Wednesday, January 22, 2020

ಹೊಳಲ್ಕೆರೆಯ ನರಭಕ್ಷಕ ಮತ್ತು ಇತರ ಕೆನ್ನೆತ್ ಆಂಡರ್ಸನ್ ಕಥೆಗಳು

ಪುಸ್ತಕ: ಹೊಳಲ್ಕೆರೆಯ ನರಭಕ್ಷಕ ಮತ್ತು ಇತರ ಕೆನ್ನೆತ್ ಆಂಡರ್ಸನ್ ಕಥೆಗಳು
ಲೇಖಕ: ಕೆನ್ನೆತ್ ಆಂಡರ್ಸನ್ 
ಕನ್ನಡ ಅನುವಾದ: ಸಾಕ್ಷಿ 
ಪ್ರಕಟಣೆ: ಆಕೃತಿ ಪುಸ್ತಕ 
ಬೆಲೆ: ೨೭೫/-

ಪುಸ್ತಕ ಓದುತ್ತಿರುವಾಗ ಲೇಖಕನ ಸ್ಥಾನದಲ್ಲಿ ಸ್ವತಃ  ನಾವೇ ಇದ್ದೇವೆ ಎನ್ನುವಷ್ಟು ಸ್ವಾರಸ್ಯಕರವಾಗಿ ಕೆನ್ನೆತ್ ಬರೆದಿದ್ದಾರೆ.  ದೂರದ ಬೆಟ್ಟದಡಿಯಲ್ಲಿ ಸಾಂಬಾರ್ ಒಂದರ ಎಚ್ಚರಿಕೆ ಕೂಗು ಕೇಳಿಸಿತು ಎಂದೊಡನೆ, ಲೇಖಕನ ಹಾಗೆ ನಮ್ಮ ಎದೆಯಲ್ಲೂ ಸಣ್ಣಗೆ ಡವ ಡವ! ಅಷ್ಟರಮಟ್ಟಿಗೆ ಬರವಣಿಗೆ ಪರಿಣಾಮಕಾರಿಯಾಗಿದೆ.  ನರಭಕ್ಷಕ ಸಿಗದೇ ಇದ್ದಾಗ ಅಥವಾ ಹೊಂಚು ಹಾಕಿ ಕಾಯುವಾಗಿನ ವಿವರಣೆಯನ್ನು ಓದಿಯೇ ಸವಿಯಬೇಕು. ಕಾಡಿನಲ್ಲಿ ಸಿಗುವ ಸಣ್ಣ ಪುಟ್ಟ ಅನುಭವಗಳಿಂದ ಸಿಗುವ ಅತಿ ಚಿಕ್ಕ ಸಂಗತಿಗಳಿಂದ ಹಿಡಿದು, ಅಪರೂಪದ ಮಹಶೀರ್ ಮೀನಿನ ಬಗ್ಗೆಯೂ ಸಾಕಷ್ಟು ಮಾಹಿತಿ ದಾಖಲಾಗಿದೆ. ಕಾಡನ್ನು ಪ್ರೀತಿಸುವ ಯಾರೇ ಆದರೂ ಈ ಪುಸ್ತಕವನ್ನು ಓದದೇ ಇರಲಾರರು. ಅಂತ ದಟ್ಟವಾದ ಕಾಡು ನಿಜವಾಗಿಯೂ ಬೆಂಗಳೂರಿನ, ಹಾಗು ಚಿತ್ರದುರ್ಗದ ಸಮೀಪ ಇತ್ತೇ? ಎನ್ನುವಷ್ಟು ಭೌಗೋಳಿಕ ವಿವರಣೆ, ಹಳ್ಳಿಗಳ ಚಿತ್ರಣ ಎಲ್ಲವೂ ಇದೆ. ತುಂಬಾ ಅಪರೂಪದ ಕಾಡಿನ ಡಾಕ್ಯುಮೆಂಟರಿ ಎನ್ನಬಹುದು. 

ಇನ್ನು ಸಾಕ್ಷಿ ಅವರ ಅನುವಾದದ ಬಗ್ಗೆ ಹೇಳುವುದಾದರೆ, ಅನುಭವವಿಲ್ಲದ ನರಭಕ್ಷಕನ ಬೇಟೆ ಅಥವಾ  ಕಾಡಿನ ಬಗ್ಗೆ ಇನ್ನೊಂದು ಭಾಷೆಯಲ್ಲಿ ಮೂಲದಂತೆಯೇ ಬರೆಯುವುದು ಅಷ್ಟು ಸುಲಭದ ಮಾತಲ್ಲ! (ಕೆಲ ಪತ್ರಿಕೆಗಳ ಸಂಪಾದಕರ ವಿನಂತಿಯ ಮೇರೆಗೆ ಕೆಲ ವೈಜ್ಞಾನಿಕ ಬರಹಗಳನ್ನು ಅನುವಾದಿಸಿದ ನನಗೆ ಇದರ ಗ್ರೌಂಡ್ ವರ್ಕ್ ಬಗ್ಗೆ ಅರಿವಿದೆ.) ಕೆಲವೊಂದು ಕಡೆ, ವಿಶೇಷವಾಗಿ ಡೊನಾಲ್ಡ್ ಮತ್ತು ಕೆನ್ನೆತ್ ನಡುವಿನ ಸಂಭಾಷಣೆ ಸ್ವಲ್ಪ ಗೊಂದಲಮಯವಾಗಿದ್ದು, ಹಾಗು ಒಂದು ಕಥೆಯಲ್ಲಿ ಬರುವ ನಾಯಿ ಕುಶ್ ಅನ್ನು 'ಕುಶ್ ಳು '(ಹೆಣ್ಣು ನಾಯಿಯಾದ್ದರಿಂದ ) ಎಂದು ಸಂಭೋದಿಸಿದ್ದು ಸ್ವಲ್ಪ ಮುಜುಗರವನ್ನುಂಟು ಮಾಡಿದ್ದು ಬಿಟ್ಟರೆ ಅಂತ ದೊಡ್ಡ ಲೋಪವೇನೂ ಕಂಡು ಬಂದಿಲ್ಲ. ಕೊನೆಯಲ್ಲಿ ಡೊನಾಲ್ಡ್ ಅವರ ಸಂದರ್ಶನವನ್ನು ಹಾಕಿದ್ದು 'ಓದುಗರು ಬಯಸಿದ್ದೂ ಹಾಲು ಅನ್ನ! ಲೇಖಕರು ಹೇಳಿದ್ದೂ ಹಾಲು ಅನ್ನ' ಅಂತಾಯಿತು :) 

ಸಲಹೆ:  ಇಡೀ ಪುಸ್ತಕದಲ್ಲಿ ಒಂದೇ ಒಂದು ರೇಖಾಚಿತ್ರ ಇಲ್ಲದ್ದು ಬೇಸರವನ್ನುಂಟು ಮಾಡಿತು. ಪುಸ್ತಕ ಮರುಮುದ್ರಣಗೊಂಡಲ್ಲಿ ರೇಖಾಚಿತ್ರ ಹಾಕಿ. ಹಾಗು ಅನುವಾದಕಿಯ ಇಮೇಲ್ ಐ ಡಿ ಇದ್ದರೆ ಪ್ರತಿಕ್ರಿಯಿಸಲು ಚೆನ್ನಾಗಿರುತ್ತಿತ್ತು. 

ಇಡೀ ಪುಸ್ತಕವನ್ನು ಒಂದೇ ಗುಕ್ಕಿಗೆ ಓದಬೇಕೆನಿಸಿದರೂ, ದಿನಕ್ಕೆ ಒಂದೊಂದು ಕಥೆ ಓದಿದರೆ ಹೆಚ್ಚು ಪರಿಣಾಮಕಾರಿ ಎಂದು ನನ್ನ ಅನಿಸಿಕೆ. ಕೆಲವೊಂದು ಕಥೆ ವಿಶೇಷವಾಗಿ ಅಂಬಿಲಿಗೊಳದ ದೊರೆ ಹಾಗು ಹೊಳಲ್ಕೆರೆಯ ನರಭಕ್ಷಕ ಅತಿ ರೋಮಾಂಚಿತ ಕಥೆಗಳು. ಓದಿದ ಮೇಲೆ ಇದೇ ಏಕೆ ಪುಸ್ತಕದ ಶೀರ್ಷಿಕೆಯಾಗಿದೆ ಎಂದು ಗೊತ್ತಾಗುತ್ತದೆ. 



ಧನ್ಯವಾದಗಳು 
ಅನುಪಮಾ ಕೆ ಬೆಣಚಿನಮರ್ಡಿ

No comments:

Post a Comment

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...