ರೂಮ್ ನಂಬರ್ ೧೧!!
ಹೊಸ ವರ್ಷ ಶುರುವಾಗುತ್ತಿದ್ದಂತೆ, ನನಗೆ ನನ್ನ ಹಾಸ್ಟೆಲ್ ದಿನಗಳಲ್ಲಿ ನಡೆದ ಘಟನೆಯೊಂದು ನೆನಪಾಯಿತು. ನಾವು ಆಗಷ್ಟೇ sslc ಮುಗಿಸಿ ಕಾಲೇಜಿಗೆ ಕಾಲಿಟ್ಟೆದ್ದೆವು. ಹಾಸ್ಟೆಲ್ ನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡುತ್ತಿದ್ದೆವು. ನನಗೆ ಇಬ್ಬರು ರೂಮ್ ಮೇಟ್. ಒಬ್ಬಳು ಮಾಧವಿ, ಒಳ್ಳೆಯ ಮಾತುಗಾರ್ತಿ ಅಲ್ಲದೆ ವರದಿಗಾರ್ತಿ ಕೂಡ! ಇನ್ನೊಬ್ಬಳು ಸಮರೀನ್, ಮಿತಭಾಷಿ ಆದರೆ ಅವಳ ನಿದ್ದೆಯ ಗೊರಕೆಗೆ ಹೊಂದಿಕೊಳ್ಳಲು ನನಗೆ ಮೂರು ತಿಂಗಳು ಹಿಡಿಯಿತು. ನಾನು ಹೊಸ ವರ್ಷದಿಂದ ಡಯರಿ ಬರೆಯಬೇಕೆಂದು ಪ್ರತಿಜ್ಞೆ ಮಾಡಿದ್ದೆ. ಅವತ್ತು ರಾತ್ರಿ ಡಯರಿ ಬರೆಯುತ್ತಿದ್ದಾಗ ೧೧ ಗಂಟೆ ದಾಟಿತ್ತು. ಹೊರಗಡೆ ಓಡಿದ ಹಾಗೆ ಶಬ್ದ. ಸ್ವಲ್ಪ ಹೊತ್ತಿಗೆ ಹೆಜ್ಜೆ ಸಪ್ಪಳ! ನನ್ನ ಮಂಚ ಕಿಟಕಿ ಪಕ್ಕ ಇರುವುದರಿಂದ ಹೊರಗಿನ ಸದ್ದು ಸ್ಪಷ್ಟವಾಗಿ ಕೇಳುತ್ತಿತ್ತು. ಅದನ್ನು ಮರೆತು (ಮರೆತವರ ಹಾಗೆ ನಟಿಸಿ) ಮತ್ತೆ ಬರೆಯತೊಡಗಿದೆ. ಮರುದಿನ ಮಾಧವಿ ಕೂಡ ನನ್ನ ಜೊತೆ ಇನ್ನೂ ಓದುತ್ತಿದ್ದಳು. ಪುನಃ ಅದೇ ಶಬ್ದ! ನಿನ್ನೆ ರಾತ್ರಿ ಕೂಡ ಇದೇ ತರಹ ನಡೆದಿತ್ತು ಎಂದು ಮಾಧವಿಗೆ ಹೇಳಿದೆ. ಹೇಳಿದ್ದೇ ತಡ ಮಾಧವಿ, ದೇವರಿಗೆ ಊದಿನಕಡ್ಡಿ ಹಚ್ಚಿದಳು! ಮರುದಿನ ಹಾಸ್ಟೆಲ್ ನಲ್ಲಿ ಇದೇ ಬ್ರೇಕಿಂಗ್ ನ್ಯೂಸ್! ಎಲ್ಲರೂ ತಮ್ಮ ಊಹಾಪೋಹ ಹೇಳತೊಡಗಿದರು. ಕೆಲವರು, ಯಾರೋ ಕಳ್ಳರು ಹಾಸ್ಟೆಲ್ ಕಿಟಕಿಯಲ್ಲಿ ಇಡುವ ವಸ್ತುಗಳನ್ನು ಕದಿಯಲು ಬರುತ್ತಿರಬಹುದು ಎಂದರು. ಇನ್ನು ಕೆಲವರು ಯಾರೋ ಬೇಕು ಅಂತ ಹುಡುಗಿಯರನ್ನು ಹೆದರಿಸಲು ಬರುತ್ತಿರುವರು ಎಂದರು. ಕೆಲವರು ಇನ್ನೂ ಸ್ವಲ್ಪ ಮುಂದುವರಿದು ಇದು ಯಾವುದೊ ಆತ್ಮ ಇರುವುದೆಂದು ರೂಮ್ ನಂಬರ್ ೧೧ ಕ್ಕೆ ೧೧ ಗಂಟೆಯ ನಂತರ ಕಾಟ ಕೊಡುವುದು ಎಂದರು. ಒಟ್ಟಾರೆ ನಾನು ರಾತ್ರಿ ವೇಳೆಯಲ್ಲಿ ಬರೆಯುವುದನ್ನು ಹಾಗೂ ಓದುವುದನ್ನು ನಿಲ್ಲಿಸಿದೆ. ಆದರೆ ಈ ಉಪಟಳ ಮಾತ್ರ ಒಂದು ವಾರದ ನಂತರವೂ ಮುಂದುವರಿಯಿತು. ಕೊನೆಗೆ ಹಾಸ್ಟೆಲ್ ವಾರ್ಡನ್ ಗೆ ದೂರು ಸಲ್ಲಿಸಿದೆವು. ಅವರು ಸೆಕ್ಯುರಿಟಿ ಗಾರ್ಡ್ ಗೆ ನಮ್ಮ ರೂಮಿನ ಹತ್ತಿರ ಕಟ್ಟೆಚ್ಚರ ಇಡಲು ಹೇಳಿದರು. ಆದರೂ ಕೂಡ ಎಂದಿನಂತೆ ಅದೇ ಘಟನೆ!! ಸೆಕ್ಯುರಿಟಿ ಗಾರ್ಡ್ ಮಾತ್ರ ತಾನು ಯಾರನ್ನೂ ನೋಡಲಿಲ್ಲ ಎಂದ. ವಾರ್ಡನ್, ನಮಗೆ ಬುದ್ದಿಮಾತು ಹೇಳಿ ಕಳುಹಿಸಿದರು. ನಮಗೋ ಆ ಸೆಕ್ಯುರಿಟಿ ಗಾರ್ಡ್ ಮೇಲೆ ಅನುಮಾನ. ಹಾಸ್ಟೆಲ್ ಆವರಣದಲ್ಲಿ ತೆಂಗಿನ ಗಿಡಗಳಿದ್ದು ಇವನೇ ಕಾಯಿಗಳನ್ನು ಆಯ್ದುಕೊಳ್ಳುತ್ತಾನೋ ಎಂದು. ಅದರ ಮಧ್ಯೆ ಮಾಧವಿ ಬೇರೆ ಈ ರೂಮ್ ಸಹವಾಸವೇ ಬೇಡ ಎಂದು ರೂಮ್ ಶಿಫ್ಟ್ ಮಾಡುವಳಿದ್ದಳು! ಆದರೆ ಒಂದು ದಿನ ಜೋರಾಗಿ ಮಳೆ ಸುರಿಯಿತು. ಅದರ ನಂತರ ಆ ಶಬ್ದ ಬರುವುದೇ ನಿಂತು ಹೋಯಿತು. ಸ್ವಲ್ಪ ದಿನಗಳ ನಂತರ ಆಯಾಗಳು ಊಟದ ಮೆಸ್ಸಿನಲ್ಲಿ ಮಾತನಾಡುತ್ತಿದ್ದರು; ಜೋರಾದ ಮಳೆ ಕಾರಣವೋ ಏನೋ ಒಂದು ದೊಡ್ಡ ಹೆಗ್ಗಣ ಸತ್ತು ಬಿದ್ದಿದೆ. ಅದನ್ನು ಬೇಗ ಅಲ್ಲಿಂದ ಸಾಗಿಸದಿದ್ದರೆ ರೂಮ್ ನಂಬರ್ ೧೧ ರಲ್ಲಿ ದುರ್ನಾತದಿಂದ ಕಾಲಿಡಲಾಗುವುದಿಲ್ಲ ಅಂತ. ನನಗೆ ಫಕ್ಕನೆ ಏನೋ ಹೊಳೆದಂತಾಯಿತು. ಹೋಗಿ ನನ್ನ ಇಬ್ಬರೂ ರೂಮೇಟ್ಸ್ ಗೆ ಹೇಳಿದೆ. ಇಬ್ಬರೂ ಗಹಗಹಿಸಿ ನಗತೊಡಗಿದರು. ಆದಿದ್ದಿಷ್ಟೇ , ಹೆಗ್ಗಣವು ಪ್ರತಿ ರಾತ್ರಿ ಆಹಾರ ಶೋದಿಸುತ್ತಿರುವಾಗ, ಬೆಕ್ಕೋ ನಾಯಿಯೋ ಬೆನ್ನಟ್ಟಿ ಬರುತ್ತಿತ್ತು. ಅಲ್ಲಿ ತರಗೆಲೆಗಳ ಹಾಸಿಗೆಯಿದ್ದುದರಿಂದ ಅದು ಥೇಟ್ ಮನುಷ್ಯರ ಸದ್ದಿನಂತೆ ಭಾಸವಾಗುತ್ತಿತ್ತು. ಹೆಗ್ಗಣ ಸತ್ತು ಹೋಗಿದ್ದರಿಂದ ಆ ಸದ್ದೂ ನಿಂತು ಹೋಯಿತು!!!
No comments:
Post a Comment