Thursday, January 24, 2019

ಎದೆ ಹಾಲಿನ ಗಂಟುಗಳಾಗದಿರಲಿ ಎಚ್ಚರಿಕೆ!! ನವ ತಾಯಂದಿರಿಗೆ ಕಿವಿಮಾತು - Published in news paper





ಎದೆ ಹಾಲಿನ ಗಂಟುಗಳಾಗದಿರಲಿ ಎಚ್ಚರಿಕೆ!! ನವ ತಾಯಂದಿರಿಗೆ ಕಿವಿಮಾತು 

ಮಗುವಿಗೆ ತಾಯಿಯ ಹಾಲೇ ಅಮೃತ ಎನ್ನುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಎದೆಹಾಲಿನ ಬದಲು ಪೌಡರ್ ಹಾಲನ್ನು ಕೊಡುವ ವಾಡಿಕೆ ಅಲ್ಲಲ್ಲಿ ನೋಡುತ್ತಿದ್ದೇವೆ. ಇದಕ್ಕೆ ಕಾರಣ, ಎದೆಹಾಲಿನ ಅಲಭ್ಯತೆ, ಉದ್ಯೋಗಸ್ಥ ಮಹಿಳೆ, ದೈಹಿಕ ಸೌಂದರ್ಯದ ಬಗ್ಗೆ ಇರುವ ಕಾಳಜಿ ಹೀಗೆ ಹಲವಾರಿರಬಹುದು. ಆದರೆ, ತಾಯಿಯು ಸಶಕ್ತವಾಗಿದ್ದು, ಆದರೂ ಎದೆಹಾಲು ಉಣಿಸಲಾರದ ಸ್ಥಿತಿಗೆ ಕಾರಣವೆಂದರೆ ಎದೆಹಾಲಿನ ಗಂಟುಗಳಾಗುವುದು. ಇದು ಪೃಕೃತಿಯ ಸಾಮಾನ್ಯ ಸಂಗತಿಯಾದರೂ ಮನೆಯಲ್ಲಿ ಅನುಭವಸ್ಥರ ಮಾರ್ಗದರ್ಶನದ ಕೊರತೆಯಿಂದ ನವತಾಯಂದಿರಿಗೆ ದುಃಸ್ವಪ್ನವಾಗಿ ಕಾಡಬಹುದು. ಹೀಗಾಗಿ ಇದರ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. 
ಸಾಮಾನ್ಯ ಹೆರಿಗೆ ಆದ ಕೆಲವು ಗಂಟೆಗಳಲ್ಲಿ ಎದೆ ಹಾಲು ಬರುವುದು ಸ್ವಾಭಾವಿಕ. ಅದೂ ಮೊದಲು ಬಂದ ಹಾಲು ಅಂದರೆ ಕೊಲಸ್ಟ್ರಮ್ ಮಗುವಿಗೆ ತುಂಬ ಪೌಷ್ಟಿಕದಾಯಕ. ಇದು ಕಡ್ಡಾಯವಾಗಿ ಮಗುವಿಗೆ ಕೊಡಲೇಬೇಕಾದದ್ದು. ಆದರೆ ಸಿ-ಸೆಕ್ಷನ್ ನಿಂದಾದ ಹೆರಿಗೆಯಾದರೆ ಎದೆಹಾಲು ಬರುವುದು ಸ್ವಲ್ಪ ತಡವಾಗಬಹುದು. ಕೆಲವೊಮ್ಮೆ ೨-೩ ದಿನಗಳಾಗಬಹುದು. ಆಗ ವೈದ್ಯರು ಅಥವಾ lactation consultant ಗಳ ಸಲಹೆ ಅಗತ್ಯವಾಗುತ್ತದೆ. ಇದೆಲ್ಲಾ ಆಗುವುದು ತಾಯಿ ಮತ್ತು ಮಗು, ಇನ್ನೂ ಆಸ್ಪತ್ರೆಯಲ್ಲಿದ್ದಾಗ; ಇದಾದ ಮೇಲೆ ಅಂದರೆ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದಾರೆ ಎಂದು ಖಚಿತವಾದ ಮೇಲೆ ವೈದ್ಯರು ಇಬ್ಬರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುತ್ತಾರೆ. ಸ್ವಲ್ಪ ದಿನ ತಾಯ್ತನ ಸುಖವಾಗಿ ನಡೆಯುತ್ತದೆ. ಆದರೆ ಸುಮಾರು ಒಂದು ತಿಂಗಳಾದ ನಂತರ ತಾಯಿಗೆ ಎದೆಯ/ಮೊಲೆಯ ಮೇಲಿನ ಭಾಗದಲ್ಲಿ ಅಥವಾ ಕಂಕುಳಲ್ಲಿ ಗಂಟು ಕಾಣಿಸಿಕೊಳ್ಳಬಹುದು. ಇದು ಸರ್ವೇಸಾಮಾನ್ಯ ಕೂಡ. ಮನೆಯಲ್ಲಿ ಹಿರಿಯರು/ಅನುಭವಸ್ಥರು ಇದ್ದರೆ ಅವರಿಗೆ ಕೂಡಲೇ ಅದು ಎದೆಹಾಲಿನ ಗಂಟು ಅಂತ ಅರಿವಾಗುತ್ತದೆ.

ಎದೆಹಾಲಿನ ಗಂಟುಗಳ ಗುಣಲಕ್ಷಣಗಳು:
  • ಮೊದಲನೇ ದಿನ ಸಣ್ಣ ಗಂಟು ಕಾಣಿಸಿಕೊಳ್ಳುವುದು 
  • ಹಾಲುಣಿಸಿದಾಗ ಸಣ್ಣದಾಗುತ್ತದೆ 
  • ಅದರ ಮೇಲೆ ಒತ್ತಿದರೆ ಸಣ್ಣ ನೋವು ಕಂಡು ಬರುತ್ತದೆ. 
  • ಕಂಕುಳಲ್ಲಿ ಇದ್ದರೆ ಕೈ ಎತ್ತಿದಾಗ ಅಥವಾ ಸಣ್ಣ ಕೆಲಸ ಮಾಡುವಾಗ ನೋವಿನಿಂದಾಗಿ ಗಂಟಿನ ಅರಿವಾಗುತ್ತದೆ. 
  • ೨-೩ ದಿನ ಬಿಟ್ಟರೆ ಗಂಟಿನ ಸುತ್ತ ಕೆಂಪಾಗುತ್ತದೆ ಹಾಗೂ  ಕೀವು ತುಂಬಲು ಶುರುವಾಗುತ್ತದೆ. ಸಣ್ಣದಾಗಿ ಜ್ವರ ಕಾಣಿಸಿಕೊಳ್ಳುತ್ತದೆ. 
ಎದೆಹಾಲಿನ ಗಂಟುಗಳಾಗಲು ಕಾರಣ :
  • ಮಗುವಿನ ಅವಶ್ಯಕತೆಗಿಂತ ಹೆಚ್ಚಾದ ಎದೆಹಾಲಿನ ಉತ್ಪಾದನೆ 
  • ಮಗುವು ಮೊಲೆಯನ್ನು ಸರಿಯಾಗಿ ಕಚ್ಚಿಕೊಳ್ಳುವುದಕ್ಕೆ ಸಾಧ್ಯವಾಗದಾದಾಗ(poor latching) ಇದರಿಂದಾಗಿ ಸಾಕಷ್ಟು ಹಾಲು ಹೊರಗೆ ಬರದೇ ಅಲ್ಲೇ ಉಳಿದು ಗಂಟುಗಳಾಗುವ ಸಾಧ್ಯತೆ. 
  • ಮೊಲೆಯ ತೊಟ್ಟು ಸರಿಯಾಗಿಲ್ಲದಿದ್ದರೆ ಅಂದರೆ ಚಪ್ಪಟೆಯಾಗಿದ್ದು  (flat nipple) ಅಥವಾ sore nipple ಇದ್ದಲ್ಲಿ ಮಗುವಿಗೆ latch ಮಾಡಲು ಸಾಧ್ಯವಾಗದೆ ಹೋದಾಗ. 
  • ಮೊಲೆಯ ತೊಟ್ಟು ಸತ್ತ ಚರ್ಮ (dead skin) ದಿಂದಾಗಿ ಮುಚ್ಚಿದಾಗ ಹಾಲು ಸರಿಯಾಗಿ ಹೊರಗೆ ಬರಲು ಅಸಾಧ್ಯವಾಗುತ್ತದೆ. 
  • ಎದೆಹಾಲು ಉಣಿಸುವಿಕೆಯ ಭಂಗಿ (position) ಸರಿಯಾಗಿರದಿದ್ದರೆ ಮಗುವಿಗೆ ಸಾಕಷ್ಟು ಹಾಲು ಕುಡಿಯಲು ಅಸಾಧ್ಯವಾಗುತ್ತದೆ.
ಇಷ್ಟೆಲ್ಲಾ ತಿಳಿದುಕೊಂಡ ಮೇಲೆ; ಈ ಗಂಟುಗಳಾಗದೆ ಇರೋ ಹಾಗೆ ಏನು ಮಾಡಬೇಕೆಂದು ನೋಡೋಣ.
ಮುಂಜಾಗೃತಾ ಕ್ರಮಗಳು:
  • ಮಗುವಿಗೆ ಸರಿಯಾದ latching ಮಾಡಿ ಕೊಡಬೇಕು. 
  • ಹಾಲುಣಿಸುವ ಭಂಗಿ (position) ಸರಿಯಾಗಿರಬೇಕು. 
  • ಮಗುವು ಸಾಕಷ್ಟು ಹಾಲು ಕುಡಿಯದೆ ಇದ್ದಾಗ, ಅಧಿಕವಾದ ಹಾಲನ್ನು ಕೈಯಿಂದ ಹಿಂಡಿ ತೆಗೆಯಬೇಕು. 
  • ಗಂಟಾಗಿದ್ದು ಕಂಡ ಕೂಡಲೇ ಕೈಯಿಂದ ಗಂಟಿನ ಮೇಲೆ ನಿಧಾನವಾಗಿ ಮಸಾಜ್ ಮಾಡುತ್ತ ಮಗುವಿಗೆ ಹಾಲುಣಿಸಬೇಕು. ಆಗ ಗಂಟು ಕರಗಿ ಹೋಗುತ್ತದೆ. 
  • ಎದೆಹಾಲು ಹೆಚ್ಚಿಸುವಂಥ ಆಹಾರವನ್ನು ನಿಯಂತ್ರಿಸಬೇಕು. 
  • ಬಿಗಿಯಾದ ಉಡುಪನ್ನು ತ್ಯಜಿಸಿ. 
ಮೇಲಿನ ಎಲ್ಲ ಮುಂಜಾಗೃತೆ ವಹಿಸಿದರೂ ಗಂಟು ಕಂಡು ಬಂದಲ್ಲಿ, ಅದರ ಬೆಳವಣಿಗೆಯನ್ನು ಗಮನಿಸುತ್ತಿರಬೇಕು. ಕೆಂಪಾಗಿದ್ದು ಕಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಮಾತ್ರೆಯಿಂದ ಸರಿಹೋಗದಿದ್ದರೆ ಒಂದು ಸಣ್ಣ ಆಪರೇಷನ್ ಮೂಲಕ ಗಂಟು ತೆಗೆಯಬೇಕಾಗುತ್ತದೆ. ಅಥವಾ ಮಾತ್ರೆಗಳ ಮೂಲಕ ಎದೆಹಾಲು ಉತ್ಪಾದನೆಯನ್ನೇ ತಡೆಗಟ್ಟುತ್ತಾರೆ. ಆಗ ಮಗುವಿಗೆ ಪೌಡರ್ ಹಾಲು ಕೊಡಬೇಕಾಗುತ್ತದೆ. 
ಎದೆಹಾಲಿನ ಗಂಟುಗಳಾಗುವುದು ಸರ್ವೇಸಾಮಾನ್ಯವಾದರೂ, ಅದನ್ನು ಹತೋಟಿಯಲ್ಲಿಡುವುದು ತಾಯಿಯ ಕರ್ತವ್ಯ. ಆಗ ಮಾತ್ರ ಮಗುವಿನ ಆರೋಗ್ಯದಾಯಕ ಬೆಳವಣಿಗೆ ಆಗುತ್ತದೆ. ಕೆಲವು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಉತ್ತಮ, ಆರೋಗ್ಯದಾಯಕ ಮತ್ತು ಸಂತೋಷದಾಯಕ ತಾಯ್ತನ ನಿಮ್ಮದಾಗಲಿ ಎಂದು ಹಾರೈಸುತ್ತೇನೆ.

No comments:

Post a Comment

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...