ತಿಂಡಿ : ಬ್ರೆಡ್ ಮಿಸ್ಸಳ್
ಊರು : ಗಡಿಂಗ್ಲಜ್ , ಮಹಾರಾಷ್ಟ್ರ
ಸ್ಥಳ : ಸಮೃದ್ಧಿ ಮಿಸ್ಸಳ್ ಹೋಟೆಲ್
ವಿಳಾಸ: ಚರ್ಚ್ ರಸ್ತೆ, ಸೆಂಟ್ ಅಂಥೋನಿ ಚರ್ಚ್ ಎದುರಿಗೆ
ಬೆಲೆ : ೪೫
ಅದೊಂದು ಸುಂದರ ಸಂಜೆ! ಆಗ ತಾನೇ ಕೊಕ್ಕರೆಗಳ ಹಿಂಡು ತಮ್ಮ ತಮ್ಮ ಗೂಡುಗಳಿಗೆ ಹಿಂದಿರುಗುತ್ತಿವೆ. ಬೀದಿ ಬದಿಯ ವ್ಯಾಪಾರಿಗಳು ತಮ್ಮ ಅಳಿದುಳಿದ ಅವತ್ತಿನ ಸರಕನ್ನು ಖಾಲಿ ಮಾಡಲು ಹವಣಿಸುತ್ತಿದ್ದಾರೆ. . ಅಲ್ಲೊಬ್ಬ ಅಜ್ಜಿ ಆಗ ತಾನೇ ಬಜ್ಜಿ ತಯಾರಿಸಲು ಹಿಟ್ಟು ಕಲಿಸಿಟ್ಟು ಎಣ್ಣೆ ಕಾಯುವುದನ್ನೇ ನೋಡುತ್ತಾ ನಿಂತಿದ್ದರೂ ಗ್ರಾಹಕರ ಆಗಮನವನ್ನೂ ನಿರೀಕ್ಷಿಸುತ್ತಿದ್ದಾಳೆ. ಕಿರಾಣಿ ಅಂಗಡಿಯವನಿಗೆ ಸಂಜೆ ಆಗಿದ್ದರ ಅರಿವೇ ಇಲ್ಲ. ಇತ್ತ ಟೈರ್ ಪಂಚರ್ ತೆಗೆಯುವ ಅಜ್ಜನಿಗೆ ಯಾವ ಧಾವಂತವೂ ಇಲ್ಲದೆ ಬೀಡಿ ಸೇದುತ್ತಾ, ನೀರಿನಲ್ಲಿ ಮುಳುಗಿಸಿದ ಟಯೆರ್ ನಿಂದ ಏಳುವ ಗುಳ್ಳೆಗಳನ್ನೇ ದಿಟ್ಟಿಸುತ್ತಿದ್ದಾನೆ. ಅಲ್ಲೊಂದು ಹದಿಹರೆಯದ ಹುಡುಗರ ಗುಂಪು ಚಹಾ ಕುಡಿಯುವ ನೆಪದಲ್ಲಿ ಬಳೆ ಅಂಗಡಿಗೆ ಬರುವ ಹುಡುಗಿಯರನ್ನು ಕದ್ದು ನೋಡುತ್ತಿದ್ದಾರೆ. ಇವೆಲ್ಲದಕ್ಕೆ ಸಾಕ್ಷಿಯಾಗುತ್ತ ನಮ್ಮ ಅವೆಂಜರ್ ಗಾಡಿಯು ಒಂದು ಮಿಸ್ಸಳ್ ಹೋಟೆಲಿನ ಮುಂದೆ ಬಂದು ನಿಂತಿತು. ಕೂಡಲೇ ಮೂಗಿಗೆ ಮಾಸ್ಕ ಧರಿಸಿ ಪೂರ್ತಿ ಖಾಲಿಯಿದ್ದ ಹೋಟೆಲಿಗೆ ನುಗ್ಗಿದೆ. ಈ ಊರಿನ ವಿಶೇಷ ತಿಂಡಿ ತಿನ್ನಲು ನನ್ನ ನಾಲಿಗೆ ಕಾಯುತ್ತಿತ್ತು. ಚೀಸ್ ಮಿಸ್ಸಳ್, ಬೆಣ್ಣೆ ಮಿಸ್ಸಳ್, ಪನೀರ್ ಮಿಸ್ಸಳ್, ತರಕಾರಿ ಮಿಸ್ಸಳ್ ಇತ್ಯಾದಿ ಇದ್ದರೂ ನಾನು ಸಾಮಾನ್ಯ ಮಿಸ್ಸಳ್ ತಿನ್ನಲು ಇಷ್ಟಪಟ್ಟೆ. ಕ್ಷಣಮಾತ್ರದಲ್ಲಿ ಒಂದು ದೊಡ್ಡ ತಟ್ಟೆಯಲ್ಲಿ ಮಿಸ್ಸಳ್ ಇರುವ ತುಸು ದೊಡ್ಡದೇ ಬಟ್ಟಲು, ಒಂದು ಚಿಕ್ಕ ಬಟ್ಟಲಿನಲ್ಲಿ ಮೊಸರು, ಬೀಟ್ ರೂಟ್ ತುಂಡುಗಳು, ಹೆಚ್ಚಿದ ಈರುಳ್ಳಿ, ನಿಂಬೆಹಣ್ಣಿನ ಹೋಳು, ಒಂದು ಚಿಕ್ಕ ಗಾಜಿನ ಗ್ಲಾಸಿನಲ್ಲಿ ಕೊಂಕಣಿ ರೀತಿಯ ಸೋಲ್ ಖಡಿ (ಮಜ್ಜಿಗೆ ಸೋಲ್ ಖಡಿ ) ಬಂತು. ಬಹುಷಃ ಇಲ್ಲಿಯ ಆಹಾರ ಹೆಚ್ಚು ಖಾರ ಮತ್ತು ಮಸಾಲೆ ಇರುವುದರಿಂದ ಸೋಲ್ ಖಡಿ ಅವಶ್ಯಕ ಅನಿಸುತ್ತೆ. ಎರಡೆರಡು ಬ್ರೆಡ್ಡು ಮಿಸ್ಸಳ್ ನಲ್ಲಿ ಅದ್ದಿ ತಿಂದು ಹತ್ತು ನಿಮಿಷವಾಗಿರಲಿಲ್ಲ, ಒಂದು ಚಿಕ್ಕ ತಾಮ್ರದ ಬಕೇಟಿನಲ್ಲಿ ಮಿಸ್ಸಳ್ ತಂದಿಟ್ಟರು! ಮತ್ತೆ ಬ್ರೆಡ್ಡು ಬೇಕೇನು ಎಂದು ಕೇಳಿದ್ದಕ್ಕೆ, ನಾಲಿಗೆ ಮೆದುಳು ಆಗಲೇ ಒಂದು ಹಂತದಲ್ಲಿ ಏನೋ ತೀರ್ಮಾನಕ್ಕೆ ಬಂದಿದ್ದು, ನನ್ನ ಅನುಮತಿಯನ್ನು ಕಾಯದೆ ಕತ್ತು ತನ್ನಷ್ಟಕ್ಕೆ ತಾನೇ ಅಲ್ಲಾಡಿ ಬ್ರೆಡ್ಡು ಬೇಕು ಎಂದಿತ್ತು! ಆ ಖಾರಕ್ಕೆ ಕಣ್ಣಲ್ಲಿ ನೀರು ತುಂಬಿ ಬಂದರೂ ತಣ್ಣನೆಯ ಸೋಲ್ ಖಡಿ ಆಗಾಗ ಸ್ವಲ್ಪ ಸಮಾಧಾನಗೈಯುತ್ತಿತ್ತು! ಮಿಸ್ಸಳ್ ಪೂರ್ತಿ ಖಾಲಿಯಾದಾಗ ಮನಸ್ಸು, ಹೊಟ್ಟೆ ತುಂಬಿತ್ತು.

No comments:
Post a Comment