ಮೂರು ಗಂಟೆಗಳ ಸ್ವಾತಂತ್ರ್ಯ!
ಅಂತೂ ಇಂತೂ ನಮ್ಮ ಮನೆ ಸುತ್ತುಮುತ್ತವಿದ್ದ ಎಲ್ಲ ನರ್ಸರಿ ಶಾಲೆಗಳನ್ನೂ ಶುಲ್ಕ, ಸಿಲ್ಲ್ಯಾಬಸ್, ಮೂಲಭೂತ ಸೌಕರ್ಯಗಳು, ಆಟದ ಮೈದಾನ ಎಂಬೆಲ್ಲ ಮಾಪಕಗಳಿಂದ ಅಳೆದು ತೂಗಿ ಒಂದು ಶಾಲೆಯನ್ನು ಫೈನಲ್ ಸುತ್ತಿನಲ್ಲಿ ಗೆಲ್ಲಿಸಿ ಅದಕ್ಕೆ ಮಗುವನ್ನು ಸೇರಿಸಿದ್ದಾಯಿತು. ಎಲ್ಲ ಮಕ್ಕಳಂತೆ ಇವನೂ ಕೂಡ ಅತ್ತೂ ಕರೆದು ಶಾಲೆ ಬೇಡ ಎಂದೆಲ್ಲ ಕಿರುಚಾಡಿ ಈಗ ಶನಿವಾರ, ಭಾನುವಾರವೂ ನಾನು ಶಾಲೆಗೆ ಹೋಗ್ತೀನಿ ಅಂತ ರಂಪ ಮಾಡೋಕೂ ಶುರು ಮಾಡಿದ! ಆಶ್ಚರ್ಯವೆಂದರೆ ಶಾಲಾ ಸಿಬ್ಬಂದಿ ಕೂಡ ಇವನ ಥರವೇ ಅನಿರೀಕ್ಷಿತ ರೀತಿಯಲ್ಲಿ ತನ್ನ ನಡವಳಿಕೆ ಬದಲಾಯಿಸಿದೆ. ಶಾಲಾ ವಿಚಾರಣೆಗೆಂದು ಹೋದಾಗ ನಮಗೆ ನೀಡಿದ್ದ ರಾಜ ಮರ್ಯಾದೆ ಈಗ ಕಿಂಚಿತ್ತೂ ಇಲ್ಲ. ಮೊನ್ನೆ ಮೊನ್ನೆವರೆಗೂ ಅಂದರೆ ಅಡ್ಮಿಷನ್ನಿಗೆಂದು ನೀಡಿದ ಚೆಕ್ ಅವರ ಖಾತೆಗೆ ಜಮೆ ಆಗುವವರೆಗೂ (ಅ)ಸಹಜವಾಗಿ ವರ್ತಿಸಿದವರು (ಅಂದರೆ ನಮಗೆ ರಾಜಮರ್ಯಾದೆ ಕೊಡುವುದನ್ನು ಮುಂದುವರಿಸಿಕೊಂಡು ಬಂದ ರೀತಿ ) ಈಗ ನಮ್ಮನ್ನು ನೋಡಿಯೂ ನೋಡದ ಹಾಗೆ ವರ್ತಿಸುತ್ತಾರೆ. ಇವರಿಗೂ ಹಾಗೂ ಚುನಾವಣೆಗೆ ಸ್ಪರ್ದಿಸುವ ಅಭ್ಯರ್ಥಿಗೂ ಯಾವುದೇ ವ್ಯತ್ಯಾಸವಿಲ್ಲವೆನಿಸಿತು! ಶಿಷ್ಟಾಚಾರಕ್ಕೋಸ್ಕರ ಒಂದು ನಗೆ ಬೀರಿದರೆ ಪ್ರತಿನಗೆಯೇ ಇಲ್ಲ. ಒಂದು ಮಗುವನ್ನು ಸಂಭಾಳಿಸಲು ಹೆಣಗಾಡುವ ನಾವು ಇನ್ನು ಅಷ್ಟೊಂದು ಕೂಸುಗಳನ್ನು ನೋಡಿಕೊಳ್ಳುತ್ತ (ಮೂರು ಗಂಟೆ ಮಾತ್ರ ) ಆರೋಗ್ಯದಾಯಕ ನಗುವನ್ನೇ ಮರೆತು ಹೋಗಿರಬೇಕೆಂದು ಧನಾತ್ಮಕವಾಗಿ ಯೋಚಿಸಿದೆ. ಅದೇನೇ ಇರಲಿ, ಮುಂದಿನ ವರ್ಷ ಶಾಲಾ ಅಡ್ಮಿಷನ್ ಸಮಯದಲ್ಲಿ ಪಾಠ ಕಲಿಸುತ್ತೇನೆ ಎಂದು ನನಗೆ ನಾನೇ ಹೇಳಿಕೊಂಡೆ.
ಮಗ ಶಾಲೆಗೆ ಹೊಂದಿಕೊಳ್ಳುವ ಕಾರ್ಯಕ್ರಮವೇನೋ ಮುಗಿಯಿತು. ಈಗ ನಾನು ಮನೆಗೆ ಹೊಂದಿಕೊಳ್ಳಬೇಕಲ್ಲವೇ? ಅಂದರೆ ಇಷ್ಟು ದಿನ ಅಮ್ಮಾ ಅಮ್ಮಾ ಎನ್ನುತ್ತಾ ಹಿಂದೆ ಮುಂದೆಯೇ ಓಡಾಡಿಕೊಂಡಿದ್ದ ಮಗು ಇಲ್ಲದಾಗ ಏನೋ ಮನೆಯೆಲ್ಲಾ ಖಾಲಿ ಖಾಲಿ. ಬಿದ್ದ ವಸ್ತುಗಳು ಬಿದ್ದಲ್ಲಿಯೇ ಇವೆ. ವಿಶ್ರಾಂತಿ ಪಡೆಯುತ್ತಿದ್ದಾವೋ ಏನೋ ಅನ್ನುವಷ್ಟರ ಮಟ್ಟಿಗೆ. ಮಗ ಏನೋ ಶಾಲೆಗೆ ಸೇರಿಕೊಂಡ, ಮುಂದೆ ಇನ್ನೇನು? ಎಂಬ ಚಿಂತೆ, ಈಗಷ್ಟೆ ಎಸ್ ಎಸ್ ಎಲ್ ಸಿ , ಪಿ ಯು ಸಿ ಮುಗಿಸಿದ ವಿದ್ಯಾರ್ಥಿಗಳ ಚಿಂತೆಯಂತೆ ನನ್ನನ್ನು ಕಾಡತೊಡಗಿತು. ಮತ್ತೆ ನೌಕರಿಗೆ ಸೇರಬೇಕೇ? ಅದಕ್ಕೆ ಏನೇನೆಲ್ಲ ತಯಾರಾಗಬೇಕು? ಆದರೆ ಇವನು ಪುನಃ ಮೂರು ಗಂಟೆಗಳಲ್ಲಿ ಬಂದು ಬಿಡುತ್ತಾನಲ್ಲ, ಆಗೇನು ಮಾಡುವುದು? ಎಂದು ಗಂಭೀರವಾಗಿ ಚಿಂತಿಸುತ್ತಿರುವಾಗಲೇ ನನ್ನ ಕಿಡಿಗೇಡಿ ಮನಸ್ಸು ಜಾಗೃತವಾಗಿ 'ಸ್ವಲ್ಪ ತಾಳು ತಾಯಿ !' ಎಂದಂತಾಯಿತು. ಮತ್ತು ಗಂಭೀರ ಮನಸ್ಸನ್ನು ನನ್ನ ತಲೆಯಿಂದ ಹೊರಗೋಡಿಸಿ ಇಡೀ ಮೆದುಳು ಮನಸ್ಸನ್ನು ತನ್ನ ವಶಕ್ಕೆ ತೆಗೆದುಕೊಂಡಿತು!
ಮೂರು ವರ್ಷಗಳ ಕಾಲ ನಾನು ಸತತವಾಗಿ ಮಗು, ಕುಟುಂಬ ಎಂದೆಲ್ಲ ಎಲ್ಲೂ ಹೊರಗೆ ಹೋಗಿದ್ದೆ ಇಲ್ಲ. ಅತೀ ತುರ್ತು ಕಾರ್ಯಕ್ಕೆ ಮಾತ್ರ ಹೊರಗಡೆ ಕಾಲಿಟ್ಟಿದ್ದು ಅದೂ ಕುಟುಂಬದ ಜೊತೆಗೆ. ಈಗ ನಾನು ಒಬ್ಬಳೇ ತಿರುಗಾಡುವುದು ಅನಿವಾರ್ಯವಾದರೂ ಆ ಅನಿವಾರ್ಯತೆಯನ್ನು ನಾನು ತುಂಬಾ ಸಂತೋಷದಿಂದ ಬರಮಾಡಿಕೊಂಡೆ. ನನ್ನ ಬೈಕನ್ನು ಎಲ್ಲೆಂದರಲ್ಲಿ, ಎಷ್ಟು ಬೇಕಷ್ಟು ವೇಗದಲ್ಲಿ ಓಡಿಸಬಹುದು. ಮನಸ್ಸಿಗೆ ತೋಚಿದ್ದನ್ನು ಗೀಚುತ್ತ ಕೂರಬಹುದು. ಮೊದಲಿನ ಹಾಗೆ ಅಮ್ಮ ನನಗೂ ಪೆನ್ನು ಕೊಡು, ಪೇಪರ್ ಕೊಡು ನಾನೂ ಆರ್ಟಿಕಲ್ ಮಾಡ್ತೀನಿ ಅಂತ ನನ್ನನ್ನೇ ಅನುಕರಿಸುವ ನನ್ನ ಡಿಎನ್ಎ ಶಾಲೆಯಲ್ಲಿದೆ.
ಚಿತ್ರಮಂದಿರಕ್ಕೆ ಹೋಗಿ ಬೆಳಗಿನ ಪ್ರದರ್ಶನ ನೋಡಬಹುದು. ಆಂಗ್ಲಭಾಷೆಯ ಚಿತ್ರವಾದರೆ ಎರಡೇ ಗಂಟೆಗೆಲ್ಲ ವಾಪಸ್ಸಾಗಬಹುದು. ಅರ್ಧಕ್ಕೆ ನಿಂತ ಕಾನೂರು ಹೆಗ್ಗಡತಿ ಪುಸ್ತಕ, ಬಿ ಜಿ ಎಲ್ ಸ್ವಾಮಿ ಅವರ ಕಾಲೇಜು ತರಂಗ ಓದಬಹುದು. ಮನೆ ವರಾಂಡದಲ್ಲಿರುವ ಕುಂಬಾರ ಹುಳುವಿನ ಕಟ್ಟಡ ಕಾಮಗಾರಿ ನೋಡುತ್ತ ಕೂರಬಹುದು. ಇನ್ನೂ ಏನೇನೋ ಯೋಜನೆ.
ಮಗು ಶಾಲೆಗೆ ಚೆನ್ನಾಗಿ ಹೊಂದಿಕೊಂಡಿದೆ, ಮೂರು ಗಂಟೆಗಳ ಕಾಲ ನಿರಾತಂಕವಾಗಿ ಶಾಲೆಯಲ್ಲಿ ಇರುತ್ತಾನೆ ಎಂದು ಖಾತ್ರಿಯಾದ ಮೇಲೆ ಮೊದಲು ಮಾಡಿದ ಕೆಲಸವೇ ಪಾರ್ಲರ್ ಗೆ ನುಗ್ಗುವುದು. ಅದೂ ಪೂರ್ತಿಯಾಗಿ ನಿರುಮ್ಮಳವಾಗಿ! ಮೊದಲೆಲ್ಲ ಮನೆಯವರು ನನಗೆ ಇಂತಿಷ್ಟು ಸಮಯಾವಕಾಶ ಕೊಡುತ್ತಿದ್ದರು. ಅದೂ ಅವನು ಮಲಗಿದಾಗ. ಅಷ್ಟರಲ್ಲೇ ನನ್ನೆಲ್ಲ ಅಗತ್ಯಗಳನ್ನು ಪೂರೈಸಿಕೊಂಡು ಬಂದುಬಿಡಬೇಕು. ಮಹಿಳೆ ಎಂದು ಅನವಶ್ಯಕವಾದ ಅನುಕಂಪ ಗಿಟ್ಟಿಸಿ ಕಾರ್ಯಸಾಧನೆ ಮಾಡುವವರ ಥರ ನಾನೂ ಈ 'ಅನುಕಂಪಗಿರಿ'ಯನ್ನು ಒಂದು ಸಲವಾದರೂ ಉಪಯೋಗಿಸಿಕೊಳ್ಳಬೇಕೆಂದು ಅಂದುಕೊಂಡರೂ ಪಾರ್ಲರಿನಲ್ಲಿರುವವರೆಲ್ಲರೂ ಮಹಿಳೆಯರೇ! ಹೀಗಾಗಿ ತೆಪ್ಪಗೆ ಸರದಿ ಸಾಲಿನಲ್ಲಿ ಕೂತು ಪಾರ್ಲರಿನ ಮೆನು ನೋಡುತ್ತ ಇವನು ಶಾಲೆಗೆ ಹೋದ ಮೇಲೆ ಭವಿಷ್ಯದಲ್ಲಿ ನಾನು ಯಾವ ಯಾವ ಫೇಶಿಯಲ್ ಗಳನ್ನು ಮಾಡಿಸಿಕೊಳ್ಳಬಹುದೆಂದು ಭವಿಷ್ಯ ನೋಡುತ್ತ ಕೂರುತ್ತಿದ್ದೆ. ಕೆಲವೊಂದು ಬಾರಿ ಅಪ್ಪಿತಪ್ಪಿ ಫೋನ್ ಬಂದು ಬಿಟ್ಟರೆ "ನಿನ್ನ ಮಗ ಎದ್ದಾನ್. ಎಲ್ಲಿ ಅದಿ ಇನ್ನ? ಮುಗೀತಿಲ್ಲ?" ಹಿಮ್ಮೇಳದಲ್ಲಿ ಮಗುವಿನ ಅಳು. ಇದನ್ನು ಕೇಳಿದ ಮೇಲೂ ಯಾವ ತಾಯಿಗೆ ತಾನೇ ಅಪರಾಧಿ ಭಾವ ಕಾಡುವುದಿಲ್ಲ? ಮೇಲಾಗಿ, ಈ ಪಾರ್ಲರಿನ ಸಿಬ್ಬಂದಿ, ನಾನು ಕೂಡಲೇ ಹೋಗಬೇಕೆಂದರು, "ಆಗಲ್ಲ ಮೇಡಂ, ಒಂದು ಕೈ ಅಷ್ಟೇ ಉಳಿದಿರುವುದು. ಹೀಗೆ ಅರ್ಧಂಭರ್ಧ್ ನಿಮ್ಮನ್ನು ಹೊರಗೆ ಬಿಟ್ಟರೆ ಮಾಲೀಕಳು ಬಯ್ಯುತ್ತಾಳೆ!" ಎನ್ನುತ್ತಿದ್ದರು. ಇದನ್ನೆಲ್ಲ ಮೆಲಕು ಹಾಕುತ್ತ ನನ್ನೊಳಗೆ ನಾನು ನಗುತ್ತಿರುವುದನ್ನು ನೋಡಿ, ಮಸಾಜ್ ಮಾಡುತ್ತಿದ್ದ ನನ್ನ ಪರಿಚಾರಕಿ "ಕಚಗುಳಿ ಆಗುತ್ತಿದೆಯೇ ಮೇಡಂ? ಮಸಾಜಿಂಗ್ ಟೆಕ್ನಿಕ್ ಸ್ವಲ್ಪ ಚೇಂಜ್ ಮಾಡಲೇ?" ಎಂದು ಕೇಳಿದರೆ ನಾನು 'ಬೇಡ, ಮುಂದುವರಿಸಿ' ಎಂದಷ್ಟೇ ಹೇಳಬೇಕಾಯಿತು.
ಮಾರನೇ ದಿನ ಎಷ್ಟೋ ದಿನಗಳಿಂದ ತಲೆಯನ್ನು ಕೊರೆಯುತ್ತಿದ್ದ ಬರೆಯದೇ ಹೋದ ಲೇಖನವನ್ನು ಬರೆದಿದ್ದಾಯಿತು. ಮಗ ಮನೆಯಲ್ಲಿದ್ದಾಗ ಅವನ ಹಿಂದೆ ಮುಂದೆ ಓಡಾಡುತ್ತಲೇ ಕಾಲ ಕಳೆದುಹೋಗುತ್ತಿತ್ತು. ಅವನು ಸ್ಲೀಪ್ ಮೋಡ್ ಅಲ್ಲಿದ್ದಾಗ ಬರೆಯಬೇಕೆಂದರೆ, ನನ್ನ ವಿಚಾರಗಳೂ ಹೈಬರ್ನೇಟ್ ಮೋಡ್ ಅಲ್ಲಿ ಇರುತ್ತಿದ್ದವು! ಲೇಖನಿ ಕುಂಟುತ್ತಾ, ತೆವಳುತ್ತ ಸಾಗುತ್ತಿದ್ದುದರಿಂದ ಎಲ್ಲವೂ ಅಪೂರ್ಣ. ಈಗ ಎಲ್ಲದಕ್ಕೂ ರೀಸ್ಟಾರ್ಟ್ ಮಾಡುವ ಸಮಯ ಬಂದೊದಗಿತ್ತು. ಇನ್ನು ಕೆಲವು ದಿನ ಮನೆ ಶುದ್ಧಿಗೊಳಿಸುವ ಕಾರ್ಯಕ್ರಮ. ಎಲ್ಲ ಪುಸ್ತಕಗಳು, ಲೇಖನಗಳು, ಕೆಲವೊಂದು ಮುಖ್ಯವಾದ ದಾಖಲೆ ಪಾತ್ರಗಳು ಎಲ್ಲವನ್ನೂ ಓರಣವಾಗಿ ಜೋಡಿಸಿಟ್ಟುಕೊಳ್ಳುವ ಕೆಲಸ. ಗತಕಾಲದಲ್ಲಿ ಕಳೆದು ಹೋದ ಡೆಬಿಟ್ ಕಾರ್ಡ್ ಈಗ ಪ್ರತ್ಯಕ್ಷವಾಗಿ, ಸುಖಾ ಸುಮ್ಮನೆ ಮತ್ತೊಂದಕ್ಕೆ ಅರ್ಜಿ ಹಾಕಿದೆವಲ್ಲ ಎಂದೆನಿಸಿತು. ಜೀರಿಗೆ ಪೊಟ್ಟಣ ಟಿವಿ ಟೇಬಲ್ ನಲ್ಲಿ ಸಿಕ್ಕಿ ಜೀರಿಗೆಗೆ ಪರದಾಡಿದ ದಿನ ನೆನಪಾಯಿತು. ಸೋಫಾ ಕುಶನ್ ಕೆಳಗೆ ನನ್ನ ಉಗುರಿನ ಬಣ್ಣ ಒರೆಸುವ ದ್ರವದ ಬಾಟಲಿಯ ಮುಚ್ಚಳ ಸಿಕ್ಕು ಅದನ್ನು ವಾಪಸ್ ಅದೇ ಬಾಟ್ಲಿಗೆ ಹಾಕಲು ಹೋದರೆ ಆ ಬಾಟ್ಲಿಯಲ್ಲಿರುವ ಅಸಿಟೋನ್ ದ್ರವ ಆಗಲೇ ಹಾರಿ ಹೋಗಿಯಾಗಿತ್ತು! ಹೀಗೆ ಹತ್ತು ಹಲವಾರು. ಕಳೆದು ಹೋದ ಕಪಾಟಿನ ಕೀಲಿ ಕೈ ಇನ್ವರ್ಟರ್ ಕೆಳಗೆ ಸಿಕ್ಕಾಗಲಂತೂ ಕೀಲಿಯನ್ನು ಕೊರೆಯಲು ಪಟ್ಟ ಸಾಹಸ ನೆನಪಾಗಿ, ನನ್ನ ಮಗನೇ ಅತೀ ಕೀಟಲೆಯೋ ಅಥವಾ ನಾನು ಸೋಮಾರಿಯೋ ಎಂಬ ಗೊಂದಲ ಶುರುವಾಯಿತು. ಒಟ್ಟಿನಲ್ಲಿ ಈ ಶುದ್ಧಿ ಕಾರ್ಯ ಪಶ್ಚತ್ತಾಪದ ಅವಧಿಯಾಗಿ ಮಾರ್ಪಟ್ಟಿದ್ದಂತೂ ನಿಜ!
ಈ ಪಶ್ಚತ್ತಾಪದಿಂದ ಮುಕ್ತಿ ಹೊಂದಲು ಶಾಪ್ಪಿಂಗ್ ಮಾಡೋಣವೆಂದು ಬಟ್ಟೆ ಅಂಗಡಿಗೆ ಹೋದರೆ, ನಾನು ಮಕ್ಕಳ ಸೆಕ್ಷನ್ ನಲ್ಲಿ ಸಮಯ ಕಳೆದಿದ್ದೇ ಹೆಚ್ಚು. ನಾನು ನನ್ನ ಶಾಪ್ಪಿಂಗ್ ಗೆ ಬಂದಿದ್ದೇನೆಂದು ನೆನಪಿಸಿಕೊಂಡು ಶಾಪ್ಪಿಂಗ್ ಮಾಡಲು ಹವಣಿಸಿದರೆ, ಇದು ನನಗೆ ಹೇಗೆ ಕಾಣುತ್ತಿದೆ ಎಂದು ವರ್ಣಿಸಲು ನನ್ನ ಮಗ ಇಲ್ಲವಲ್ಲ ಎಂದು ಒಂದು ಕ್ಷಣ ಶಾಪಿಂಗ್ ನೀರಸವೆನಿಸಿತು. ಆದರೆ ಮಗ ಮಾಡುತ್ತಿದ್ದ ತರಲೆಗಳೇನೂ ನೆನಪಿಗೆ ಬರದೇ ಇರಲಿಲ್ಲ. ನಾನು ಬಟ್ಟೆ ನೋಡುವಾಗ ತಾನು ಒಂದು ಅಂಗಿಯನ್ನು ಹಿಡಿದುಕೊಂಡು ಅದನ್ನು ತನಗೆ ತಾನೇ ಅಳತೆಗಾಗಿ ಹಿಡಿದುಕೊಂಡು 'ಟೈಟ್, ಟೈಟ್ ' ಎನ್ನುತ್ತಾ ನನ್ನ ಹಿಂದಿಂದೆನೇ ಸುತ್ತುವಾಗ ನಗುತ್ತಿದ್ದ ಅಲ್ಲಿನ ಸಿಬ್ಬಂದಿಗಳು; ಈತ ಶೆಲ್ಫ್ ನಲ್ಲಿರುವ ಬಟ್ಟೆಗಳನ್ನು ಬೀಳಿಸುತ್ತ ಓಡುತ್ತಿರುವಾಗ ಮುಖ ಕೆಂಪಗೆ ಮಾಡಿ, 'ಮೇಡಂ, ನಿಮ್ಮ ಮಗ, ' ಎಂದು ಹಲ್ಲು ಕಡಿಯುತ್ತಿದ್ದರು. ಎತ್ತಿಡಲು ಸಹಾಯ ಮಾಡಹೊರಟರೆ 'ಪ್ಲೀಸ್, .. ಇಟ್ಸ್ ಓಕೆ ' ಎಂದು ಸಿಟ್ಟಿನಿಂದಲೇ ವಿನಯದ ಮಾತುಗಳನ್ನಾಡುತ್ತಿದ್ದರು! ಮನಸ್ಸಿನಲ್ಲಿ, "ನಿನ್ನ ಮಗನನ್ನು ನೀನು ನಿಯಂತ್ರಿಸು, ಸಾಕು!" ಎಂದು ಅಂದುಕೊಳ್ಳುತ್ತಿದ್ದರೋ ಏನೋ.
ಇದನ್ನೆಲ್ಲಾ ಬಿಟ್ಟು ಆನ್ಲೈನ್ ಶಾಪಿಂಗ್ ಮಾಡಲು ಮೊಬೈಲಿನಲ್ಲಿ ಕಣ್ಣ 'ನೆಟ್ಟು' ಕುಳಿತೆ. ಅದು ನೋಡು, ಇದು ನೋಡು ಎಂದು ಕ್ಲಿಕ್ಕಿಸುತ್ತ, ಮೇಲಾಗಿ 'ಈ ಪ್ರೊಡಕ್ಟ್ ಅನ್ನು ನೋಡಿದವರು, ಇದನ್ನೂ ನೋಡಿದ್ದಾರೆ' ಎಂದು ಮತ್ತಷ್ಟು ಸಲಹೆಗಳನ್ನು ನೀಡುವ ಮೊಬೈಲ್ ಅಪ್ಪ್ಲಿಕೇಷನ್ನುಗಳು, ರೆಕಮಂಡೇಡ್ ಎಂದು ಸಂದೇಶ ನೀಡುವ ಅಪ್ಲಿಕೇಷನ್ನುಗಳು, ಇನ್ನು ಸ್ವಲ್ಪ ಶಾಪಿಂಗ್ ಮಾಡಿದರೆ ಡಿಸ್ಕೌಂಟ್ ಸಿಗುತ್ತದೆ ಎನ್ನುವ ವ್ಯವಹಾರ ಕುತಂತ್ರಗಳಿಂದ ಇಷ್ಟು ದಿನ ನಾನು ಪಾರಾಗಿದ್ದನ್ನು ನೆನೆಸಿಕೊಂಡರೆ ಮಗನ ಬಗ್ಗೆ ಹೆಮ್ಮೆ ಎನಿಸಿದ್ದು ಸುಳ್ಳಲ್ಲ! ಇನ್ನು ಮೇಲೆ ಸ್ವಲ್ಪ ನನಗೂ ಹಾಗು ಮನೆಗೂ ಇಬ್ಬರಿಗೂ ಉಪಕಾರಿಯಾಗಲಿ ಎಂದು ಮನೆ ದಿನಸಿ ತರಲೆಂದು ಅಂಗಡಿಗೆ ಹೋಗಿ, ಅಲ್ಲಿ ಮನೆಗೆ ಅವಶ್ಯವಿರುವ ವಸ್ತುಗಳಿಗಿಂತಲೂ; ಆಫರ್ ಇದ್ದಿದ್ದು, ಡಿಸ್ಕೌಂಟ್ ಇದ್ದಿದ್ದು ಎಂದು ಬೇಡದ ವಸ್ತುಗಳನ್ನು ತಂದಿದ್ದೇ ಹೆಚ್ಚು! ಮನೆ ಅಲಂಕಾರ ಎಂದು ಮಾರವಾಡಿ ಅಂಗಡಿಗೆ ಹೋಗಿ ಆತನಿಗೆ ಕನ್ನಡ ಬಾರದ್ದಕ್ಕೆ ಜಗಳವಾಡಿ ಆ ಅಂಗಡಿಗೆ ಹೋಗುವುದನ್ನೇ ಬಿಟ್ಟಿದ್ದೂ ಆಯಿತು! ಇಷ್ಟು ದಿನ ಮಗುವಿಗೆ ಬಿಸಿಲು, ಧೂಳು, ಅಲ್ಲದೆ ಟ್ರಾಫಿಕ್ ನಲ್ಲಿ ಕಿರಿಕಿರಿ ಎಂದು ನನ್ನೆಲ್ಲ ತಿರುಗಾಟವನ್ನು ಸೀಮಿತಗೊಳಿಸಿದ್ದ ನಾನು, ಈಗ ದೇವರ ಹರಕೆಗೆ ಬಿಟ್ಟ ರಾಸು ಆಗಿದ್ದೆ! ಎಲ್ಲೆಂದರಲ್ಲಿ ಅಡ್ಡಾಡಬಹುದು. ಎಲ್ಲ ಸ್ನೇಹಿತೆಯರ ಮನೆಗೂ ಭೇಟಿ ಕೊಟ್ಟಿದ್ದಾಯಿತು, ಬ್ಯಾಂಕು ಕಚೇರಿ ಕೆಲಸ ಆಯಿತು. ಕೊನೆ ಕೊನೆಗೆ ಕರಕುಶಲ ಪ್ರದರ್ಶನ, ಮಾವು ಮೇಳ, ಪುಸ್ತಕ ಮೇಳ ಎಲ್ಲದಕ್ಕೂ ಭೇಟಿ ಕೊಟ್ಟಿದ್ದಾಯಿತು. ಒಟ್ಟಿನಲ್ಲಿ ಕೇವಲ, ನೂರು ಅಂಕಗಳ ಉತ್ತರ ಪತ್ರಿಕೆ ಬರೆಯುವಾಗ ಇದ್ದ ಮೂರು ಗಂಟೆಯ ಮೌಲ್ಯ ಈಗಿನ ಸಂಧರ್ಭಕ್ಕೆ ಇನ್ನೂ ಹೆಚ್ಚು ಅಪ್ಯಾಯಮಾನವಾಗಿ ಕಂಡಿತು ! ಇದರ (ಅಡ್ಡ)ಪರಿಣಾಮ ನನ್ನ ಜಂಟಿಖಾತೆಯ ಮತ್ತೊಬ್ಬ ಖಾತೆದಾರರಾದ ನನ್ನ ಪತಿಗೆ ತಲೆನೋವು ತಂದಿತು. ನಾನು ಪ್ರತಿ ಸಲ ಕಾರ್ಡ್ ಸ್ವಾಪ್ ಮಾಡಿದಾಗಲೂ ಸ್ವಯಂಚಾಲಿತ ಸಂದೇಶವೊಂದು ಅವರಿಗೆ ರವಾನೆಯಾಗಿ, ಪ್ರತಿ ಬಾರಿಯೂ ಅವರ ಹೃದಯಬಡಿತ ಏರುಪೇರಾಗುತ್ತಿತ್ತು. ಮಗನನ್ನು ಯಾಕಾದ್ರೂ ಶಾಲೆಗೆ ಕಳ್ಸಿತೀದಿವಪ್ಪಾ ಎಂದು ತಲೆ ಮೇಲೆ ಕೈ ಹೊತ್ತು ಕುಳಿತ ಪತಿಯನ್ನೇ ನನ್ನ ಮನಸ್ಸಿನಲ್ಲಿ ಕಲ್ಪಿಸಿಕೊಂಡು ನಗುತ್ತಾ ನಾನು ಹೊಸ ಹುಮ್ಮಸ್ಸಿನಿಂದ ಶಾಲೆಯಿಂದ ಮಗುವನ್ನು ಕರೆತರಲು ಹೊರಡುತ್ತಿದ್ದೆ. ಮಗ ಶಾಲೆಯಲ್ಲಿ ಏನೆಲ್ಲಾ ಮಾಡಿದ ಎಂದು ನನಗೆ ಹೇಳಲು ಕಾತುರ ಹಾಗು ಉತ್ಸಾಹದಿಂದ ಪುಟಿಯುತ್ತ ಬಂದರೆ, ನಾನು ಈ ಮೂರು ಘಂಟೆಗಳ ಕಾಲ ಏನೆಲ್ಲಾ ಮಾಡಿದೆ ಎಂದು ಹೇಳಲು ಅಷ್ಟೇ ಕಾತುರದಿಂದ ಶಾಲೆಯ ಹೊರಬಾಗಿಲಿನಲ್ಲಿ ಕಾಯುತ್ತಿದ್ದೆ!
I read the blog ri.. Its very nice. Each sentence truly remind the same situations to all the mommies. Thanks for the info. Many more from you..
ReplyDeleteThank you :)
Delete