗೋಜಿಗೆ ಹೋಗಲಿಲ್ಲ. ಇವರ ನೆನಪಿನ ಶಕ್ತಿ ಸಾಮರ್ಥ್ಯದ ಬಗ್ಗೆ ಸಣ್ಣ ಸಂದೇಹ ನನಗೆ. ಯಾಕೆ ಬರಿತಿಲ್ಲ ಎಂದು ಕೇಳಿದರೆ, "ಮ್ಯಾಮ್ ನೀವು ಹೇಗಾದರೂ ppt ಶೇರ್ ಮಾಡುತ್ತೀರಲ್ಲವೇ? ಅಲ್ಲದೆ ನಮಗೆ ತಿಳಿಯದ ವಿಷಯಗಳನ್ನು ನೋಟ್ ಪ್ಯಾಡಲ್ಲಿ ದಾಖಲಿಸಿಕೊಳ್ಳುತ್ತೇವೆ !" ಎಂದರು. ಹೊಸ ಪೀಳಿಗೆಯ ಹೊಸ ಶೈಲಿ ಎಂದು ಸುಮ್ಮನಾದರೆ; ಇವರ ನೋಟ್ ಪ್ಯಾಡ್ ಕಂಪ್ಯೂಟರಿನ ಪ್ರೊಸೆಸರ್ ನಲ್ಲಿಯೇ ಉಳಿಯಿತೇ ಹೊರತು ಇವರ ತಲೆಯ ಪ್ರೊಸೆಸರ್ ಗೆ ಹೋಗಿ ಮುಟ್ಟಲೇ ಇಲ್ಲ. ಅವರಿಗೆ ತಿಳಿಹೇಳಲು ಒಂದು ಇಂಜಿನಿಯರಿಂಗ್ ಉದಾಹರಣೆ ನೀಡಿದೆ. ವಿಜ್ಞಾನದಲ್ಲಿ ಅತಿ ಪ್ರಮುಖವಾದ ಟ್ರಾನ್ಸಿಸ್ಟರ್ ನ ಆವಿಷ್ಕಾರದ ವಿಷಯದಲ್ಲಿ ಇಬ್ಬರು ವಿಜ್ಞಾನಿಗಳು ಪೇಟೆಂಟ್ ಗೋಸ್ಕರ ಅರ್ಜಿ ಸಲ್ಲಿಸಿದರೂ ವಿಲಿಯಮ್ ಷೋಕ್ಲಿ ಎಂಬಾತ ತನ್ನ ಹತ್ತು ವರ್ಷದ ಪ್ರಯೋಗಗಳನ್ನು ಹಂತಹಂತವಾಗಿ ತನ್ನ ದಿನಚರಿಯಲ್ಲಿ ನಮೂದಿಸಿದ್ದ. ಅವನ ಡೈರಿ ಸಾಕ್ಷಿಯಂತೆ ಕಾರ್ಯನಿರ್ವಹಿಸಿ ಅವನಿಗೆ ಕೀರ್ತಿ ತಂದು ಕೊಡುವಲ್ಲಿ ಮುಖ್ಯ ಪಾತ್ರ ವಹಿಸಿತು ಎಂದು ಅವರಿಗೆ ಪ್ರೋತ್ಸಾಹಿಸಿದರೆ, ಒಂದಿಬ್ಬರು ಮಾತ್ರ ವಹಿಯಲ್ಲಿ ಅವತ್ತಿನ ದಿನಾಂಕ ಬರೆದರೇ ಹೊರತು ಉಳಿದವರು ನಾನೊಬ್ಬಳು ಶಿಲಾಯುಗದ ಮಾನವಿ ಇದ್ದಂತೆ ನನ್ನನ್ನು ದುರುಗುಟ್ಟುತ್ತಿದ್ದರು!
ಕೆಲವರ ಪ್ರಕಾರ ಅವರ ಕಂಪ್ಯೂಟರೇ ಅವರ ಡೈರಿ. ಅದಕ್ಕೆ ಪಾಸ್ ವರ್ಡ್ ಇಟ್ಟರಾಯಿತು ಕೀಲಿ ಹಾಕಿದಂತೆ. ಆದರೆ ಕಂಪ್ಯೂಟರು ಹಾಳಾದರೆ? ಒಂದೊಮ್ಮೆ ಹಾಳಾಗದೇ ಇದ್ದರೂ ಕೂಡ ವಹಿಯಲ್ಲಿ ಬರೆದ ಹಾಗೆ ನಮ್ಮ ಆ ಬಾಲ್ಯದ ಬರವಣಿಗೆಯ ಸೊಗಸು, ಮೊದಲು ಬರೆದ ಶಬ್ದವನ್ನು ಹೊಡೆದು ಹಾಕಿ ನಂತರ ಬರೆದ ಶಬ್ದವನ್ನು ಓದುವಾಗ ಆ ದಿನಗಳ ನಮ್ಮ ವಿಚಾರಶೈಲಿ, ನಡುನಡುವೆ ಏನೋ ನೆನಪಾಗಿ ಅಲ್ಲಲ್ಲಿ ಚಿಕ್ಕ ಅಕ್ಷರಗಳಲ್ಲಿ ತೂರಿಸಿದ್ದ ಸಂಗತಿಗಳು, ಆಗ ಬಳಕೆಯಲ್ಲಿದ್ದ ಶಾಹಿ, ಪೆನ್ನು, ಆಗಿನ ಹಾಳೆಗಳು, ಭಾವನೆಗಳಿಗೆ ಶಬ್ದರೂಪವನ್ನು ನೀಡುವಾಗ ಬಿದ್ದ ಕಣ್ಣ ಹನಿಯಿಂದ ಶಾಹಿಯು ತನ್ನ ಸುತ್ತಮುತ್ತ ಹರಡಿದ್ದ ಗುರುತು! ಇಂಥ ಹಲವಾರು ನೆನಪುಗಳನ್ನು ಕಂಪ್ಯೂಟರ್ ನೀಡಬಲ್ಲುದೇ!? ಹೆಚ್ಚೆಂದರೆ ಬರೆದ ದಿನಾಂಕ, ವೇಳೆ, ಬಳಸಿದ ಲಿಪಿ, ಲಿಪಿಯ ಗಾತ್ರ, ಯಾವ ತರಹದ ಡಾಕ್ಯುಮೆಂಟ್ ಎಂಬ ತಾಂತ್ರಿಕ ಮಾಹಿತಿ ನೀಡಬಲ್ಲುದೇ ಹೊರತು ಭಾವನಾತ್ಮಕ ಮಾಹಿತಿಯನ್ನು ನೀಡಲು ಅಸಫಲವಾಗಿದೆ ಎಂದೇ ಹೇಳಬೇಕು. ಹೀಗಾಗಿ ಇದು ಟೈಮ್ ಮಷಿನ್ ಆಗದೆ ಹೇಳಿದ್ದನ್ನು ಕೇಳುವ ಒಂದು ಮಷಿನ್ ಎಂದಷ್ಟೇ ಹೇಳಬಹುದು. ನನ್ನ ವಿಚಾರಸರಣಿ ಇನ್ನೂ ಆಳದಲ್ಲಿ ಹುಗಿದು ಹೋಗಿತ್ತಾದರೂ ನನ್ನ ಫೋನ್ ಅಲಾರಾಂ ಹೊಡೆದುಕೊಂಡಾಗ (ಹೀಗೆ ಮುಳುಗಿಹೋಗಬಾರದೆಂದೇ ಇಟ್ಟ ಅಲಾರಾಂ!) ಮಗನ ಶಾಲೆ ಬಿಡುವ ಹೊತ್ತಾಯ್ತು ಎಂದು ಅವತ್ತಿನ ಸ್ವಚ್ಛತಾ ಕಾರ್ಯವನ್ನು ಅಲ್ಲಿಗೆ ಸ್ಥಗಿತಗೊಳಿಸಿ ಶಾಲೆಗೆ ಹೋಗಲು ಸ್ಕೂಟರ್ ಚಾಲು ಮಾಡಿದೆ.