Thursday, January 24, 2019

ಈ ಇರುವೆ ಹೆಸರೇ ‘ಕ್ರೇಜಿ ಆ್ಯಂಟ್(Crazy Ant)' - Published in digital magazine






ಇರುವೆ ಹೆಸರೇ ‘ಕ್ರೇಜಿ ಆ್ಯಂಟ(crazy ant)’

ನನಗೂ ಇರುವೆಗೂ ಮೊದಲಿನಿಂದಲೂ ಏನೊ ವಿಚಿತ್ರ ನಂಟು. ಚಿಕ್ಕವಳಿದ್ದಾಗ ಇರುವೆ ಗೂಡಿನ ಹತ್ತಿರ ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದೆ. ಈಗ ಮಗನ ನೆಪ ಮಾಡಿಕೊಂಡು ಅವುಗಳ ಜೊತೆ ಆಟ ಆಡ್ತೀನಿ!! ಇದೇ ಕುತೂಹಲದಿಂದ ಇವುಗಳನ್ನು ಗಮನಿಸಿದಾಗ (ಅಭ್ಯಾಸ ಮಾಡಿದಾಗ ಅಂದರೆ ಸಮಂಜಸವಾದೀತು!) ಕೆಲವು ಕುತೂಹಲ ಕೆರಳಿಸುವ ಅಂಶಗಳು ಕಂಡು ಬಂದವು. ಇರುವೆಗಳ ಬಗ್ಗೆ, ಅಂತರ್ಜಾಲದಲ್ಲಿ ಹುಡುಕಾಡಿದರೂ ಆ ಮಾಹಿತಿ ಬೇರೆ ದೇಶಗಳಲ್ಲಿ ಕಂಡು ಬರುವ ಮಾಹಿತಿಯಾಗಿರುತ್ತದೆ. ಕೀಟಗಳು ಭೌಗೋಳಿಕ ಪ್ರದೇಶಗಳ ಅನುಸಾರ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಒಂದೇ ಜಾತಿಯ ಇರುವೆ ಬೇರೆ ಬೇರೆ ಗುಣಲಕ್ಷಣಗಳನ್ನು ಆ ಪ್ರದೇಶದ ಅನುಗುಣವಾಗಿ ಹೊಂದಿರುತ್ತವೆ. ಅಂದ ಹಾಗೆ ಈ ಇರುವೆಗೆ crazy ಹೆಸರು ಬಂದಿರುವುದು ಇದರ ವರ್ತನೆಯಿಂದ!! ಸ್ವಲ್ಪ ಛೇಡಿಸಿದರೂ ಕೂಡಲೇ ಪ್ರತಿಕ್ರಿಯೆ ಬರುತ್ತದೆ!! ಅತ್ತಿಂದಿತ್ತ ಓಡಾಡುವುದು, ನೆಗೆಯುವುದು. ಇದರ ವೈಜ್ಞಾನಿಕ ಹೆಸರು Anoplolepis gracilipes.

ಭೌತಿಕ ಗುಣಲಕ್ಷಣಗಳು:

  • ಕೆಂಪು ಅಥವಾ ಕಂದು ಬಣ್ಣದ ಇರುವೆ. ಹೊಟ್ಟೆಯ ಭಾಗ ಗಾಢ ಕಂದು ಬಣ್ಣ ಆಗಿದ್ದು ಅದರ ಮೇಲೆ ಅಡ್ಡ ಗೆರೆಗಳಿರುತ್ತವೆ

  • ದೇಹಕ್ಕೆ ಹೋಲಿಸಿದರೆ ಉದ್ದವಾಗಿರುವ ೬ ಕಾಲು

  • ೧ ಇಂಚು ಉದ್ದ

ಆವಾಸಸ್ಥಾನ:

  • ತಂಪು ಅಥವಾ ಒಣ ಪ್ರದೇಶ

  • ಗೋಡೆಯ ಸಂದು,ಗಿಡದ ಬುಡ,ಹೂಕುಂಡ,ಕಸದ ತೊಟ್ಟಿ ಇತ್ಯಾದಿ

ಆಹಾರ:

ಇದು ಮಾಂಸಾಹಾರಿ ಹಾಗೂ ಸಸ್ಯಾಹಾರಿ. ತಮ್ಮ ಗೂಡು ಬಿಟ್ಟು ತುಂಬಾ ದೂರ ಆಹಾರ ಅರಸುವುದಕ್ಕೆ ಇವು ಪ್ರಸಿದ್ಧ. ಮಾಂಸಾಹಾರದಲ್ಲಿ  ಚಿಕ್ಕ ಕೀಟಗಳು, ಜಿರಳೆ,ಹಲ್ಲಿ ಇತ್ಯಾದಿ. ಸಸ್ಯಹಾರದಲ್ಲಿ ಕೆಲವು ಬೀಜಗಳು, ಅಡುಗೆ ಮನೆಯಲ್ಲಿ ಸಿಗುವ ಎಲ್ಲಾ ಬಗೆಯ ತಿಂಡಿ ತಿನಿಸುಗಳು. ಮುಖ್ಯವಾಗಿ ಇದು ಸಿಹಿತಿಂಡಿ ಪ್ರಿಯ!! ಜೇನು, ಸಕ್ಕರೆಯಿಂದ ಮಾಡಿದ ಪದಾರ್ಥಗಳು, ಸಿಹಿಯಾದ ಹಣ್ಣುಗಳು. ಒಮ್ಮೆ ಚಿಕ್ಕು ಹಣ್ಣುಗಳನ್ನು ತಂದು ಸ್ವಲ್ಪ ಹಣ್ಣಾಗಲಿ ಎಂದು ಬುಟ್ಟಿಯಲ್ಲಿ ಇಟ್ಟಿದ್ದೆವು. ಮರುದಿನ ಬೆಳಿಗ್ಗೆ ನೋಡಿದರೆ ಹಣ್ಣಿನಲ್ಲಿ ದೊಡ್ಡ ರಂದ್ರ!! ತೆಗೆದು ನೋಡಿದರೆ ಒಳಗೆಲ್ಲಾ ರಸ ಹೀರುತ್ತ ಕುಳಿತಿರುವ ಇರುವೆಗಳು!! ಮಾಮೂಲಾಗಿ ಒಂದು ಚೂರು ಅವುಗಳಿಗೆ ತೊಂದರೆ ಕೊಟ್ಟರೆ ಅತಿಯಾಗಿ ಓಡಾಡುವ ಇರುವೆಗಳು, ಸಿಹಿ ಹೀರುವಾಗ ತದ್ವಿರುದ್ಧವಾಗಿ ಪ್ರತಿಕ್ರಿಯಿಸುತ್ತವೆ!! ಅವುಗಳನ್ನು ಸಿಹಿ ಪದಾರ್ಥಗಳಿಂದ ಕಿತ್ತು ಬೇರ್ಪಡಿಸಬೇಕು! ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಈ ಸಿಹಿಯನ್ನು ಹೊಟ್ಟೆಯಲ್ಲಿ ಶೇಖರಿಸಿಕೊಂಡಿದ್ದು; ಬೇರೆ ಇರುವೆಗಳಿಗೆ ಅವಶ್ಯವೆನಿಸಿದಾಗ ಬಾಯಿ ಮುಖಾಂತರ ಹಂಚುತ್ತವೆ.

  ಈ ಇರುವೆಗಳ ದೊಡ್ಡ ಗುಣವೆಂದರೆ, ಇವು ಕುಟುಕುವುದಿಲ್ಲ ಹಾಗು ಕಚ್ಚುವ ಪ್ರಮಾಣವೂ ಕಡಿಮೆ. ಅದಕ್ಕೆ ಏನೊ ನನ್ನ ಮಗ ಪ್ರಣವ, “ಇರಿ ಇರಿ” (ಇರುವೆ ಅಂತ ಪೂರ್ತಿಯಾಗಿ ಅನ್ನಲು ಬರ್ತಿರಲಿಲ್ಲ)  ಎಂದು ಕೂಗುತ್ತಾ ಅವುಗಳನ್ನು ತಗೊಂಡು ನಿರ್ಭಯವಾಗಿ  ಬಾಯಲ್ಲಿ ಹಾಕಿಕೊಳ್ಳುತ್ತಿದ್ದ. ಇವುಗಳ ಅತಿಯಾದ ಸಂಖ್ಯೆಯೇ ಇವುಗಳ ಅಸ್ತ್ರ. ಎಲ್ಲೆಂದರಲ್ಲಿ ವೇಗವಾಗಿ ಓಡಾಡುವ ಇರುವೆಗಳನ್ನು ನೋಡಿದರೆ ಎಂಥವರಿಗಾದರೂ ಹುಚ್ಚು ಹಿಡಿಸುತ್ತದೆ.

ಈ ಅತಿಯಾದ ಸಂತಾನೋತ್ಪತ್ತಿಯ ಕಾರಣ ಇದು ಬೇರೆ ಜಾತಿಯ ಇರುವೆಗಳ ಸಮೂಹವನ್ನು ಕೂಡ ಸ್ಥಳಾಂತರಿಸುತ್ತದೆ. ಸಾಮಾನ್ಯವಾಗಿ ಒಂದು ಗೂಡಿನಲ್ಲಿ ಒಂದಕ್ಕಿಂತ ಹೆಚ್ಚು ರಾಣಿ ಇರುವೆಗಳಿದ್ದು ಗೂಡಿನ ಸಂಖ್ಯೆ ಕಡಿಮೆ ಇರುತ್ತದೆ. ಆದರೆ ಇವು ಚಿಕ್ಕ ಚಿಕ್ಕ ಸಮೂಹಗಳ ನಡುವೆ ಸಂಪರ್ಕ ಇಟ್ಟುಕೊಂಡು ದೊಡ್ಡ ಸಮೂಹವಾಗಿ (super colony) ಮಾರ್ಪಡುತ್ತವೆ. ಅಂದ ಹಾಗೆ ನಮ್ಮ ಮನೆಯಲ್ಲಿ ಇರೋದು super colony ಅಲ್ಲ. ಬೇಸಿನ್ ಕೆಳಗಡೆ ಇರುವ ಒಂದು ಸಾಮಾನ್ಯ ಇರುವೆ ಗೂಡು. ಇವು ಈಗ ನಮ್ಮ ಕುಟುಂಬ ಸದಸ್ಯರಾಗಿವೆ. ಈಗಲೂ ಕೂಡ ನನ್ನ ಮಗನಿಗೆ ಊಟ ಮಾಡಿಸಬೇಕಾದರೆ ಇವುಗಳ ಪಾಲು ಮಹತ್ವದ್ದು. ಅದರ ಕಣ್ಣು ನೋಡು ಎನ್ನುತ್ತಲೊ ಅಥವಾ ಅದು ಕೊಂಡೊಯ್ಯುವ ಆಹಾರ ಏನು ಎನ್ನುತ್ತ ಒಂದೊಂದು ತುತ್ತು ಕೆಳಗಿಳಿಯುವುದು.


2 comments:

  1. ಅತ್ಯುತ್ತಮ ಮಾಹಿತಿಗಳುಳ್ಳ ಚಿಕ್ಕದಾದ, ಚೊಕ್ಕದಾದ ಲೇಖನ

    ReplyDelete

ಪುಸ್ತಕ: ಶಾಲಭಂಜಿಕೆ

  ಪುಸ್ತಕ: ಶಾಲಭಂಜಿಕೆ ಲೇಖಕ: ಡಾ|| ಕೆ ಎನ್ ಗಣೇಶಯ್ಯ  ಬೆಲೆ: ೧೩೦ ಪ್ರಕಾಶನ: ಛಂದ ಪ್ರಕಾಶನ ಮುದ್ರಣ: ೬ ಪುಸ್ತಕವು ಸುಮಾರು ೭-೮ ಕತೆಗಳ ಸಂಕಲನವಾಗಿದೆ. ಕಡಿಮೆ ಸಂಖ್ಯೆಯ...