Monday, January 13, 2020

ನಮ್ಮ ಫ್ಯಾಷನ್ ಸೆನ್ಸ ಪರಿಸರಕ್ಕೆ ಪೂರಕವಾಗಿದೆಯೇ?! - October issue of 'Priyanka' monthly magazine 2019.








 ನಮ್ಮ ಫ್ಯಾಷನ್ ಸೆನ್ಸ ಪರಿಸರಕ್ಕೆ ಪೂರಕವಾಗಿದೆಯೇ?!
   ಮಳೆಗಾಲ ಶುರುವಾಗುತ್ತಿದ್ದಂತೆಯೇ ರೈನ್ ಕೋಟ್, ಕೊಡೆಗಳ ಜಾಹಿರಾತುಗಳು ರಾರಾಜಿಸುವುದು ಸಹಜ. ಆದರೆ, ಇವುಗಳ ಜೊತೆಗೆ ಮಾನ್ಸೂನ್ ಫ್ಯಾಷನ್ ಸೇಲ್, ಕೂಲ್ ಅಂಡ್ ಟ್ರೆಂಡಿ ಫ್ಯಾಷನ್ ಅಂತಹ ಬಟ್ಟೆಗಳ ಬಗ್ಗೆ ಜಾಹಿರಾತುಗಳು ಇತ್ತೀಚಿಗೆ ಸಾಮಾನ್ಯವಾಗಿವೆ. ಗ್ರಾಹಕರನ್ನು ಸೆಳೆಯಲು ಹತ್ತು ಹಲವು ಕ್ಯಾಚಿ ಶಬ್ದಗಳನ್ನುಪಯೋಗಿಸಿ ಎಂಥವರನ್ನೂ ಒಂದು ಸಲ ಬಟ್ಟೆ ಖರೀದಿಸಬೇಕೆಂದು ಪ್ರಚೋದಿಸುವಂತಹ ಜಾಹಿರಾತುಗಳು!
ಆದರೆ ನಿಜವಾಗಿಯೂ ನಮಗೆ ಋತುಗಳಿಗೆ ತಕ್ಕಂತೆ ಬಟ್ಟೆ ಖರೀದಿಸುವಿಕೆಯ ಅನಿವಾರ್ಯತೆ ಇದೆಯೇ? ಒಂದು ವೇಳೆ ಇದ್ದರೂ ಕೂಡ ಅದು ಪ್ರತಿ ವರ್ಷವೂ ಖರೀದಿಸಬೇಕಾಗಿರುವಂತಹ ಅವಶ್ಯಕತೆ ಇದೆಯೇ? ಹೀಗೆ ಯೋಚಿಸುತ್ತ ಹೋದಂತೆ ಕೊನೆಗೆ ಯೋಚನಾಲಹರಿ ನಿಲ್ಲುವುದು, ಪರಿಸರ ಹಾನಿ ಎಂಬ ಘೋರ ಸತ್ಯಕ್ಕೆ. ಹೌದು, ನಮ್ಮ ಫ್ಯಾಷನ್ ನೇರವಾಗಿ ಪರಿಸರಕ್ಕೆ ಸಂಬಂಧ ಪಟ್ಟಿದೆ. ಹಾಗಂತ, ಹುಲಿ ಚರ್ಮದ ಬಟ್ಟೆ ಬಗ್ಗೆ ಚರ್ಚಿಸುತ್ತಿದ್ದೇವೆ ಎಂದು ತಿಳಿದರೆ ಅದು ತಪ್ಪು ಕಲ್ಪನೆ. ನಮ್ಮ ಫ್ಯಾಷನ್  ಸೆನ್ಸ್ ನೇರವಾಗಿ ಪರಿಸರ ಮತ್ತು ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತಿಲ್ಲ ಎಂದು ಎಷ್ಟೇ ಆತ್ಮವಿಶ್ವಾಸದಿಂದ ಬೀಗುತ್ತಿದ್ದರೂ, ಪರೋಕ್ಷವಾಗಿ ಪರಿಣಾಮ ಬೀರುತ್ತಿವೆ. ಕೆಲವು ಸೂಕ್ಷ್ಮ ಸಂಗತಿಗಳು ಹೇಗೆಲ್ಲಾ ಪರಿಸರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ನೋಡೋಣ. 
ಮೊದಲನೆಯದಾಗಿ, ತುಂಬ ಅಗ್ಗವಾಗಿ ಸಿಗುವ ಕಾಶ್ಮೀರಿ ಉಲನ್ ನಿಂದ ತಯಾರಾದ ಸ್ವೇಟರ್, ಸ್ಕ್ಯಾರ್ಪುಗಳು. ಇದು ಕುರಿ ಉಣ್ಣೆಯಿಂದ ತಯಾರಿಸಲ್ಪಡುವುದರಿಂದ ತುಂಬಾ ಮೆತ್ತಗಿನ ಮತ್ತು ಬೆಚ್ಚನೆಯ ಅನುಭವ ನೀಡುತ್ತದೆ. ಇದರಿಂದಾಗಿ ಜಾಗತಿಕ ಮಟ್ಟದಲ್ಲಿ ಅಧಿಕ ಬೇಡಿಕೆಯಿದೆ. ಈ ಹೆಚ್ಚಾದ ಬೇಡಿಕೆಯಿಂದ ಕುರಿ ಸಾಕಣೆ ದ್ವಿಗುಣಗೊಂಡಿದೆ. ಪರಿಣಾಮ, ಅತಿಯಾದ ಮೇಯುವಿಕೆಯಿಂದ ಮಣ್ಣು ಸವಕಳಿ, ವನ್ಯಜೀವಿಗಳ ಭೂ ಕಬಳಿಕೆ! ಇದರಿಂದಾಗಿ ಹಿಮ ಚಿರತೆಗಳ ಸಂಖ್ಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. 
ಎರಡನೆಯದಾಗಿ, ವಾಷಿಂಗ್ ಮಷೀನ್ ಬಳಕೆಯಿಂದ. ಪ್ಲಾಸ್ಟಿಕ್ ತ್ಯಾಜ್ಯವು ನೀರಿನಲ್ಲಿ ಸೇರಿಕೊಂಡು ಸಮುದ್ರದಲ್ಲಿ, ಪ್ಲಾಸ್ಟಿಕ್ ತ್ಯಾಜ್ಯದ ಚಿಕ್ಕ ಚಿಕ್ಕ ದ್ವೀಪಗಳೇ ಸೃಷ್ಟಿಯಾಗಿರುವ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಆದರೆ ನೀರಿನಲ್ಲಿ ಬೆರಕೆಯಾಗುವ ಮೈಕ್ರೋ ಫೈಬರ್ ಗಳ ಬಗ್ಗೆ ಗೊತ್ತಿದೆಯೇ? ನಾವು ಬಳಸುವ ಪಾಲಿಸ್ಟರ್ ಮತ್ತು ನೈಲಾನ್ ಬಟ್ಟೆಗಳನ್ನು ವಾಷಿಂಗ್ ಮಷೀನ್ ನಲ್ಲಿ ತೊಳೆದಾಗ, ಅಸಂಖ್ಯಾತ ಸೂಕ್ಷ್ಮ ಮೈಕ್ರೋ ಫೈಬರ್ ಗಳು ಬಿಡುಗಡೆಯಾಗುತ್ತವೆ. ಈ ಮೈಕ್ರೋ ಫೈಬರ್ ಗಳು ಕಡಲ ಜೀವಿಗಳಾದ ಏಡಿ, ಲಾಬ್ಸ್ಟರ್, ಮೀನು, ಕಡಲ ಆಮೆ, ಪೆಂಗ್ವಿನ್ ಗಳ ದೇಹಕ್ಕೆ ಸೇರಿಕೊಳ್ಳುತ್ತವೆ. ಇದು ಈ ಜೀವಿಗಳ ಜೀರ್ಣನಾಳವನ್ನು ನಾಶ ಪಡಿಸುತ್ತವೆ. 
ಮೂರನೆಯದಾಗಿ, ನಾವು ಬಳಸುವ ವಿಸ್ಕೋಸ್ಸ್ ಹಾಗೂ ರೇಯಾನ್ ಉಡುಪುಗಳಿಂದಾಗಿ. ಕರಗುವ ಪಲ್ಪ್ ಅಥವಾ ಬ್ಲೀಚ್ ಮಾಡಲಾದಂತಹ ಕಟ್ಟಿಗೆಯ ಪಲ್ಪ್ ಎಂಬುದು ವಿಸ್ಕೋಸ್ಸ್ ಮತ್ತು ರೇಯಾನ್ ಬಟ್ಟೆ ತಯಾರಿಸಲು ಉಪಯೋಗಿಸುವ ಬಹು ಮುಖ್ಯವಾದ ಕಚ್ಚಾವಸ್ತು. ಈ ಕಚ್ಚಾವಸ್ತುವು ಮರಗಿಡಗಳಿಂದ ತಯಾರಾಗುವುದರಿಂದ, ಇದು ನೇರವಾಗಿ ಅರಣ್ಯ ನಾಶಕ್ಕೆ ಸಂಬಂಧಿಸಿದೆ. 
ಹಾಗಂತ ಇನ್ನು ಉಳಿದಿರುವ ಕಾಟನ್ ಬಟ್ಟೆಯಷ್ಟೇ ಇದಕ್ಕೆ ಪರಿಹಾರ ಎಂದಲ್ಲಿ, ಅದೂ ಕೂಡ ತಪ್ಪಾಗುತ್ತದೆ. ಏಕೆಂದರೆ ಕಾಟನ್ ಬಟ್ಟೆ ತಯಾರಿಸಲು ಬೇಕಾಗುವ ಹತ್ತಿ ಬೆಳೆಯಲು ಅಧಿಕ ಪ್ರಮಾಣದ ನೀರು ಬೇಕಾಗುತ್ತದೆ. ಇದರಿಂದ ಅಂತರ್ಜಲ ಮಟ್ಟ ಕುಸಿಯುತ್ತದೆ.
ಮೇಲ್ಕಂಡ ಕಾರಣಗಳಲ್ಲದೇ, ಬಹುಮುಖ್ಯವಾದ ಕಾರಣವೇನೆಂದರೆ 'ಫಾಸ್ಟ್ ಫ್ಯಾಷನ್ ' ಎನ್ನುವ ತಂತ್ರ. ಅಗ್ಗದ ಮತ್ತು ಬಳಸಿ ಬಿಸಾಡುವ ತಂತ್ರ. ಇತ್ತೀಚಿಗೆ ಜವಳಿ ಮಳಿಗೆಗಳು ತಮ್ಮಲ್ಲಿರುವ ಫ್ಯಾಷನ್ ಕಲೆಕ್ಷನ್ ವನ್ನು ದ್ವಿಗುಣಗೊಳಿಸಿವೆ. ಇದರಿಂದಾಗಿ ಬಟ್ಟೆಗಳ ರಾಶಿಯೇ ಕಸವಾಗಿ ಪರಿಣಮಿಸಿದೆ. ಹಾಗೂ ಹೊಸ ಕಲೆಕ್ಷನ್ ತಯಾರಿಕೆಗೋಸ್ಕರ ನಿತ್ಯ ನೂರಾರು ಗಿಡಮರಗಳನ್ನು ಕಡಿಯಲಾಗುತ್ತಿದೆ.
ಹಾಗಾದರೆ, ಈ ಹಾನಿಯನ್ನು ತಪ್ಪಿಸಲು ನಾವು ಕೈಗೊಳ್ಳಬೇಕಾದ ಕ್ರಮಗಳನ್ನು ನೋಡೋಣ. 
  • ಹೊಸದಾಗಿ ಬಟ್ಟೆ ಖರೀದಿಸುವ ಬದಲು, ಬಂಧು ಮಿತ್ರರಲ್ಲಿ ಬಟ್ಟೆಗಳನ್ನು ಎಕ್ಸ್ಚೇಂಜ್ ಮಾಡಿಕೊಳ್ಳಿ. 
  • ಹರಿದು ಹೋದ ಬಟ್ಟೆಗಳನ್ನು ಎಸೆಯುವುದರ ಬದಲು, ದುರಸ್ತಿಗೊಳಿಸಿ ಮತ್ತಷ್ಟು ದಿನ ಉಪಯೋಗಿಸಿ. 
  • ಉತ್ತಮ ಗುಣಮಟ್ಟದ ಬಟ್ಟೆಗಳನ್ನೇ ಕೊಂಡುಕೊಳ್ಳಿ.  
  • ಸಸ್ಟೇನೇಬಲ್ ಬ್ರ್ಯಾಂಡ್ (ಪರಿಸರಕ್ಕೆ ಹಾನಿ ಮಾಡಲಾರದೆ ತಯಾರಿಸಲಾದ ಬಟ್ಟೆ )ಗಳಿಗೆ ಆದ್ಯತೆ ನೀಡಿ. 
ನಮ್ಮ ಹಿರಿಯರು ಒಂದು ಬಟ್ಟೆಯನ್ನು ಮೊದಲು ಉಡುಗೆಯಾಗಿ, ನಂತರ ಕೈ ಒರೆಸುವ ಬಟ್ಟೆಯಾಗಿ, ಆಮೇಲೆ ಅಡುಗೆ ಮನೆಯನ್ನು ಸ್ವಚ್ಛವಿಡಲು ಒರೆಸುವ ಬಟ್ಟೆಯಾಗಿ ಉಪಯೋಗಿಸುತ್ತಿದ್ದರು. ಯಾವುದನ್ನೂ ಬಳಸಿ ಬಿಸಾಡುವ ಸಂಸ್ಕೃತಿ ಇದ್ದಿರಲಿಲ್ಲ. ಇದನ್ನೇ ಈಗ 'ಗ್ರೀನ್ ಫ್ಯಾಷನ್ ' ಅಥವಾ 'ಸಸ್ಟೇನೇಬಲ್ ಫ್ಯಾಷನ್ ' ಎಂಬೆಲ್ಲಾ ಹೆಸರುಗಳಿಂದ ಕರೆಯುತ್ತಿದ್ದಾರೆ. ನಮ್ಮ ಪೂರ್ವಿಕರು ಸಹಜವಾಗಿ ರೂಢಿಸಿಕೊಂಡು ಬಂದ ಆಚರಣೆಗಳು ಪ್ರಕೃತಿಗೆ ಪೂರಕವಾಗಿಯೇ ಇರುತ್ತಿದ್ದವು. ಇದನ್ನು ಮುಂದುವರೆಸುವುದು ಮಾತ್ರ ನಮ್ಮ ಜಾಣತನದ ಮೇಲೆ ಅವಲಂಬಿತವಾಗಿದೆ. 


ಧನ್ಯವಾದಗಳು,
ಅನುಪಮಾ ಕೆ ಬೆಣಚಿನಮರ್ಡಿ

No comments:

Post a Comment

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...