ಪುಸ್ತಕ: ಅಘೋರಿಗಳ ಲೋಕದಲ್ಲಿ
ಲೇಖಕ: ಸಂತೋಷಕುಮಾರ್ ಮೆಹೆಂದಳೆ
ಲೇಖಕರಿಗೆ ಪುಸ್ತಕದ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರತಿಯನ್ನೇ ಇಲ್ಲಿ ಲಗತ್ತಿಸಿದ್ದೇನೆ.
ಮೆಹೆಂದಳೆ ಅವರೇ,
ಮುಂದೆ ಬುಡುಬುಡಿಕೆಯವನು ಬಂದರೇ ನಮ್ಮಂತ ಕಿರಿಯರನ್ನು ಹೊರಗೆ ಬಿಡದ ಹಿರಿಯರು/ಮಿತ್ರರು , ಈ ಪುಸ್ತಕವನ್ನು ಓದುವಾಗ ಬಯ್ದಿದ್ದೇ ಬಯ್ದಿದ್ದು! 'ನಿನಗೆಲ್ಲಿಂದ ಸಿಕ್ತು? ಬ್ಯಾರೆ ಯಾವ್ದ್ ಓದಾಕ ಸಿಗಲಿಲ್ಲೇನು? ಯಾವ ಪುಣ್ಯಾತ್ಮ ಬರೆದನೋ?' ಹೀಗೆ.. ಆದರೆ ನಿಜವಾದ ಅಘೋರಿ ಎಂದರೇನು? ಸಾತ್ವಿಕ ಅಘೋರಿಯ ಉದ್ದೇಶ ತಿಳಿಸಿ ಹೇಳಿದ ಮೇಲೆ, ಇಷ್ಟೊಂದು ಅಘೋರಿಯ ಬಗ್ಗೆ ಮಾಹಿತಿ ಹೇಗೆ ಸಿಕ್ತು ಅಂತ ಕೇಳಿ ಪುಸ್ತಕ ಓದಿದರು ಹಾಗು ಓದುತ್ತಿದ್ದಾರೆ! ಪುಸ್ತಕದ ಮೊದಲನೇ ಅಧ್ಯಾಯದಿಂದ ಕೊನೆಯ ಅನುಬಂಧಗಳ ವರೆಗೂ ಬೇಸರವಿಲ್ಲದೆ ಓದಿಸಿಕೊಂಡು ಹೋಯಿತು. ಕೆಲವೊಂದು ಆಧ್ಯತ್ಮ ವಿಷಯಗಳು ತಲೆಯ ಮೇಲಿಂದ ಹಾಯ್ದು ಹೋದರೂ ಪ್ರಾಯೋಗಿಕ ಉದಾಹರಣೆಗಳನ್ನು ನೀಡುತ್ತಾ ಸಾಗುವುದರಿಂದ ಅಷ್ಟೇ ಆಪ್ತವಾದವು. ಅದರಲ್ಲೂ ವಿಜಯ್ ಬಾಬಾ ಹೇಳುವ ಮಾತುಗಳು ಅಮೋಘ! ಅಘೋರಿ ಎಂದರೆ ನೆನಪಾಗುವುದೇ ಕುಂಭಮೇಳ. ಅದು ಬಿಟ್ಟರೆ ನನಗೆ ಅದರಲ್ಲಿ ಯಾವ ವಿಶೇಷ ಆಸಕ್ತಿಗಳು ಇದ್ದಿರಲಿಲ್ಲ ಕಾರಣ ಇದು ಬರೀ ಡೋಂಗಿತನ ಎಂದೇ ನಿರ್ಲಕ್ಷಿಸಿದ್ದೆ. ಆದರೆ ಈ ಪುಸ್ತಕ ಬೇರೊಂದು ಲೋಕವನ್ನೇ ತೆರೆದಿಟ್ಟಿತು. ಕಂಡು ಕೇಳರಿಯದ ಭೂತಗಳ ಹೆಸರಷ್ಟೇ ಅಲ್ಲದೇ ಚಿತ್ರವಿಚಿತ್ರವಾದ ಕುಂಡಲಿನಿ, ಅರತ್ಯುಂಗ ಜೊತೆಜೊತೆಗೆ ನಾಡಿ ಚಕ್ರಗಳು ಎಲ್ಲದರ ಪರಿಚಯ!
ನನ್ನ ಪ್ರಕಾರ ಇದು ಬರಿ ಪುಸ್ತಕವಾಗಿರದೆ ಒಂದು ಡಾಕ್ಯುಮೆಂಟ್ ತರಹ ಇದೆ. ಇದರಲ್ಲಿ ಸ್ವಂತ ಅನುಭವ, ಹಿಂದಿನ ಕಥಾನಕ, ವೈಜ್ಞಾನಿಕ ತರ್ಕ, ಕೆಲ ಸ್ವಂತವಾಗಿ ಒಡ್ಡಿಕೊಂಡ ಪ್ರಯೋಗಗಳು, ಅದಕ್ಕೆ ತಕ್ಕಂತೆ ಇರುವ ಫೋಟೋಗಳು (ಫೋಟೋ ಕೆಳಗಡೆ ಸಂಕ್ಷಿಪ್ತ ವಿವರಣೆ ನೀಡಿದ್ದರೆ ಓದುಗರಿಗೆ ಇನ್ನೂ ಲಾಭವಾಗುತ್ತಿತ್ತು ), ವಿಷಯಕ್ಕೆ ಸಂಬಂದಿಸಿದ ವಿಷಯಗಳ ವಿಶ್ಲೇಷಣೆ ಇತ್ಯಾದಿ! ಇಷ್ಟೆಲ್ಲಾ ಮಾಹಿತಿ ಒದಗಿಸಿಯೂ 'ಅವರವರ ನಂಬಿಕೆ ಅವರಿಗೆ ಬಿಟ್ಟಿದ್ದು ' ಎನ್ನುವ ಲೇಖಕರ ಪರಿ ವಿಶಿಷ್ಟ/ವಿಚಿತ್ರ! ಇಂತ ಸತ್ಯವನ್ನು ಪರಾಂಬರಿಸಿ ಬರೆಯುವ ಪುಸ್ತಕಗಳು ಹೆಚ್ಚು ಹೆಚ್ಚಾಗಿ ಬರಲಿ.
-Anupama K Benachinamaradi
Sept 1, 2019
No comments:
Post a Comment